Advertisement

ಅಂಬೆಗಾಲಿನ ಮಗು ಅಚ್ಚರಿ

01:33 AM Sep 10, 2019 | Sriram |

ಇಡುಕ್ಕಿ: ಆಯುಸ್ಸು, ಅದೃಷ್ಟ ಗಟ್ಟಿ ಇದ್ದರೆ ಎಂತಹ ಅಡೆತಡೆಗಳನ್ನೂ ದಾಟಿ ಗೆಲ್ಲಬಹುದು ಎಂಬುದಕ್ಕೆ ಕೇರಳದ ಈ ಒಂದು ವರ್ಷದ ಮಗುವೇ ಸಾಕ್ಷಿ!

Advertisement

ಕೇರಳದ ರಾಜಮಾಲಾ ಎಂಬ ಅರಣ್ಯ ಪ್ರದೇಶದಲ್ಲಿ ಹೀಗೊಂದು ವಿಸ್ಮಯಕಾರಿ ಘಟನೆ ನಡೆದಿದೆ. ಇಲ್ಲಿನ ಚೆಕ್‌ಪೋಸ್ಟ್‌ ಬಳಿ ರವಿವಾರ ಮಧ್ಯರಾತ್ರಿ ಸಾಗುತ್ತಿದ್ದ ಒಂದು ಜೀಪಿನಿಂದ ಒಂದು ವರ್ಷದ ಹೆಣ್ಣು ಮಗು ಕೆಳಕ್ಕೆ ಬಿದ್ದಿದ್ದು, ಅದೃಷ್ಟವಶಾತ್‌ ಪ್ರಾಣಾಪಾಯವಾಗದೆ ಹೆತ್ತವರ ಮಡಿಲು ಸೇರಿದೆ.

ಈ ಮಗುವಿನ ಹೆತ್ತವರು ರಾಜಮಾಲಾ ಚೆಕ್‌ಪೋಸ್ಟ್‌ಗೆ ಹತ್ತಿರವೇ ಇರುವ ಕಂಬಲಿಕ್ಕಂಡಮ್‌ ಎಂಬ ಊರಿನ ನಿವಾಸಿಗಳು. ಇತ್ತೀಚೆಗೆ ಜೀಪಿನಲ್ಲಿ ಸಂಬಂಧಿಕರೊಂದಿಗೆ ತಮಿಳುನಾಡಿನ ಪಳನಿ ದೇವಾಲಯಕ್ಕೆ ತೆರಳಿ, ರವಿವಾರ ರಾತ್ರಿ ತಮ್ಮೂರಿಗೆ ಹಿಂದಿರುಗುತ್ತಿದ್ದರು. ನೂರಾರು ಕಿ.ಮೀ.ಗಳಷ್ಟು ಸುತ್ತಾಡಿ ದಣಿವಾಗಿದ್ದರಿಂದ ಎಲ್ಲರಿಗೂ ನಿದ್ದೆ ಆವರಿಸಿತ್ತು. ಅಂಥ ಹೊತ್ತಿನಲ್ಲಿ ಅಮ್ಮನ ಮಡಿಲ ಮೇಲೆ ಕುಳಿತು ಬೆಚ್ಚಗೆ ನಿದ್ರಿಸುತ್ತಿದ್ದ ಮಗು ಜೀಪಿನಿಂದ ಹೊರಕ್ಕೆ ಬಿದ್ದಿತ್ತು.

ಅಂಬೆಗಾಲಿಡುತ್ತಾ ಸಾಗಿದ ಮಗು
ಮಗುವು ತಲೆಗೆ ಪೆಟ್ಟಾಗಿದ್ದರಿಂದ ಕಿರುಚಾಡಿ ಅಳುತ್ತಾ, ರಸ್ತೆಯ ಮೇಲೆ ಅಂಬೆಗಾಲಿಟ್ಟು ರಸ್ತೆ ಪಕ್ಕದ ಫಾರೆಸ್ಟ್‌ ಪಾತ್‌ ಮೇಲೆ ಬಂದಿತ್ತು. ಅಷ್ಟರಲ್ಲಿ ಮಗು ಅಳುವ ಧ್ವನಿ ಕೇಳಿದ ಚೆಕ್‌ಪೋಸ್ಟ್‌ನ ಸಿಬಂದಿ, ಧ್ವನಿ ಬಂದ ದಿಕ್ಕಿನ ಕಡೆಗೆ ಧಾವಿಸಿ ಬಂದು ಮಗುವನ್ನು ರಕ್ಷಿಸಿದರು. ಈ ದಟ್ಟಾರಣ್ಯದ ರಸ್ತೆಯಲ್ಲಿ ಒಮ್ಮೊಮ್ಮೆ ಆನೆಗಳೂ ಸೇರಿದಂತೆ ವನ್ಯಜೀವಿಗಳು ಸಾಗುತ್ತಿರುತ್ತವೆ. ಆದರೆ ಅದೃಷ್ಟವಶಾತ್‌ ಮಗುವಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಸಿಬಂದಿ ಹೇಳಿದ್ದಾರೆ.

ವೈರಲ್ ಆದ ವೀಡಿಯೋ
ಚೆಕ್‌ಪೋಸ್ಟ್‌ ಬಳಿಯಿದ್ದ ಸಿಸಿಟಿವಿಯಲ್ಲಿ ಮಗು ಜೀಪಿನಿಂದ ಬಿದ್ದು ರಸ್ತೆ ದಾಟಿದ ಆಘಾತಕಾರಿ ದೃಶ್ಯವು ಸೆರೆಯಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next