Advertisement

ಕಣ್‌ ಕನ್ನಡಿ!

08:53 AM Feb 20, 2020 | mahesh |

ಬಿಸಿಲಿನಿಂದ ರಕ್ಷಣೆ ಪಡೆಯಲಷ್ಟೇ ಸನ್‌ಗ್ಲಾಸಸ್‌ ಧರಿಸುವ ಕಾಲ ಇದಲ್ಲ. ನೀವು ಧರಿಸುವ ಕೂಲಿಂಗ್‌ ಗ್ಲಾಸ್‌ ಕಣ್ಣನ್ನಷ್ಟೇ ಅಲ್ಲ, ನಿಮ್ಮ ಸ್ಟೈಲ್‌ ಅನ್ನೂ “ಕೂಲ್‌’ ಆಗಿಸಬೇಕು. ಹಾಗೆ ಯುವ ಜನರು ಮೆಚ್ಚಿಕೊಂಡ ಶೇಡ್ಸ್‌ಗಳು ದಿನದಿನಕ್ಕೂ ಹೊಸ ಬಗೆಯಲ್ಲಿ ಮೇಕ್‌ ಓವರ್‌ ಪಡೆಯುತ್ತಿವೆ. ಶೇಡ್ಸ್‌ ಜೊತೆಗೆ ನಾವೂ ಅಪ್‌ಗ್ರೇಡ್‌ ಆದರೆ ಚೆನ್ನ ತಾನೇ?

Advertisement

ಶೇಡ್ಸ್‌ ಅಂದ್ರೆ ಏನಂತ ಗೊತ್ತಲ್ಲ? ತಂಪು ಕನ್ನಡಕಕ್ಕೆ ಶೇಡ್ಸ್‌ ಎನ್ನಲಾಗುತ್ತದೆ. ಅದೇ ಶೇಡ್‌ಗಳು ಈಗ ಒಂದು ಹೆಜ್ಜೆ ಮುಂದೆ ಹೋಗಿ, “ಮಿರರ್‌ ಶೇಡ್ಸ್‌’ ರೂಪ ಪಡೆದಿವೆ. ಅಂದರೆ, ಧರಿಸಿದವರಿಗೆ ಕನ್ನಡಕದಂತೆ, ನೋಡುಗರಿಗೆ ಕನ್ನಡಿಯಂತೆ ಕಾಣುವ ಶೇಡ್ಸ್‌ ಈಗ ಹೆಚ್ಚು ಟ್ರೆಂಡ್‌ ಆಗುತ್ತಿವೆ. ಈ ಬೇಸಿಗೆಯಲ್ಲಿ, ವಾರ್ಡ್‌ರೋಬ್‌ ಅಪ್‌ಡೇಟ್‌ ಮಾಡಬೇಕು ಅಂದುಕೊಂಡಿರುವವರೆಲ್ಲ ಖರೀದಿಸಬೇಕಾದ ವಸ್ತು, ಮಿರರ್‌ ಶೇಡ್ಸ್‌.

ದಪ್ಪ ಪ್ರೇಮಿನ ತಂಪು ಕನ್ನಡಕಗಳು, ಚಿಕ್ಕ ಪ್ರೇಮ್‌ನ ತಂಪು ಕನ್ನಡಕಗಳು, ದೊಡ್ಡ ಗ್ಲಾಸ್‌ ತಂಪು ಕನ್ನಡಕಗಳು, ಪ್ರೇಮ್‌ ಇಲ್ಲದ ಬರೀ ಗ್ಲಾಸ್‌ ಉಳ್ಳ ತಂಪು ಕನ್ನಡಕ… ಹೀಗೆ ಫ್ಯಾಷನ್‌ ಲೋಕದಲ್ಲಿ ಅದೆಷ್ಟೋ ಪ್ರಕಾರದ ತಂಪು ಕನ್ನಡಕಗಳು ಬಂದವು, ಹೋದವು. ಏವಿಯೇಟರ್, ವೇಯೆರರ್, ಅಲ್ಲದೆ ಚಿತ್ರ ವಿಚಿತ್ರ ಆಕಾರದ ತಂಪು ಕನ್ನಡಕಗಳು ಇದೀಗ ಮಿರರ್‌ ಶೇಡ್ಸ್‌ನೊಂದಿಗೆ ಲಭ್ಯ ಇವೆ. ಇವುಗಳು ಹೊಸತೇನಲ್ಲ. ಆದರೆ ಟ್ರೆಂಡ್‌ ಆಗುತ್ತಿರುವ ಕಾರಣ ಇವುಗಳಿಗೆ ಬೇಡಿಕೆ ಹೆಚ್ಚಾಗಿವೆ.

ಎಲ್ಲೆಡೆಯೂ ಇದೇ ಟ್ರೆಂಡ್‌
ಬಹಳ ಜನ ಸೆಲೆಬ್ರಿಟಿಗಳು “ಮಿರರ್‌ ಶೇಡ್ಸ್‌’ ತೊಟ್ಟು ಮಿಂಚಿದ್ದಾರೆ. ಇವುಗಳ ಪ್ರೇಮ್‌, ಬಣ್ಣ, ಗಾತ್ರ, ಭಾರ, ಆಕಾರ, ಹೀಗೆ ಎಲ್ಲ ಬಗೆಯಲ್ಲೂ ಪ್ರಯೋಗಗಳು ನಡೆದು, ಈಗ ಈ ಶೇಡ್ಸ್‌ಗಳು ಮೇಕ್‌ ಓವರ್‌ ಪಡೆದಿವೆ. ಫ್ಯಾಷನ್‌ ಮಾಂತ್ರಿಕರು, ಮಿರರ್‌ (ಕನ್ನಡಿ) ಬಳಸಿ ಏವಿಯೇಟರ್ಸ್‌ ಮತ್ತು ವೇಯೆರರ್ ಹೊರತು ಪಡಿಸಿ, ಹೊಸ ಹೊಸ ಆಕಾರದ, ವಿನ್ಯಾಸದ ಮತ್ತು ಬಣ್ಣದ ತಂಪು ಕನ್ನಡಕಗಳನ್ನು ಪರಿಚಯಿಸಿದ್ದಾರೆ.

ಕ್ಯಾಟ್‌ ಐಗೆ ಹೊಸ ಮೆರಗು
ಹೆಣ್ಣು ಮಕ್ಕಳಷ್ಟೇ ಧರಿಸಬಲ್ಲ ಕ್ಯಾಟ್‌ ಐ ಪ್ರೇಮ್‌ನ ತಂಪು ಕನ್ನಡಕಗಳಲ್ಲಿಯೂ ಬಗೆಬಗೆಯ ಪ್ರಕಾರಗಳನ್ನು ಹೊರತಂದಿದ್ದಾರೆ. ಪ್ರೇಮ್‌ಗಳಲ್ಲಿ ಮುತ್ತು, ವಜ್ರದ ರೀತಿಯ ಅಲಂಕಾರಿಕ ಕಲ್ಲುಗಳು, ಗರಿಗಳು ಮತ್ತು ಅನಿಮಲ್‌ ಪ್ರಿಂಟ್‌ ಬಳಸಿದ್ದಾರೆ. ಚಿರತೆ, ಹುಲಿ, ಹಾವು, ಜೀಬ್ರಾ, ಬೆಕ್ಕು, ಸೇರಿದಂತೆ ಚುಕ್ಕಿ, ಪಟ್ಟೆ ಇರುವ ಪ್ರಾಣಿಗಳ ಮೈಬಣ್ಣವನ್ನು ತಂಪು ಕನ್ನಡಕಗಳ ಪ್ರೇಮ್‌ನಲ್ಲಿ ಬಳಸಿ ಕ್ಯಾಟ್‌ ಐ ಶೈಲಿಗೆ ಹೊಸ ಮೆರಗು ನೀಡಿದ್ದಾರೆ. ಇಂಥ ಪ್ರೇಮ್‌ ಉಳ್ಳ ಮಿರರ್‌ ಶೇಡ್ಸ್‌ ತೊಟ್ಟು ಮಹಿಳೆಯರು, ಬೇರೆಯವರಿಗಿಂತ ಹೆಚ್ಚು ಸ್ಟೈಲಿಶ್‌ ಆಗಿ ಕಾಣಿಸೋದು ಸುಳ್ಳಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಅಪ್‌ಲೋಡ್‌ ಮಾಡಿ, ಮಿಂಚಬೇಕು ಅಂತ ಆಸೆಯುಳ್ಳವರು ನೀವಾಗಿದ್ದರೆ, ಖಂಡಿತಾ ಈ ಬಗೆಯ ಶೇಡ್ಸ್‌ ಟ್ರೈ ಮಾಡಬಹುದು.

Advertisement

ಗಾಂಧಿ ಮಿರರ್‌ ಶೇಡ್ಸ್‌
ಕೇವಲ ಉರುಟು ಆಕಾರ ಅಲ್ಲದೆ ಷಟ್ಕೊನ, ಪೆಂಟಗನ್‌, ಅಷ್ಟಭುಜ ಆಕಾರದ ಪ್ರೇಮ್‌ಗಳಲ್ಲೂ ಮಿರರ್‌ ಶೇಡ್ಸ್‌ಗಳು ಸಿಗುತ್ತವೆ. ಅಷ್ಟೇ ಅಲ್ಲದೆ, ಹೃದಯಾಕಾರ (ಹಾರ್ಟ್‌ ಶೇಪ್‌), ನಕ್ಷತ್ರ ಆಕಾರ, ಅರ್ಧ ಚಂದ್ರ, ಸೂರ್ಯ ಹಾಗೂ ಐಸ್‌ಕ್ರೀಮ್‌ ಕೋನ್‌ ಆಕಾರಗಳಲ್ಲೂ ಮಿರರ್‌ ಶೇಡ್ಸ್‌ ಲಭ್ಯ. ಲೇಖಕಿ ಜೆ. ಕೆ. ರೌಲಿಂಗ್‌ ಅವರ ಕಾಲ್ಪನಿಕ ಪಾತ್ರ ಹ್ಯಾರಿ ಪಾಟರ್‌ ತೊಡುವ ಕನ್ನಡಕ, ಸುಪ್ರಸಿದ್ಧ ಬ್ಯಾಂಡ್‌ ಬೀಟಲ್ಸ…ನ ಸಂಗೀತಗಾರ ಜಾನ್‌ ಲೆನನ್‌ ತೊಡುತ್ತಿದ್ದ ಕನ್ನಡಕ, ಮಹಾತ್ಮ ಗಾಂಧಿಯವರು ತೊಡುತ್ತಿದ್ದ ಕನ್ನಡಕ, ಇವೆಲ್ಲವೂ ಹೊಸ ರೂಪ ಪಡೆದು ಮಿರರ್‌ ಶೇಡ್ಸ್‌ ಆಗಿ ರೂಪಾಂತರಗೊಂಡು, ಹ್ಯಾರಿ ಪಾಟರ್‌ ಮಿರರ್‌ ಶೇಡ್ಸ್‌, ಜಾನ್‌ ಲೆನನ್‌ ಮಿರರ್‌ ಶೇಡ್ಸ್‌, ಗಾಂಧಿ ಮಿರರ್‌ ಶೇಡ್ಸ್‌ ಎಂದೇ ಹೆಸರು ಪಡೆದಿವೆ. ಇಂಥ ಮಿರರ್‌ ಶೇಡ್ಸ್‌ ಅನ್ನು ಮಹಿಳೆಯರೂ ತೊಡಬಹುದು.

ಹೊಸ ಬಗೆಯ ರನ್‌ವೇ ಶೀಲ್ಡ್‌!
ಮಿರರ್‌ ಶೇಡ್ಸ್‌ನ ಜಗತ್ತಿನಲ್ಲಿ ಹೆಚ್ಚು ಸದ್ದು ಮಾಡಿದ ಕನ್ನಡಕವೆಂದರೆ, ಅದು “ರನ್‌ವೇ ಶೀಲ್ಡ್‌’. ಇದು ಇತರ ಕನ್ನಡಕಗಳಂತೆ ಬಲಗಣ್ಣಿಗೊಂದು, ಎಡಗಣ್ಣಿಗೊಂದು ಗ್ಲಾಸ್‌ ಅಲ್ಲ. ಬದಲಿಗೆ ಇದು ಒಂದೇ ಮಿರರ್‌ ಗ್ಲಾಸ್‌ನಿಂದ ಮಾಡಿದ ಪಟ್ಟಿಯಂಥದ್ದು. ಕನ್ನಡಕಕ್ಕಿಂತ ಹೆಚ್ಚಾಗಿ, ಕಣ್ಣಿಗೆ ಲೋಹದ ಪಟ್ಟಿ ತೊಟ್ಟಂತೆ ಕಾಣುವುದರಿಂದ ಇದರ ಹೆಸರು ರನ್‌ವೇ ಶೀಲ್ಡ್‌! ಸೂಪರ್‌ ಹೀರೋ ಸಿನಿಮಾಗಳಲ್ಲಿ ಹಾಗೂ ಕ್ರಿಕೆಟರ್‌ಗಳು ಇಂಥ ಮಿರರ್‌ ಶೇಡ್ಸ್‌ಗಳನ್ನು ಧರಿಸುವುದರಿಂದ, ಈ ಬಗೆಯ ಶೇಡ್ಸ್‌ಗೆ ಹೆಚ್ಚು ಜನಪ್ರಿಯತೆ ಸಿಕ್ಕಿದೆ ಎಂದರೆ ತಪ್ಪಾಗಲಾರದು.

-ಬೇಸಿಗೆಯಲ್ಲಿ ಪ್ರವಾಸ, ಪಿಕ್‌ನಿಕ್‌ಗೆ ಹೋಗುವಾಗ ಮಿರರ್‌ ಶೇಡ್ಸ್‌ ಜೊತೆಗಿರಲಿ. ಅದು ಕಣ್ಣನ್ನೂ, ಸೆಲ್ಫಿಯನ್ನೂ ಕೂಲ್‌ ಆಗಿಸುತ್ತದೆ.
-ಮಿರರ್‌ ಶೇಡ್‌ಗಳು ಫ‌ಂಕಿ ಲುಕ್‌ ನೀಡುವುದರಿಂದ, ಸಾಂಪ್ರದಾಯಿಕ ಉಡುಗೆಗಳ ಜೊತೆ ಮ್ಯಾಚ್‌ ಆಗುವುದಿಲ್ಲ.
-ಮಾಡರ್ನ್, ವೆಸ್ಟರ್ನ್ ದಿರಿಸಿಗೆ ಇವು ಹೆಚ್ಚು ಸೂಕ್ತ.
– ಮಿರರ್‌ ಶೇಡ್‌ಗೆ ಮ್ಯಾಚ್‌ ಆಗುವಂತೆ ಕೇಶ ವಿನ್ಯಾಸ, ಮೇಕ್‌ಅಪ್‌ ಮಾಡಿಕೊಳ್ಳಿ.
-ಧರಿಸುವ ಶೇಡ್‌, ಚರ್ಮದ ಬಣ್ಣಕ್ಕೆ ಮ್ಯಾಚ್‌ ಆಗದಿದ್ದರೆ ಅಭಾಸವಾಗಿ ಕಾಣುತ್ತದೆ.

– ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next