ಮುಂಬಯಿ: ಸನಾತನ ಧರ್ಮ, ಮಹಾಕಾವ್ಯ, ವೇದ ಪುರಾಣಗಳ ಒಳ-ಹೊರಗಿನ ವಾಸ್ತವಿಕ ಅರಿವುಗಳನ್ನು ಸರಳ ಭಾಷೆಯಲ್ಲಿ ದಾಸರು ಕೀರ್ತನೆಯ ಮೂಲಕ ಜಗತ್ತಿಗೆ ಸಾರಿದ್ದಾರೆ. ಸಮಾಜ, ಮನೆ, ಮನಸ್ಸಿನ ಅಂಕು-ಡೊಂಕು, ಢಾಂಬಿಕ ವಿಚಾರಧಾರೆಗಳ ಬಗ್ಗೆ ಎಚ್ಚರಿಸಿದ್ದಾರೆ. ಭಕ್ತರನ್ನು ಭಗವಂತನ ಸನ್ನಿಧಿಗೆ ಕೊಂಡೊಯ್ಯುವ ವಿಶೇಷ ಶಕ್ತಿ ಹೊಂದಿದ ಭಜನೆಯನ್ನು ಪರ್ಯಾಯ ಉತ್ಸವದ ಸಮಯದಲ್ಲಿ ಉಡುಪಿ ಶ್ರೀ ಕೃಷ್ಣನ ಕ್ಷೇತ್ರದಲ್ಲಿ ಮುಂದಿನ ವರ್ಷ ಜನವರಿ 18ರಿಂದ ನಿರಂತರವಾಗಿ ಎರಡು ವರ್ಷಗಳ ಕಾಲ ದಿನ ರಾತ್ರಿ ಆಯೋಜಿಸಲಾಗಿದೆ.
ಮಹಾರಾಷ್ಟ್ರ ರಾಜ್ಯದ ಎಲ್ಲಾ ಭಜನ ಮಂಡಳಿಗಳು, ವಿವಿಧ ಜಾತಿ, ಸಂಘಟನೆಗಳು ಯಾವುದಾದರೊಂದು ದಿನವನ್ನು ಆಯ್ಕೆಮಾಡಿ ಹೆಸರನ್ನು ನೋಂದಾಯಿಸಿ ಕೊಳ್ಳಬಹುದು. ಆರಾಧನಾ ಕಲೆಯಾದ ಶ್ರೀ ಗೋವಿಂ ದನ ಭಜನೆಯು ಕಲಿಯುಗದ ಮೋಕ್ಷ ಪ್ರಾಪ್ತಿಯ ದಾರಿದೀಪ ಎಂದು ದ್ವಿತೀಯ ಬಾರಿ ಪರ್ಯಾಯ ಪೀಠಾರೋಹಣ ಮಾಡಿಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ನುಡಿದರು.
ಅ.8ರಂದು ಮೀರಾರೋಡ್ ಪೂರ್ವದ ಪಲಿಮಾರು ಮಠದ ಬಾಲಾಜಿ ಸನ್ನಿಧಿಯಲ್ಲಿ ನಡೆದ ಮಹಾನಗರಗಳ ಭಜನ ಮಂಡಳಿಗಳ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ, ಆಶೀರ್ವಚನ ನೀಡಿದ ಶ್ರೀಗಳು, ವಾಯು ಮಾಲಿನ್ಯವನ್ನು ಶುದ್ಧಿಗೊಳಿಸುವ, ಆರೋಗ್ಯಕರ ಪರಿಸರವನ್ನು ನಿರ್ಮಾಣಗೊಳಿಸುವ ಶ್ರೀ ಕೃಷ್ಣ ದೇವರ ಪ್ರೀಯವಾದ ತುಳಸಿ ಗಿಡವನ್ನು ಆರು ಎಕರೆ ಜಾಗ ದಲ್ಲಿ ಸುಮಾರು 15 ಲಕ್ಷ ತುಳುಸಿ ಗಿಡಗಳನ್ನು ನೆಡುವ ಯೋಜನೆ ಕಾರ್ಯಾ ರಂಭಗೊಂಡಿದೆ. ಪ್ರತಿದಿನ ಲಕ್ಷತುಳಸಿ ಅರ್ಚನೆ ಶ್ರೀ ಕೃಷ್ಣ ದೇವರಿಗೆ ಅರ್ಪಿತವಾಗಲಿದೆ. ಶ್ರೀ ಕೃಷ್ಣ ಸುವರ್ಣ ಗೋಪುರಕ್ಕೆ ಭಕ್ತಕೋಟಿ ಕಿಂಚಿತ್ತು ಕಾಣಿಕೆ ನೀಡಿ ಯೋಜನೆಯನ್ನು ಸಾಕಾರಗೊಳಿಸಬೇಕು. ಪರ್ಯಾ ಯೋತ್ಸವದಲ್ಲಿ ಪರಿಹಾರ ಸಮೇತ ಉಪಸ್ಥಿತರಿದ್ದು ಶ್ರೀ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗೋಣ ಎಂದರು.
ಮುಂಬಯಿ ಪರ್ಯಾಯ ಸಮಿತಿಯ ಗೌರವಾಧ್ಯಕ್ಷ ಡಾ| ಸೀತಾ ರಾಮ ಆಳ್ವ ಅವರು ಮಾತನಾಡಿ, ಶ್ರೀ ರಾಮನಂತೆ ಲೋಕೋದ್ಧಾರದ ಯೋಜನೆ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಗಳದ್ದು. ಮನುಕುಲದ ಸೇವೆಯ ಮೂಲಕ ಸುಮಾರು 108 ಶಾಲೆಗಳ 32 ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದಾರೆ. ಚಿಣ್ಣರ ಶುಶ್ರೂಷ ಯೋಜನೆ, ವಿಶ್ವ ಸಂಜೀವಿನಿ ಟ್ರಸ್ಟ್ ಮೊದಲಾದ ಹಲವಾರು ಸಾಮಾಜಿಕ, ಸೇವಾ ಸಂಸ್ಥೆಗಳು ಯಶಸ್ವಿಯಾಗಿ ಸಾಗುತ್ತಿವೆ. ಶ್ರೀಗಳ ಯೋಜನಬದ್ಧ ಸುವರ್ಣ ಗೋಪುರ ಉಡುಪಿ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಕಾಣುವ ಸೌಭಾಗ್ಯ ನಮ್ಮದಾಗಿಸಿಕೊಳ್ಳೋಣ ಎಂದರು.
ಡೊಂಬಿವಲಿಯ ಗೋಪಾಲ್ ಆಚಾರ್ಯ ಅವರು ಸಂಕೀರ್ತ ನೆಯೊಂದಿಗೆ ಸ್ವಾಗತಿದರು. ಸುಪ್ರಸನ್ನ ಭಟ್ ಮತ್ತು ಲಕ್ಷ್ಮೀಶ್ ಭಟ್ ಪಕ್ಷಿಕೆರೆ ವೇದಘೋಷಗೈದರು. ಡಾ| ವಂಶಿ ಕೃಷ್ಣ ಆಚಾರ್ಯ ಪುರೋಹಿತ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ಪುತ್ತಿಗೆ ರಘುನಂದನ ಶರ್ಮ ಮಠದ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ಪಲಿಮಾರು ಮಠ ಮೀರಾರೋಡ್ ಶಾಖೆಯ ಪ್ರಬಂಧಕ, ಟ್ರಸ್ಟಿ ರಾಧಾಕೃಷ್ಣ ಭಟ್, ಟ್ರಸ್ಟಿ ಸಚ್ಚಿದಾನಂದ ರಾವ್, ಸಂಚಾಲಕ ಶ್ರೀಶ ಭಟ್, ತಿರುಪತಿ ದಾಸ ಸಾಹಿತ್ಯ ಪ್ರೊಜೆಕ್ಟ್‌ನ ಗೋಪಾಲ ಆಚಾರ್ಯ ಉಡುಪಿ, ಮಂತ್ರಾಲಯ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರೊಜೆಕ್ಟ್‌ನ ಸದಾನಂದ ಶಾಸ್ತಿÅà, ಎಸ್. ಮೋಹನ್ ಆಚಾರ್ಯ ಬೆಂಗಳೂರು, ಎಸ್. ಸೀತಾ, ಮನೋಹರ್ ತಿರುಪತಿ, ಗುರುರಾಜ ಆಚಾರ್ಯ, ಗಿರೀಶ್ ಆಚಾರ್ಯ ಕುತ್ಯಾರು, ನಾಗಾರಾಹಾಳ, ಸಂಜೀವ ಜೋಶಿ ಮೊದಲಾದವರು ಉಪಸ್ಥಿತರಿದ್ದರು. ಸ್ಥಳೀಯ ಹಾಗೂ ಪರಿಸರದ ವಿವಿಧ ಭಜನ ಮಂಡಳಿಗಳ ಸದಸ್ಯರು, ಸಮುದಾಯ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಚಿತ್ರ-ವರದಿ : ರಮೇಶ್ ಅಮೀನ್