ಉಡುಪಿ: ಎಂಐಒ ಕ್ಯಾನ್ಸರ್ ಸ್ಪೆಶಾಲಿಟಿ ಆಸ್ಪತ್ರೆಯ ಉಡುಪಿ ಹಾಗೂ ತೀರ್ಥಹಳ್ಳಿಗೆ ಸಿಇಒ ಆಗಿ ಡಾ| ಡಿ. ಶ್ರೀಕಾಂತ್ ರಾವ್ ನಿಯುಕ್ತಿಗೊಂಡಿದ್ದಾರೆ.
ಎಂಐಟಿ ಮಾಜಿ ನಿರ್ದೇಶಕ ಡಾ| ಶ್ರೀಕಾಂತ್ ಅವರನ್ನು ಎಂಐಒ ಆಡಳಿತ ಮತ್ತು ಸಿಬಂದಿಯವರ ಪರವಾಗಿ ಎಂಐಒ ನಿರ್ದೇಶಕರು (ಎಲ್‌ಟ್ರೀಚ್ ಕ್ಲಿನಿಕ್ಸ್), ರೇಡಿಯೇಷನ್ ಓಂಕಾಲಾಜಿಸ್ಟ್ ಡಾ| ಸನತ್ ಹೆಗ್ಡೆ ಸ್ವಾಗತಿಸಿದರು.
ಅನಂತರ ಅವರು ಮಾತನಾಡಿ, ಕ್ಯಾನ್ಸರ್ ಬಾಧಿತರು ಹಾಗೂ ಆರೈಕೆದಾರರಿಗೆ ರೋಗವನ್ನು ನಿಭಾಯಿಸುವಲ್ಲಿ ಎಂಐಒ ಒಂದು ದಶಕದಿಂದ ದಣಿವರಿಯದೆ ನೀಡುತ್ತಿರುವ ಅತ್ಯುತ್ತಮ ಸೇವೆಗೆ ತಮ್ಮ ಸೇವಾವಧಿಯಲ್ಲಿ ಇನ್ನಷ್ಟು ಸೇವೆ ಸಿಗಲಿ ಎಂದು ಹಾರೈಸಿದರು.
ಡಾ| ಶ್ರೀಕಾಂತ್ ರಾವ್ ಮಾತನಾಡಿ, ತೀರ್ಥಹಳ್ಳಿ ಕ್ಯಾನ್ಸರ್ ಆಸ್ಪತ್ರೆಯು 25 ಕೋ.ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿದೆ. ಉಡುಪಿಯಲ್ಲಿ 100 ಹಾಸಿಗೆಗಳ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಕ್ಯಾನ್ಸರ್ ಆಸ್ಪತ್ರೆ ಸುಮಾರು 50 ಕೋ.ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಈ ಯೋಜನೆಗಳಿಗೆ ಬಂಡವಾಳವನ್ನು ಹೂಡಿಕೆ ದಾರರು, ಬ್ಯಾಂಕ್‌ಗಳು, ಎಂಐಒ ಒದಗಿಸಲಿದೆ. ಇದು ಉಡುಪಿ, ಉತ್ತರ ಕನ್ನಡ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳ ಕ್ಯಾನ್ಸರ್ ಬಾಧಿತರಿಗೆ ಗುಣಮಟ್ಟದ ಸೇವೆ ನೀಡಲು ಸಹಕಾರಿಯಾಗಲಿದೆ.
ಅಂತಾರಾಷ್ಟ್ರೀಯ ಮಾರ್ಗಸೂಚಿಗಳ ಆಧಾರದ ಮೇಲೆ ಉನ್ನತ ಮಟ್ಟದ ನೈತಿಕತೆ, ಸಹಾನುಭೂತಿಯೊಂದಿಗೆ ಆರಂಭಿಕ ಪತ್ತೆ, ಕ್ಯಾನ್ಸರ್ ಚಿಕಿತ್ಸೆಗಾಗಿ ಕೈಗೆಟಕುವ ಉತ್ತಮ ಗುಣಮಟ್ಟದ ಸೇವೆ ನೀಡುವುದನ್ನು ಎಂಐಒ ಮುಂದುವರಿಸುತ್ತದೆ ಎಂದು ತಿಳಿಸಿದರು.