Advertisement

Moodbidre: ಅಂಚೆ ಕಚೇರಿಯಲ್ಲಿ ಹಣ ದುರ್ಬಳಕೆ: ಅಂಚೆ ಪಾಲಕ ಕೆಲಸದಿಂದ ವಜಾ

01:08 AM Jan 12, 2024 | Team Udayavani |

ಮೂಡುಬಿದಿರೆ: ಕಡಂದಲೆ ಗ್ರಾಮೀಣ ಅಂಚೆ ಕಚೇರಿಯಲ್ಲಿ ಗ್ರಾಹಕರಿಂದ ಉಳಿತಾಯ ಖಾತೆ, ವಿಮಾ ಪಾಲಿಸಿಗಳ ಹೆಸರಿನಲ್ಲಿ ಸಂಗ್ರಹಿಸಲಾದ ಸುಮಾರು 13.50 ಲಕ್ಷ ರೂ. ಹಣ ದುರ್ಬಳಕೆ ಮಾಡಿದ ಆರೋಪದಲ್ಲಿ ಅಂಚೆ ಪಾಲಕ ಮೂಡುಬಿದಿರೆ ಲಾಡಿ ನಿವಾಸಿ ಅಶೋಕ್‌ ವಿರುದ್ಧ ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಬುಧವಾರ ವಂಚನೆ ಪ್ರಕರಣ ದಾಖಲಾಗಿದೆ.
ಇಲಾಖೆಯು ಆತನನ್ನು ಕೆಲಸದಿಂದ ಅಮಾನತುಗೊಳಿಸಿ, ವಿಚಾರಣೆ ನಡೆಸಿದ್ದು, ಒಂದು ವರ್ಷದ ಹಿಂದೆಯೇ ಕೆಲಸದಿಂದ ವಜಾಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ.

Advertisement

2010ರಿಂದ 2021ರ ಅವಧಿಯಲ್ಲಿ ಈ ವಂಚನೆ ನಡೆದಿದೆ. ಅಶೋಕ್‌ ಸುಮಾರು 22 ಅಂಚೆ ಗ್ರಾಹಕರ ಉಳಿತಾಯ ಖಾತೆ ಮತ್ತು 4 ಗ್ರಾಹಕರ ವಿವಿಧ ವಿಮಾ ಪಾಲಿಸಿಗಳಿಗಾಗಿ ಗ್ರಾಹಕರು ಅಂಚೆ ಇಲಾಖೆಗೆ ಕಟ್ಟಿದ್ದ ಹಣವನ್ನು ಅವರ ಪಾಸ್‌ ಪುಸ್ತಕದಲ್ಲಿ ಮಾತ್ರ ನಮೂದಿಸುತ್ತಿದ್ದು ಇಲಾಖೆಯ ದಾಖಲಾತಿಯಲ್ಲಿ ಕಾಣಿಸದೆ ಇದ್ದ ಆರೋಪವಿದೆ. ಗ್ರಾಹಕರಿಂದ ಸಂಗ್ರಹವಾಗುತ್ತಿದ್ದ ಹಣವನ್ನು ಹತ್ತಿರದ ಮಿತ್ತಬೈಲು ಉಪ ಅಂಚೆ ಕಚೇರಿಗೆ ದಿನಂಪ್ರತಿ ನೀಡಬೇಕಾಗಿತ್ತು. ಆದರೆ ಆರೋಪಿ ಕೆಲವು ಗ್ರಾಹಕರ ಹಣವನ್ನು ಇಲಾಖೆಯ ಲೆಕ್ಕಕ್ಕೆ ತೋರಿಸದೆ ಉಳಿದ ಹಣವನ್ನು ಮಾತ್ರ ಮಿತ್ತಬೈಲು ಅಂಚೆ ಕಚೇರಿಗೆ ನೀಡುತ್ತಿದ್ದ ಎನ್ನಲಾಗಿದೆ.

ಬಂಟ್ವಾಳ ಉಪವಿಭಾಗದ ಸಹಾಯಕ ಸೂಪರಿಂಟೆಂಡೆಂಟ್‌ ಆಗಿದ್ದ ಲೋಕನಾಥ್‌ ಅವರಿಗೆ ಈ ವಂಚನೆ ಪ್ರಕರಣ ಗಮನಕ್ಕೆ ಬಂದು, ಅವರು ಈ ಪ್ರಕರಣವನ್ನು ಬಯಲಿಗೆ ತಂದು ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರಿಗೆ ತನಿಖಾ ವರದಿಯನ್ನು ಸಲ್ಲಿಸಿದ್ದರು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಬಂಟ್ವಾಳ ಉಪವಿಭಾಗದ ಈಗಿನ ಸಹಾಯಕ ಸೂಪರಿಂಟೆಂಡೆಂಟ್‌ ಪ್ರಹ್ಲಾದ ನಾಯಕ್‌ ಆರೋಪಿ ಅಶೋಕ್‌ ವಿರುದ್ಧ ಬುಧವಾರ ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದಾರೆ.

8 ಲಕ್ಷ ರೂ. ವಸೂಲಿ
ಅಂಚೆ ಇಲಾಖೆಯು ಗ್ರಾಹಕರಿಗೆ ಸಲ್ಲಿಸಬೇಕಾದ ಮೊತ್ತವನ್ನು ಹಿಂದಿರು ಗಿಸಿದೆ. ಆರೋಪಿಯಿಂದ ಈಗಾ ಗಲೇ 8 ಲಕ್ಷ ರೂ. ವಸೂಲಿ ಮಾಡ ಲಾಗಿದೆ. ಬಡ್ಡಿ ಸಹಿತ ಉಳಿದ ಸುಮಾರು 8 ಲಕ್ಷದಷ್ಟು ಮೊತ್ತವನ್ನು ಆರೋಪಿಯಿಂದ ವಸೂಲು ಮಾಡಲು ಬಾಕಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next