ಮುಂಬಯಿ: ನಿಸ್ವಾರ್ಥ ಕಾರ್ಯ ಕರ್ತರು ಪಕ್ಷ ಬೆಳವಣಿಗೆಯ ಭದ್ರತೆಯ ಹರಿಕಾರರು. ಇವರು ಅಧಿಕಾರ, ಅಂತಸ್ತುಗಳಿಂದ ಸದಾ ದೂರ ಉಳಿದು ಪಕ್ಷ ನಿಷ್ಠೆಯನ್ನು ಮೇಳೈಸಿಕೊಂಡವರು. ನಾಯಕತ್ವ ಗುಣ ಎಲ್ಲರಲ್ಲೂ ಇದೆ. ಆದರೆ ಎಲ್ಲರಿಗೂ ಟಿಕೆಟ್ ನೀಡುವುದು ಅಸಾಧ್ಯ. ಟಿಕೆಟ್ ಆಕಾಂಕ್ಷಿಗಳು ತನಗೆ ಸ್ಥಾನಮಾನ ನೀಡಲಿಲ್ಲ ಎಂದು ಬೇಸರಿಸದೆ ಪಕ್ಷದ ಒಳಿತಿಗಾಗಿ ನಿಷ್ಠೆ ಮತ್ತು ಶ್ರದ್ಧೆಯಿಂದ ದುಡಿಯಬೇಕು. ಆ. 20 ರಂದು ನಡೆಯಲಿರುವ ಮೀರಾ-ಭಾಯಂದರ್ ನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುಮತದೊಂದಿಗೆ ಆಯ್ಕೆ ಮಾಡಬೇಕು ಎಂದು ಸಂಸದ ಗೋಪಾಲ್ ಶೆಟ್ಟಿ ಹೇಳಿದರು.
ಆ. 14 ರಂದು ಸಂಜೆ ಮೀರಾರೋಡ್ ಸೆವೆನ್ ಸ್ಕ್ವೇರ್ ಶಾಲಾ ಮೈದಾನದಲ್ಲಿ ಮೀರಾ- ಭಾಯಂದರ್ ದಕ್ಷಿಣ ಭಾರತೀಯ ಬಿಜೆಪಿ ಘಟಕ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡಿಗರಾದ ಭಾರತೀಯ ಜನತ ಪಕ್ಷದ ಅಭ್ಯರ್ಥಿಗಳಾದ ಅರವಿಂದ ಶೆಟ್ಟಿ, ರೈಮಾ ಜಯಶೀಲ ತಿಂಗಳಾಯ, ಉಷಾ ಕರ್ಕೇರ, ಗಣೇಶ್ ಶೆಟ್ಟಿ ಅವರನ್ನು ಅಭಿನಂದಿಸಿ, ಗೌರವಿಸಿ ಶುಭಹಾರೈಸಿದರು.
ದಕ್ಷಿಣ ಭಾರತೀಯ ಬಿಜೆಪಿ ಘಟಕದ ಅಧ್ಯಕ್ಷ ಉದಯ ಆರ್. ಹೆಗ್ಡೆ ಎಲಿಯಾಳ ಅವರು ಮಾತನಾಡಿ, ಪ್ರಥಮ ಬಾರಿ ಬಿಜೆಪಿಯು ದಕ್ಷಿಣ ಭಾರತೀಯರಿಗೆ ಮೀರಾ-ಭಾಯಂದರ್ ನಗರ ಪಾಲಿಕೆಯಲ್ಲಿ 4 ಸ್ಥಾನಗಳನ್ನು ಕಲ್ಪಿಸಿದೆ. ಪ್ರತಿಯೋರ್ವ ಅಭ್ಯರ್ಥಿಯು ಮನೆಮನೆಗೆ ಭೇಟಿನೀಡಿ ಚುನಾವಣೆ ಪ್ರಚಾರದೊಟ್ಟಿಗೆ ಕಾರ್ಯಸಾಧನೆಯನ್ನು ತಿಳಿಸಬೇಕು. ಕೇಂದ್ರ, ರಾಜ್ಯದಂತೆ ಮೀರಾ-ಭಾಯಂದರ್ ನಗರ ಪಾಲಿಕೆಯಲ್ಲಿ ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಆಡಳಿತ ನಡೆಸುವಂತೆ ಮತದಾರರು ಸಹಕರಿಸಬೇಕು ಎಂದರು.
ಬಿಜೆಪಿ ಮೀರಾ-ಭಾಯಂದರ್ ಜಿಲ್ಲಾ ಕಾರ್ಯದರ್ಶಿ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ಅವರು ಮಾತನಾಡಿ, ಶಾಸಕ ನರೇಂದ್ರ ಮೆಹ್ತಾರ ಶಿಫಾರಾಸಿನಂತೆ ದಕ್ಷಿಣ ಭಾರತೀಯರಿಗೆ ಬಂಪರ್ ಕೊಡುಗೆ ಲಭಿಸಿದೆ. ಬಹುಮತ ವಿಜಯದೊಂದಿಗೆ ಅವರ ಋಣ ತೀರಿಸುವುದು ಪ್ರತಿಯೋರ್ವ ಅಭ್ಯರ್ಥಿಯ ಕರ್ತವ್ಯವವಾಗಿದೆ ಎಂದು ನುಡಿದು ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸಿ ಶುಭಹಾರೈಸಿದರು.
ಶಾಸಕ ನರೇಂದ್ರ ಮೆಹ್ತಾ, ಅಭ್ಯರ್ಥಿ ಅರವಿಂದ ಶೆಟ್ಟಿ, ಮಹಿಳಾ ವಿಭಾಗದ ಉಪಾಧ್ಯಕ್ಷೆ ಲೀಲಾ ಡಿ. ಪೂಜಾರಿ ಅವರು ಮಾತನಾಡಿದರು. ಲೇಖಕ ಅರುಣ್ ಕುಮಾರ್ ಶೆಟ್ಟಿ ಎರ್ಮಾಳ್, ಚಿತ್ರನಟ ಜಿ. ಕೆ. ಕೆಂಚನಕೆರೆ ಅವರು ಷತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಾಲಿನಿ ಶೆಟ್ಟಿ, ಮಹಾಬಲ ಸಾಮಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಕೋಟಿ-ಚೆನ್ನಯ ಯಕ್ಷಗಾನ ಬಯಲಾಟ ನಡೆಯಿತು.
ಚಿತ್ರ-ವರದಿ : ರಮೇಶ್ ಅಮೀನ್