ಮುಂಬಯಿ: ಭಾರತೀಯ ಜನತಾ ಪಾರ್ಟಿ ಮೀರಾ-ಭಾಯಂದರ್ ಜಿಲ್ಲಾ ದಕ್ಷಿಣ ಭಾರತೀಯ ಘಟಕ ಇದರ ವತಿಯಿಂದ ಮಧುರ ಮಿಲನ-ಸ್ನೇಹ ಸಮ್ಮಿಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಫೆ. 4ರಂದು ಸಂಜೆ ಮೀರಾರೋಡ್ ಪೂರ್ವದ ಸೆವೆನ್ ಸ್ಕ್ವೇರ್ ಶಾಲಾ ಮೈದಾನದಲ್ಲಿ ಜರಗಿತು.
ದಕ್ಷಿಣ ಭಾರತೀಯ ಬಿಜೆಪಿ ಘಟಕದ ಅಧ್ಯಕ್ಷ ಉದಯ ಆರ್. ಹೆಗ್ಡೆ ಎಲಿಯಾಳ ಅವರ ನೇತೃತ್ವದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೀರಾ-ಭಾಯಂದರ್ ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ದಂಪತಿ, ಸ್ಥಳೀಯ ಸಮಾಜ ಸೇವಕ, ಸಂಘಟಕ ಸುರೇಶ್ ಶೆಟ್ಟಿ ಗಂಧರ್ವ ಹಾಗೂ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾದ ಸೋನಿ ರಘು ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಶೆಟ್ಟಿ, ಭಾಯಂದರ್ ಜಿಲ್ಲಾ ಬಿಜಿಪಿಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಉದಯ ಶೆಟ್ಟಿ ಪೆಲತ್ತೂರು, ಕೋಶಾಧಿಕಾರಿ ಅರವಿಂದ ಎ. ಶೆಟ್ಟಿ, ಭಿವಂಡಿ ಬಿಜೆಪಿ ಅಧ್ಯಕ್ಷ ಸಂತೋಷ್ ಶೆಟ್ಟಿ, ಬಿಜೆಪಿಯ ಉಡುಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಮೀರಾ-ಭಾಯಂದರ್ ಯುವ ಮೋರ್ಚಾದ ಅಧ್ಯಕ್ಷ ನೀಲೇಶ್ ಸೋನಿ, ಮಹಾರಾಷ್ಟ್ರ ಹೊಟೇಲ್ ಫೆಡರೇಷನ್ ಉಪಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ರಾಜಕೀಯ ನೇತಾರರಾದ ಫಿರೋಜ್ ಎಫ್ ಶೇಖ್ ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಸದಸ್ಯರು, ಪದಾಧಿಕಾರಿಗಳು, ದಕ್ಷಿಣ ಭಾರತೀಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ರಂಗಕಲಾವಿದ ಜಿ. ಕೆ. ಕೆಂಚನಕೆರೆ, ಲೇಖಕ ಅರುಣ್ ಕುಮಾರ್ ಶೆಟ್ಟಿ ಎರ್ಮಾಳ್ ಕಾರ್ಯಕ್ರಮ ನಿರ್ವಹಿಸಿ ಅತಿಥಿಗಳನ್ನು, ಸಮ್ಮಾನಿತರನ್ನು ಪರಿಚಯಿಸಿದರು. ದಕ್ಷಿಣ ಭಾರತೀಯರು, ವಿವಿಧ ಪ್ರಾಂತೀಯ ಜನರು ಸಾವಿರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಚಿತ್ರ-ವರದಿ: ರಮೇಶ್ ಅಮೀನ್