Advertisement
ಅರಬ್ ಸಂಯುಕ್ತ ಸಂಸ್ಥಾನದ ಸುಂದರ ವರ್ಣರಂಜಿತ ನಗರಗಳಲ್ಲಿ ದುಬೈ ವಿಶ್ವ ವಿಖ್ಯಾತ ಜ್ಞಾನ ವಿಜ್ಞಾನದ ನಗರ. ಗಿನ್ನೆಸ್ ದಾಖಲೆಯಲ್ಲಿ ಹಲವಾರು ಅದ್ಭುತಗಳು ಸೇರ್ಪಡೆಯಾಗಿದೆ. ಈ ರೀತಿಯ ಮಾಡಿಕೊಂಡಿರುವ ದಾಖಲೆಗಳ ಸಾಲಿನಲ್ಲಿ ದುಬೈಯ ಮಿರಾಕಲ್ ಗಾರ್ಡನ್ ಪುಷ್ಪ ಪ್ರಿಯರ ಸ್ವರ್ಗ. ವಿಶ್ವದ ಉದ್ಯಾನವನಗಳಲ್ಲಿ ಅತ್ಯಂತ ಹೆಚ್ಚು ವಿಸ್ತಾರವನ್ನು ಹೊಂದಿರುವುದು ಮಾತ್ರವಲ್ಲ ಅತ್ಯಂತ ಎತ್ತರದ ವಾಸ್ತು ಶಿಲ್ಪದ ಆಕೃತಿಯ ಪುಷ್ಪ ಉದ್ಯಾನದ ವಿನ್ಯಾಸಕ್ಕಾಗಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ.
Related Articles
Advertisement
ಮೂರು ಬಾರಿ ಗಿನ್ನೆಸ್ ದಾಖಲೆ
ಮೂರು ಬಾರಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿರುವ ದುಬೈ ಮಿರಾಕಲ್ ಗಾರ್ಡನ್ ವಿಶ್ವದಲ್ಲಿ ಸಮತಟ್ಟಿನಲ್ಲಿ ಅತ್ಯಂತ ವಿಸ್ತಾರವಾಗಿಯೂ ಮತ್ತು ಅತ್ಯಂತ ಎತ್ತರದ ವಿವಿಧ ವಾಸ್ತುಶಿಲ್ಪದ ಅಕೃತಿಯ ಮೇಲ್ಪದರದಲ್ಲಿ ಹೂವಿನ ಗಿಡಗಳನ್ನು ಬೆಳೆಸಿರುವ ಕೌಶಲಕ್ಕೆ ಪ್ರಥಮ ಬಾರಿಗೆ 2013 ರಲ್ಲಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಯಿತು. ದುಬೈಯ ಎಮಿರೇಟ್ಸ್ ಏರ್‌ಲೈನ್ಸ್‌ನ ಎ380 ಏರ್ ಬಸ್ ನೈಜ್ಯತೆಯ ಮಾದರಿಯನ್ನು ನಿರ್ಮಾಣ ಮಾಡಿದ ಕೃತಿಯ ಮೇಲ್ಪದರದಲ್ಲಿ ಪುಷ್ಪಗಳನ್ನು ಬೆಳೆಸಿರುವ ಚಾಕಚಕ್ಯತೆಗೆ 2016ರಲ್ಲಿ ಎರಡನೇ ಬಾರಿಗೆ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಯಿತು.
ವಾಲ್ಟ್ ಡಿಸ್ನೆ ಕಂಪೆನಿಯ ಪರವಾನಿಗೆ ಮತ್ತು ಕರಾರು ಒಪ್ಪಂದದೊಂದಿಗೆ 18 ಮೀಟರ್ ಎತ್ತರದ ಮಿಕ್ಕಿ ಮೌಸ್ ಆಕೃತಿಯನ್ನು ರಚಿಸಿ ಅದರ ಮೇಲ್ಪದರ ಮೇಲೆ ಒಂದು ಲಕ್ಷ ಹೂವು ಅರಳಿಸಿರುವ ಚಮತ್ಕಾರಕ್ಕೆ ಮೂರನೇ ಬಾರಿ 2018 ರಲ್ಲಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಯಿತು.
ಮಿರಾಕಲ್ ಗಾರ್ಡನಲ್ಲಿ ಪ್ರತಿ ವರ್ಷ ಒಂದೊಂದು ನೂತನ ವಾಸ್ತುಶಿಲ್ಪದ ವೈವಿಧ್ಯಮಯ ವಿನ್ಯಾಸಗಳನ್ನು ಸೇರ್ಪಡೆ ಮಾಡುತ್ತಾರೆ. ಪುಷ್ಪ ಉದ್ಯಾನವು ಅತ್ಯಂತ ಆಕರ್ಷಣೀಯವಾಗಿ ಅಂದ ಹೆಚ್ಚಿಸಿ ಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
2013 ರಲ್ಲಿ ದುಬೈ ಮಿರಾಕಲ್ ಗಾರ್ಡನ್ ನಿರ್ಮಾಣ ಮಾಡಲು ತಗಲಿರುವ ವೆಚ್ಚ 40 ಮಿಲಿಯನ್ ದಿರಾಂಸ್ 11 ಮಿಲಿಯನ್ ಯು.ಎಸ್. ಡಾಲರ್. ಅರಬ್ ಸಂಯುಕ್ತ ಸಂಸ್ಥಾನದ ಅರಬ್ಬರ ವೃಕ್ಷ ಪ್ರೇಮ, ಹಸುರು ಕ್ರಾಂತಿಗೆ ಇದು ಸಾಕ್ಷಿಯಾಗಿದೆ.
ಬಿ.ಕೆ. ಗಣೇಶ್ ರೈ, ಶಾರ್ಜಾ