Advertisement

ಭ್ರಷ್ಟಾಚಾರದ ಸುಳಿಯಲ್ಲಿ  ಚಕ್‌ ದೇ ಇಂಡಿಯಾ ಸ್ಫೂರ್ತಿ ಮೀರ್‌ ರಂಜನ್‌

03:45 AM Jul 11, 2017 | Harsha Rao |

ಮುಂಬಯಿ: ಭಾರೀ ಪ್ರಚಾರ ಗಳಿಸಿದ್ದ ಶಾರುಖ್‌ ಖಾನ್‌ ಅಭಿನಯದ ಚಕ್‌ ದೇ ಇಂಡಿಯಾ ಸಿನಿಮಾ ಎಲ್ಲರಿಗೂ ನೆನಪಿರಬಹುದು. ಆ ಸಿನಿಮಾಕ್ಕೆ ಸ್ಫೂರ್ತಿಯಾಗಿದ್ದ ಭಾರತದ ಮಾಜಿ ಹಾಕಿ ಆಟಗಾರ ಮೀರ್‌ ರಂಜನ್‌ ನೇಗಿ ಈಗ ಮತ್ತೂಂದು ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಮುಂಬಯಿಯಲ್ಲಿ ಸೀಮಾಸುಂಕ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿರುವ (ಅಸಿಸ್ಟೆಂಟ್‌ ಕಮಿಷನರ್‌) ನೇಗಿ 26 ಕೋಟಿ ರೂ. ವಂಚನೆಗೆ ಕಾರಣವಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ವಿಚಾರಣೆ ಕಾರಣಕ್ಕೆ ಅವರನ್ನು ಮುಂಬಯಿಯ ಸಹಾರ್‌ ಏರ್‌ ಕಾರ್ಗೋ ಕಚೇರಿಯಿಂದ ಹೊರ ಹಾಕಲಾಗಿದೆ.

Advertisement

ಘಟನೆ ಏನು?: ಮುಂಬಯಿಯ ಸಹಾರ್‌ ಏರ್‌ ಕಾರ್ಗೋ ಕಟ್ಟಡದಲ್ಲಿ ವಾರ್ಷಿಕ 14 ಸಾವಿರ ಕೋಟಿ ರೂ.ವರೆಗೆ ವ್ಯವಹಾರ ನಡೆಯುತ್ತದೆ. ಇಲ್ಲಿ ಇತ್ತೀಚೆಗೆ ವ್ಯಾಪಕ ಅವ್ಯವಹಾರ, ಕಳ್ಳ ಸಾಗಣೆಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಇಲ್ಲಿ ಅಧಿಕಾರಿಯಾಗಿರುವ ನೇಗಿ ಮತ್ತು ಇನ್ನೊಬ್ಬ ಅಧಿಕಾರಿ ವಿ.ಎಂ.ಗಣೂ 26 ಕೋಟಿ ರೂ. ಕಳ್ಳ ಸಾಗಣೆಗೆ ಕಾರಣವಾಗಿದ್ದಾರೆ, ಇವರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ದೂರವಾಣಿ ಕರೆಯೊಂದನ್ನು ಆಧರಿಸಿ ಈ ತನಿಖೆ ಮಾಡಲಾಗುತ್ತಿದೆ. ಮೇಲ್ನೋಟಕ್ಕೆ ದೂರವಾಣಿ ಮಾತುಕತೆ ಸ್ಪಷ್ಟವಾಗಿಯೇ ಇದೆ. ಆದರೆ ವಸ್ತುಗಳನ್ನು ಯಂತ್ರಗಳಿಂದ ಸ್ಕ್ಯಾನಿಂಗ್‌ ಮಾಡಿಸಿಲ್ಲ. ಇದು ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆಗೆ ಅನುಮಾನ ಮೂಡಿಸಿದೆ. ಆದ್ದರಿಂದ ತನಿಖೆಗೆ ಆದೇಶಿಸಲಾಗಿದೆ. ಒಂದು ವೇಳೆ ಆರೋಪ ಸಾಬೀತಾದರೆ ನೇಗಿ ಅಮಾನತಾಗಲಿದ್ದಾರೆ.

1982ರ ಏಶ್ಯನ್‌ ಗೇಮ್ಸ್‌ನಲ್ಲಿ ಕಳ್ಳಾಟದ ಆರೋಪ
1982ರ ಏಶ್ಯನ್‌ ಗೇಮ್ಸ್‌ ಹಾಕಿ ಫೈನಲ್‌ ನೆನಪಿರಬಹುದು. ಪಾಕಿಸ್ಥಾನದ ವಿರುದ್ಧ ನಡೆದಿದ್ದ ಪಂದ್ಯ ವೀಕ್ಷಿಸಲು ಭಾರತದ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಭ್‌ ಬಚ್ಚನ್‌ ಕೂಡ ಆಗಮಿಸಿದ್ದರು. ಅಲ್ಲಿ ಭಾರತ 7-1ರಿಂದ ಹೀನಾಯವಾಗಿ ಸೋತು ಹೋಗಿತ್ತು. ಗೋಲ್‌ ಕೀಪರ್‌ ಆಗಿದ್ದ ಮೀರ್‌ ರಂಜನ್‌ ನೇಗಿ ಉದ್ದೇಶಪೂರ್ವಕವಾಗಿ ಪಾಕ್‌ಗೆ ಗೋಲು ಬಿಟ್ಟುಕೊಟ್ಟಿದ್ದಾರೆಂದು ಭಾರೀ ಆರೋಪ ಕೇಳಿ ಬಂದಿತ್ತು. ಅದಾದ ಅವರ ವೃತ್ತಿಜೀವನ ಮುಗಿದು ಹೋಗಿತ್ತು. ನೇಗಿ ಮತ್ತೆ ಬೆಳಕಿಗೆ ಬಂದಿದ್ದು 2002ರಲ್ಲಿ. ಆಗ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡ ಅದ್ಭುತ ಆಟವಾಡಿ ಪ್ರಶಸ್ತಿ ಗೆದ್ದಿತ್ತು. ಆ ತಂಡದ ಕೋಚ್‌ ನೇಗಿ. ಇದು ಚಕ್‌ ದೇ ಇಂಡಿಯಾಕ್ಕೆ ಸ್ಫೂರ್ತಿಯಾಗಿತ್ತು. ಅದನ್ನೇ ಆದರಿಸಿ ಮಾಡಿದ ಸಿನಿಮಾ ಭಾರೀ ಯಶಸ್ಸು ಗಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next