ಉಡುಪಿ: ಮಂಗಳೂರಿನ ಎಂಐಒ ಕ್ಯಾನ್ಸರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಜ. 8 ರಂದು ಕ್ಯಾನ್ಸರ್ ಬಗ್ಗೆ ಭಯಬೇಡ ಅರಿವಿರಲಿ ಎಂಬ ಧ್ಯೇಯದೊಂದಿಗೆ ಕ್ಯಾನ್ಸರ್ ಸಹಾಯವಾಣಿಯನ್ನು (8050636777) ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ. ಬಿ. ರಿಷ್ಯಂತ್ ಲೋಕಾರ್ಪಣೆಗೊಳಿಸಿದರು.
ಕ್ಯಾನ್ಸರ್ ಬಗ್ಗೆ ಜನರಿಗಿರುವ ಭಯ,ತಪ್ಪು ತಿಳುವಳಿಕೆ, ಗೊಂದಲಗಳನ್ನು ಹೋಗಲಾಡಿಸಿ ಅರಿವು ಮೂಡಿಸಿ ಆರಂಭಿಕ ಹಂತದಲ್ಲಿಯೆ ಎಚ್ಚರ ಗೊಳ್ಳುವಂತೆ ಮಾಡುವುದು ಉತ್ತಮ ಕೆಲಸ. ಎಂಐಒ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದು ಕ್ಯಾನ್ಸರ್‌ಗೆ ಸಹಾಯದ ನಿರೀಕ್ಷೆಯಲ್ಲಿರುವ ಜನರಿಗೆ ದಾರಿದೀಪವಾಗಲಿದೆ ಎಂದರು.
ಎಂಐಒ ನ್ಯೂ ವೆಂಚರ್ಸ್‌ನ ನಿರ್ದೇಶಕ ಡಾ| ಜಲಾಲುದ್ದೀನ್ ಅಕºರ್ ಅವರು ಎಂಐಒ ನಡೆದು ಬಂದ ಹಾದಿಯ ಬಗ್ಗೆ ಹೇಳಿದರು. ಪ್ರಸ್ತುತ ನಮ್ಮ ಸೇವೆಯನ್ನು ಉಡುಪಿ, ತೀರ್ಥಹಳ್ಳಿಯಲ್ಲಿಯೂ ಎಂಐಒ ಆಸ್ಪತ್ರೆಯನ್ನು ತೆರೆಯುವ ಮೂಲಕ ನೀಡಲಿದ್ದೇವೆ. ಇದು ಗ್ರಾಮೀಣ ಭಾಗದ ಜನರಿಗೆ ಇನ್ನಷ್ಟು ಸೇವೆ ನೀಡುವ ಅವಕಾಶ ನೀಡಿದೆ ಎಂದರು. ರೇಡಿಯೇಶನ್ ತಜ್ಞ ಡಾ| ವೆಂಕಟರಮಣ್ ಕಿಣಿ ಅವರು ಕ್ಯಾನ್ಸರ್ ಸಹಾಯವಾಣಿ ಯಾವ ರೀತಿ ಕಾರ್ಯನಿರ್ವಹಿಸಲಿದೆ ಎಂಬುದನ್ನು ವಿವರಿಸಿದರು.
ಎಂಐಒದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ| ಶ್ರೀಕಾಂತ್ ರಾವ್ ಮಾತನಾಡಿ, ಕ್ಯಾನ್ಸರ್ ಚಿಕಿತ್ಸೆ ಸಮಾಜದ ಎಲ್ಲ ವರ್ಗದವರಿಗೂ ಕ್ಲಪ್ತ ಸಮಯದಲ್ಲಿ ಮಿತದರದಲ್ಲಿ ಸಿಗಬೇಕು ಎಂಬುದು ನಮ್ಮ ಮೊದಲ ಆದ್ಯತೆ. ಸರಕಾರದ ಎಲ್ಲ ಯೋಜನೆಯಡಿಯಲ್ಲಿ ಜನರಿಗೆ ತ್ರಾಸವಿಲ್ಲದೆ ಸುಲಲಿತವಾಗಿ ಚಿಕಿತ್ಸೆ ಪಡೆಯುವಂತಾಗಬೇಕು ಎಂಬ ಧ್ಯೇಯ ನಮ್ಮದು ಎಂದರು.
ವೈದ್ಯಾಧಿಕಾರಿಗಳು, ಸಿಬಂದಿ, ರೋಗಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು. ಎಂಐಒ ಆಸ್ಪತ್ರೆ ಆಪರೇಶನ್ ಮ್ಯಾನೇಜರ್ ರಾಘವೇಂದ್ರ ಸಿಂಗ್ ವಂದಿಸಿ, ಡಾ| ವಿಶ್ರುತಾ ದೇವಾಡಿಗ ನಿರೂಪಿಸಿದರು.
ಕ್ಯಾನ್ಸರ್ ಸಹಾಯವಾಣಿ
ಸಾರ್ವಜನಿಕರು ಸಹಾಯವಾಣಿಗೆ ಸಂಪರ್ಕಿಸಿ ಕ್ಯಾನ್ಸರ್ ಸಂಬಂಧಿಸಿ ಯಾವುದೇ ಪ್ರಶ್ನೆ, ಸಲಹೆ, ಮಾರ್ಗದರ್ಶನ ಪಡೆಯಬಹುದು. ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 6ರ ತನಕ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಸಿಬಂದಿಯು ಸಂಬಂಧಿಸಿದ ವಿಭಾಗದವರೊಡನೆ ಸಮಾಲೋಚಿಸಿ ಕರೆ ಮಾಡಿದವರಿಗೆ ಸೂಕ್ತ ಪರಿಹಾರ ಒದಗಿಸಲಿದ್ದಾರೆ.