ಬಾಗೇಪಲ್ಲಿ: ಸರ್ಕಾರಿ ಅನುದಾನ ಖರ್ಚು ಮಾಡಿದರೆ ಅದಕ್ಕೆ ಸಮರ್ಪಕ ಲೆಕ್ಕ ಮತ್ತು ದಾಖಲೆ ನಿರ್ವಹಿಸಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದೆ ಹಣ ದುರ್ಬಳಕೆ ಮಾಡಿದ್ದೀರಾ ಅಲ್ಲ ನಿಮಗೆ ಪ್ರಶ್ನೆ ಮಾಡುವ ಅಧಿಕಾರಿಗಳು ಇಲ್ಲವೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ವಿ.ಧನುರೇಣುಕಾ ತಾಪಂ ಇಒ ಮಂಜುನಾಥರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ತಾಲೂಕಿನ ಗೊರ್ತಪಲ್ಲಿ ಗ್ರಾಪಂನ 2020-21 ಮತ್ತು 2021-22 ನೇ ಸಾಲಿನಲ್ಲಿ ಬಿಡುಗಡೆಗೊಂಡಿ ರುವ 65 ಲಕ್ಷ ರೂ. ಅನುದಾನದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದ್ದು, ಗೊರ್ತಪಲ್ಲಿ ಗ್ರಾಪಂ ಪಿಡಿಒ ವೆಂಕಟರಮಣಪ್ಪರನ್ನು ಸೇವೆಯಿಂದ ಅಮಾನತ್ತು ಗೊಳಿಸಿ ಅಧಿಕಾರಿಗಳ ತಂಡ ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ. 2020-21 ನೇ ಸಾಲಿನಲ್ಲಿ 47 ಕಾಮಗಾರಿಗಳಿಗೆ, 2021-22 ನೇ ಸಾಲಿನಲ್ಲಿ 43 ಕಾಮಗಾರಿಗಳಿಗೆ ಕ್ರೀಯಾಯೋಜನೆ ಪಟ್ಟಿ ಸಿದ್ಧಪಡಿಸಿ ತಾಪಂ- ಜಿಪಂನಲ್ಲಿ ತಾಂತ್ರಿಕ ಅನುಮೋದನೆ ಪಡೆದು ಅನುದಾನ ಡ್ರಾ ಮಾಡಲಾಗಿದೆ.
ಸರ್ಕಾರಿ ಹಣ ಡ್ರಾ ಮಾಡಿರುವ ಬಗ್ಗೆ ತನಿಖಾ ಅಧಿಕಾರಿಗಳ ತಂಡಕ್ಕೆ ಸಲ್ಲಿಸಿರುವ ಬ್ಯಾಂಕ್ ದಾಖಲೆಗಳಂತೆ ಗ್ರಾಪಂ ಕಚೇರಿಯಲ್ಲಿ ಕಡತಗಳು ಇಲ್ಲ, ಇನ್ನು ಕೆಲವು ಕಾಮಗಾರಿಗಳ ಬಿಲ್ ಪಾರಂ ಗೂ ಅನುಮೋದನೆ ಪಟ್ಟಿಗೂ ತಾಳೆ ಅಗುತ್ತಿಲ್ಲ, ಬಹುತೇಖ ಕಡತಗಳಲ್ಲಿ ಕಾಮಗಾರಿಗಳು ಮಾಡಿರುವ ಬಗ್ಗೆ ಪೋಟೊಗಳು ಇಲ್ಲದ ಕಾರಣ ಕುಪಿತಗೊಂಡ ತನಿಖಾಧಿಕಾರಿ ಸ್ಥಳದಲ್ಲೆ ತಾಪಂ ಇಒ ಬಗ್ಗೆ ಹರಿಹಾಯ್ದರು.
ಗೊರ್ತಪಲ್ಲಿ ಗ್ರಾಪಂನ ಕೇಂದ್ರ ಸ್ಥಾನ, ಸದ್ದಪಲ್ಲಿ, ದೊನಕೊಂಡ, ಜೀಕವಾಂಡ್ಲಪಲ್ಲಿ ಗ್ರಾಮಗಳಿಗೆ ಜಿಪಂ ಮುಖ್ಯ ಯೋಜನಾಧಿಕಾರಿ ವಿ.ಧನು ರೇಣುಕಾ ತಂಡ ಭೇಟಿ ನೀಡಿ ಗ್ರಾಮಗಳಲ್ಲಿ ನಡೆದಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಪರಿಶೀಲನೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮುಕಿ ನಡೆದಾಗ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಾಧಾನಗೊಳಿಸಿದರು. ಜಿಪಂ ಉಪ ವಿಭಾಗದ ಎಇಇ ವಿಜಯಕುಮಾರ್, ಜೆ.ಇ ಮಹೇಶ್, ಪಿಡಿಒ ನಾರಾಯಣಸ್ವಾಮಿ, ಕರವಸೂಲಿಗಾರ ಕೃಷ್ಣಪ್ಪ ಸೇರಿದಂತೆ ಪಕ್ಷದ ಕಾರ್ಯಕರ್ತರಿದ್ದರು.