Advertisement

MIS, PPF, SCSS, NSC, KVP, ಸುಕನ್ಯಾ ಸಮೃದ್ಧಿ : ಏನಿದರ ಮರ್ಮ

09:12 AM Apr 09, 2019 | Sathish malya |

ಉಳಿತಾಯದ ಪ್ರವೃತ್ತಿ ಸಾಮಾನ್ಯವಾಗಿ ಮತ್ತು ಸಹಜವಾಗಿ ಎಲ್ಲರಲ್ಲೂ ಸುಪ್ತವಾಗಿ ಇರುತ್ತದೆ. ಆದರೆ ಅದನ್ನು ಬಡಿದೇಳಿಸುವ ಅಗತ್ಯ ಇರುತ್ತದೆ.

Advertisement

ಏಕೆಂದರೆ ಹಣವನ್ನು ಉಳಿಸುವುದಕ್ಕಿಂತ ಖರ್ಚು ಮಾಡಿ ಮುಗಿಸುವ ಪ್ರವೃತ್ತಿಯೇ ಜನರಲ್ಲಿ ಸಹಜವಾಗಿಯೇ ಹೆಚ್ಚಿರುತ್ತದೆ. ನಾವು ಹಣ ಉಳಿಸಿದರೆ ಹಣ ನಮ್ಮನ್ನು ಉಳಿಸುತ್ತದೆ ಎಂಬ ಮಾತು ಸದಾ ಸ್ಮರಣೀಯ. ಲಕ್ಷ್ಮೀ ದೇವಿ ತನಗೆ ಎಲ್ಲಿ ಗೌರವಾದರ ಸಿಗುವುದೋ ಅಲ್ಲೇ ನೆಲೆಸಿರುತ್ತಾಳೆ.

ಲಕ್ಷೀ ಎಂದರೆ ಧನಕನಕ, ಸಿರಿ ಸಂಪತ್ತು, ಸಮೃದ್ಧಿ. ಆದುದರಿಂದ ಯಾರು ಲಕ್ಷ್ಮೀ ದೇವಿಯನ್ನು ತಮ್ಮ ಮನೆಯಲ್ಲಿ ಗೌರವಾದರದಿಂದ ಉಳಿಸಿಕೊಳ್ಳುತ್ತಾರೋ ಅವರ ಮನೆಯಲ್ಲೇ ಆಕೆ ಸದಾಕಾಲ ನೆಲೆಸಿರುತ್ತಾಳೆ ಎಂಬ ಭಾವನೆ, ನಂಬಿಕೆ ಜನರಲ್ಲಿದೆ.

ಆದುದರಿಂದ ಗಳಿಸಿದ ಹಣವನ್ನು ಉಳಿಸಿ ಬೆಳೆಸುವುದರಲ್ಲೇ ಜೀವನಕ್ಕೆ ಭದ್ರತೆ, ನೆಮ್ಮದಿ ಸಿಗುತ್ತದೆ. ಈ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ.

Advertisement

ಜನಸಾಮಾನ್ಯರ ಅತ್ಯಂತ ಭರವಸೆಯ ಮತ್ತು ವಿಶ್ವಾಸಾರ್ಹ, ಆಕರ್ಷಕ ಮತ್ತು ಸುಭದ್ರ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳನ್ನು ಅಲೋಕಿಸುವ ಈ ಸರಣಿಯಲ್ಲಿ ಈ ಬಾರಿ ನಾವು ವಿಶ್ಲೇಷಿಸಬೇಕಾದ ಉಳಿತಾಯ ಯೋಜನೆಗಳೆಂದರೆ ಪೋಸ್ಟ್ ಆಫೀಸ್ ಮಂತ್ಲೀ ಇನ್ಕಂ ಸ್ಕೀಮ್, ಹಿರಿಯ ನಾಗರಿಕ ಉಳಿತಾಯ ಯೋಜನೆ, 15 ವರ್ಷಗಳ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಕೌಂಟ್ (ಪಿಪಿಎಫ್), ನ್ಯಾಶನಲ್ ಸೇವಿಂಗ್ ಸ್ಕೀಮ್ (ಎನ್ಎಸ್ಸಿ), ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಮತ್ತು ಸುಕನ್ಯಾ ಸಮೃದ್ಧಿ ಖಾತೆಗಳು.

ಅಂಚೆ ಇಲಾಖೆಯ ಈ ಆಕರ್ಷಕ ಉಳಿತಾಯ ಯೋಜನೆಗಳ ವಿವರಗಳನ್ನು ನಾವು ಈ ಕೆಳಗಿನಂತೆ ಗುರುತಿಸಬಹುದಾಗಿದೆ :

1. ಪೋಸ್ಟ್ ಆಫೀಸ್ ಮಂತ್ಲೀ ಸ್ಕೀಮ್ ಅಥವಾ MIS:
ಈ ವರ್ಷ ಜನವರಿ 1ರಿಂದ ಅನ್ವಯವಾಗುವಂತೆ ಪೋಸ್ಟಲ್ ಎಂಐಎಸ್ ಖಾತೆಗೆ ಶೇ.7.3ರ ವಾರ್ಷಿಕ ಕ ಬಡ್ಡಿ ಇದೆ ಮತ್ತು ಇದನ್ನು ಮಾಸಿಕವಾಗಿ ಪಾವತಿಸಲಾಗುತ್ತದೆ.

ಈ ಖಾತೆಯಲ್ಲಿ ಜನರು ಇರಿಸಬಹುದಾದ ಕನಿಷ್ಠ ಮೊತ್ತ 1,500 ರೂ. ಗರಿಷ್ಠ ಮೊತ್ತ ಏಕ ವ್ಯಕ್ತಿ ಖಾತೆಯಾದರೆ 4.5 ಲಕ್ಷ ರೂ; ಜಂಟಿ ಖಾತೆಯಾದರೆ 9 ಲಕ್ಷ ರೂ.

ಗಮನಿಸಬೇಕಾದ ಅಂಶವೆಂದರೆ ಜಂಟಿ ಖಾತೆಯಲ್ಲಿನ ತನ್ನ ಪಾಲನ್ನು ಸೇರಿದಂತೆ ಒಬ್ಬ ವ್ಯಕ್ತಿ ಎಂಐಎಸ್ ನಲ್ಲಿ ಇರಿಸಬಹುದಾದ ಗರಿಷ್ಠ ಮೊತ್ತ 4.5 ಲಕ್ಷ ರೂ. ಈ ಗರಿಷ್ಠ ಮಿತಿಗೆ ಒಳಪಟ್ಟು ಒಬ್ಬ ವ್ಯಕ್ತಿ ಎಷ್ಟೇ ಸಂಖ್ಯೆಯ ಖಾತೆಗಳನ್ನು ತೆರೆಯಬಹುದಾಗಿರುತ್ತದೆ.

ಎಂಐಎಸ್ ಖಾತೆಯ ಮೆಚ್ಯುರಿಟಿ ಅವಧಿ ಐದು ವರ್ಷ. ಆದರೂ ಒಂದು ವರ್ಷದ ಬಳಿಕ ಆದರೆ ಮೂರು ವರ್ಷದೊಳಗೆ ಶೇ.2ರ ಡಿಸ್ಕೌಂಟ್ನಲ್ಲಿಯೂ, ಮೂರು ವರ್ಷದ ಬಳಿಕವಾದಲ್ಲಿ ಶೇ.1ರ ಡಿಸ್ಕೌಂಟ್ನಲ್ಲೂ ಖಾತೆಯಲ್ಲಿನ ಹಣವನ್ನು ಮರಳಿ ಪಡೆಯುವುದಕ್ಕೆ ಅವಕಾಶ ಇರುತ್ತದೆ.

2. ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) :
ಈ ವರ್ಷ ಜನವರಿ 1ರಿಂದ ಅನ್ವಯವಾಗುವಂತೆ ಈ ಯೋಜನೆಗೆ ಶೇ.8.7ರ ವಾರ್ಷಿಕ ಬಡ್ಡಿ ಇದೆ. ಠೇವಣಿ ಇರಿಸಿದ ದಿನದಿಂದ 31 ಮಾರ್ಚ್ / 30 ಸೆಪ್ಟಂಬರ್ / 31 ಡಿಸೆಂಬರ್ ನಂದು ಮತ್ತು ಅನಂತರದಲ್ಲಿ ಮಾರ್ಚ್ 31, 30 ಜೂನ್, 30 ಸೆಪ್ಟಂಬರ್ ಮತ್ತು 31 ಡಿಸೆಂಬರ್ ನಂದು ಬಡಿಯನ್ನು ಪಾವತಿಸಲಾಗುವ ಕ್ರಮ ಇದೆ.

1,000 ರೂ. ಗಳ ಗುಣಾಂಕದಲ್ಲಿ 15 ಲಕ್ಷ ರೂ. ಗೆ ಮೀರದ ಮೊತ್ತದ ಒಂದು ಠೇವಣಿ ಇರಿಸುವುದಕ್ಕೆ ಅವಕಾಶ ಇರುತ್ತದೆ. 60 ವರ್ಷ ಮತ್ತು 60 ಮೀರಿದವರು ಈ ಯೋಜನೆಯಡಿ ಠೇವಣಿ ಇರಿಸಬಹುದಾಗಿದೆ.

55 ವರ್ಷ ಮೀರಿದ ಮತು 60ರ ಕೆಳ ಹರೆಯದ VRS ಪಡೆದವರು ಕೂಡ ಈ ಯೋಜನೆಯಲ್ಲಿ ಹಣ ಇರಿಸಬಹುದಾಗಿದೆ. ಒಬ್ಬ ವೈಯಕ್ತಿಕ ನೆಲೆಯಲ್ಲಿ ಅಥವಾ ಪತಿ/ಪತ್ನಿ ಜತೆಗೂಡಿ ಜಂಟಿಯಾಗಿಯೂ ಠೇವಣಿ ಇರಿಸಬಹುದಾಗಿದ್ದು ಅವುಗಳ ಮೆಚ್ಯುರಿಟಿ ಅವಧಿ 5 ವರ್ಷದ್ದಾಗಿರುತ್ತದೆ.

ಹಿರಿಯ ನಾಗರಿಕರ ಪೋಸ್ಟಲ್ ಠೇವಣಿಗಳಿಗೆ ಐಟಿ ಸೆ.80ಸಿ ಅಡಿ ತೆರಿಗೆ ವಿನಾಯಿತಿ ಇರುವುದು ಆಕರ್ಷಣೀಯವಾಗಿದೆ.

3. 15 ವರ್ಷಗಳ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಕೌಂಟ್ (PPF):
ಹದಿನೈದು ವರ್ಷಗಳ ಅವಧಿಯ ಈ ಯೋಜನೆಗೆ ವಾರ್ಷಿಕ ಚಕ್ರ ಬಡ್ಡಿ ನೆಲೆಯಲ್ಲಿ ಶೇ.8ರ ಬಡ್ಡಿ ಇದೆ. ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 500 ರೂ. ಗಳಿಂದ 1.50 ಲಕ್ಷ ರೂ. ಗಳನ್ನು ಠೇವಣಿ ಇರಿಸಬಹುದಾಗಿರುತ್ತದೆ. ಈ ಠೇವಣಿ ಮೊತ್ತವನ್ನು ಒಂದೇ ಗಂಟಿನಲ್ಲಿ ಇಲ್ಲವೇ 12 ಕಂತುಗಳಲ್ಲಿ ಕೂಡ ಇರಿಸಬಹುದಾಗಿದೆ.

ಗಮನಿಸಬೇಕಾದ ಸಂಗತಿ ಎಂದರೆ ಪಿಪಿಎಫ್ ಯೋಜನೆಯಡಿ ಜಂಟಿ ಖಾತೆ ತೆರೆಯಲಾಗದು. 15 ವರ್ಷಗಳ ಅವಧಿ ಮುಗಿದಾಗ ಖಾತೆಯನ್ನು ಇನ್ನೂ ಐದು ವರ್ಷಗಳಿಗೆ ವಿಸ್ತರಿಸುವುದಕ್ಕೆ ಅವಕಾಶ ಇದೆ.

ಆದರೆ 15 ವರ್ಷಕ್ಕೆ ಮುನ್ನ ಖಾತೆ ಮುಚ್ಚುವುದಕ್ಕೆ ಅವಕಾಶ ಇರುವುದಿಲ್ಲ. ಈ ಖಾತೆಯಲ್ಲಿ ಇರಿಸುವ ಠೇವಣಿಗೆ ಐಟಿ ಕಾಯಿದೆ ಸೆ.80ಸಿ ಅಡಿ ತೆರಿಗೆ ವಿನಾಯಿತಿ ಇರುತ್ತದೆ. ಇದರಲ್ಲಿನ ಬಡ್ಡಿಯು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.

ಪಿಪಿಎಫ್ ಖಾತೆ ತೆರೆದ 7ನೇ ಹಣಕಾಸು ವರ್ಷದ ಬಳಿಕ ಪ್ರತೀ ವರ್ಷ ಹಣ ಹಿಂಪಡೆಯುವುದಕ್ಕೆ ಅವಕಾಶ ಇರುತ್ತದೆ; ಹಾಗೆಯೇ 3ನೇ ಹಣಕಾಸು ವರ್ಷದ ಬಳಿಕ ಸಾಲ ಸೌಲಭ್ಯವೂ ಇರುತ್ತದೆ. ಕೋರ್ಟ್ ಡಿಕ್ರಿ ಆದೇಶದ ಮೂಲಕ ಪಿಪಿಎಫ್ ಹಣವನ್ನು ಅಟ್ಯಾಚ್ ಮಾಡಿಸಲು ಆಗುವುದಿಲ್ಲ.

4. ನ್ಯಾಶನಲ್ ಸೇವಿಂಗ್ ಸ್ಕೀಮ್ (NSC) :
ಈ ಯೋಜನೆಯಡಿ ಎರಡು ನಮೂನೆಗಳಿವೆ : 1 ಎನ್ಎಸ್ಸಿ, 2. ಎನ್ಎಸ್ಸಿ 8ನೇ ಇಶ್ಯೂ.

ಐದು ವರ್ಷಗಳ NSCಗೆ ಈ ವರ್ಷ ಜನವರಿ 1ರಿಂದ ಅನ್ವಯವಾಗುವಂತೆ ಶೇ.8ರ ವಾರ್ಷಿಕ ಚಕ್ರ ಬಡ್ಡಿ ಇದ್ದು ಇದನ್ನು ಮೆಚ್ಯುರಿಟಿ ಸಂದರ್ಭದಲ್ಲೇ ಪಾವತಿಸಲಾಗುತ್ತದೆ. ನೂರು ರೂ.ಗಳ NSC ಐದು ವರ್ಷ ಅವಧಿ ಪೂರೈಸಿದಾಗ 146.93 ರೂ. ಪಾವತಿಯಾಗುತ್ತದೆ. NSC ಠೇವಣಿಗೆ ಗರಿಷ್ಠ ಮಿತಿ ಎಂಬುದಿಲ್ಲ. ಸೆ.80ಸಿ ಅಡಿ ತೆರಿಗೆ ವಿನಾಯಿತಿಯೂ ಇರುತ್ತದೆ.

5. ಕಿಸಾನ್ ವಿಕಾಸ್ ಪತ್ರ (ಕೆವಿಪಿ) :
ಈ ವರ್ಷ ಜನವರಿಯಿಂದ ಕಿಸಾನ್ ವಿಕಾಸ್ ಪತ್ರಕ್ಕೆ ಅಥವಾ ಕೆವಿಪಿಗೆ ಶೇ.7.7ರ ವಾರ್ಷಿಕ ಚಕ್ರ ಬಡ್ಡಿ ಇದೆ. ವಿಶೇಷವೆಂದರೆ 9 ವರ್ಷ 4 ತಿಂಗಳು, ಅಥವಾ 112 ತಿಂಗಳಲ್ಲಿ ಕೆವಿಪಿ ಠೇವಣಿ ಮೊತ್ತ ದುಪ್ಪಟ್ಟಾಗುತ್ತದೆ.

ಕೆವಿಪಿಯಲ್ಲಿ ಕನಿಷ್ಠ 1000 ರೂ. ಮತ್ತು 1,000 ರೂ. ಗುಣಾಕಾರದ ಮೊತ್ತವನ್ನು, ಯಾವುದೇ ಗರಿಷ್ಠ ಮಿತಿ ಇಲ್ಲದೆ ಠೇವಣಿಯಾಗಿ ಇರಿಸುವುದಕ್ಕೆ ಅವಕಾಶವಿದೆ.

ಯಾವುದೇ ಅಂಚೆ ಕಚೇರಿಯಿಂದ ಕೆವಿಪಿ ಖರೀದಿಸಬಹುದು. ಕೆವಿಪಿ ಸರ್ಟಿಫಿಕೇಟನ್ನು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿಗೆ ವರ್ಗಾಯಿಸಬಹುದಾಗಿರುತ್ತದೆ. ಎರಡೂವರೆ ವರ್ಷದ ಬಳಿಕ ಕೆವಿಪಿಯನ್ನು ಎನ್ಕ್ಯಾಶ್ ಮಾಡಬಹುದಾಗಿರುತ್ತದೆ.

6. ಸುಕನ್ಯಾ ಸಮೃದ್ಧಿ ಯೋಜನೆ – ಎಸ್ಎಸ್ಎ ಅಥವಾ SSY :
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯಡಿ ಹೆಣ್ಣು ಮಕ್ಕಳ ಉತ್ತಮ ಭವಿಷ್ಯ ಮತ್ತು ಶ್ರೇಯೋಭಿವೃದ್ಧಿಗಾಗಿ ರೂಪಿಸಲಾಗಿರುವ ಸುಕನ್ಯಾ ಸಮೃದ್ದಿ ಯೋಜನೆಗೆ ಈ ವರ್ಷ ಜನವರಿ 1ರಿಂದ ಶೇ.8.5ರ ವಾರ್ಷಿಕ ಬಡ್ಡಿ ಇದೆ ಮತ್ತು ಅದನ್ನು ವಾರ್ಷಿಕ ಚಕ್ರ ಬಡ್ಡಿ ನೆಲೆಯಲ್ಲಿ ಲೆಕ್ಕ ಹಾಕಲಾಗುತ್ತದೆ.

ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 1,000 ದಿಂದ ಗರಿಷ್ಠ 1.50 ಲಕ್ಷ ರೂ. ಠೇವಣಿ ಇರಿಸುವುದಕ್ಕೆ ಅವಕಾಶವಿದೆ. ಒಬ್ಬ ಲೀಗಲ್ ಗಾರ್ಡಿಯನ್ ಅಥವಾ ನ್ಯಾಚುರಲ್ ಗಾರ್ಡಿಯನ್ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಖಾತೆ ತೆರೆಯಬಹುದು. ಇಬ್ಬರು ಹೆಣ್ಣು ಮಕ್ಕಳ ಸಂದರ್ಭದಲ್ಲಿ ಎರಡು ಪ್ರತ್ಯೇಕ ಖಾತೆ ತೆರೆಯಬಹುದು.

ಹೆಣ್ಣು ಮಗು ಹುಟ್ಟಿದ ದಿನದಿಂದ 10 ವರ್ಷ ಪ್ರಾಯವಾಗುವ ವರೆಗಿನ ಅವಧಿಯಲ್ಲಿ ಮಾತ್ರವೇ ಆ ಮಗುವಿನ ಹೆಸರಿನಲ್ಲಿ ಈ ಖಾತೆಯ ತೆರೆಯಬಹುದು. ಆ ಮಗುವಿಗೆ 21 ವರ್ಷ ಪ್ರಾಯವಾದಾಗ ಖಾತೆಯನ್ನು ಮುಚ್ಚಬಹುದು.

ಹಾಗಿದ್ದರೂ ಆ ಹೆಣ್ಣು ಮಗುವಿಗೆ 18 ವರ್ಷ ಪ್ರಾಯವಾದಾಗ ಖಾತೆಯನ್ನು ಅವಧಿಪೂರ್ವವಾಗಿ ಮುಚ್ಚುವುದಕ್ಕೆ ಅವಕಾಶ ಇರುತ್ತದೆ. ಆದರೆ ಹಾಗೆ ಮಾಡುವುದಕ್ಕೆ ಆಕೆಗೆ ಮದುವೆಯಾಗಿರಬೇಕಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next