ಮಲ್ಪೆ: ಮೀನುಗಾರರ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಕೇಂದ್ರ ಸರಕಾರದಿಂದ ಗರಿಷ್ಠ ಪ್ರಯೋಜನ ದೊರೆಯು ವಂತೆ ಮಾಡಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆಯ ಸಹಾಯಕ ಸಚಿವ ಪರಷೋತ್ತಮ ರೂಪಾಲ ಹೇಳಿದರು.
ಅವರು ರವಿವಾರ ಮಲ್ಪೆ ಮೀನುಗಾರ ಸಂಘದ ಸಮುದಾಯ ಭವನದಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಿದರು.
ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಯಾಂತ್ರಿಕ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್, ಮೀನುಗಾರ ಕ್ರಿಯಾ ಸಮಿತಿಯ ಅಧ್ಯಕ್ಷ ಜಯ ಸಿ. ಕೋಟ್ಯಾನ್, ನಾಡದೋಣಿ ಮೀನುಗಾರ ಸಹಕಾರ ಸಂಘದ ಗೋಪಾಲ ಆರ್.ಕೆ. ಮೀನುಗಾರರ ವಿವಿಧ ಬೇಡಿಕೆಗಳ ಬಗ್ಗೆ ಸಚಿವರ ಗಮನ ಸೆಳೆದರು. ಹಳೆಯ ಬೋಟುಗಳ ಪುನರ್ ನಿರ್ಮಾಣಕ್ಕೆ ಸಹಾಯಧನ, ರಾಜ್ಯದ ಪ್ರತೀ ಜಿಲ್ಲೆಗೆ ಮೀನುಗಾರಿಕಾ ಕೈಗಾರಿಕಾ ವಲಯ ಗುರುತಿ ಸುವುದು, ಬೋಟ್‌ಗಳಿಗೆ ರೋಡ್‌ಸೆಸ್ ರದ್ದತಿ, ಇತರ ರಾಜ್ಯದ ಮೀನು ಗಾರರಿಂದ ಕಿರು ಕುಳ ತಡೆಗೆ ಅಂತಾರಾಜ್ಯ ಸಮ ನ್ವಯ ಸಮಿತಿ ರಚನೆ, ರಾಜ್ಯಕ್ಕೆ ಕನಿಷ್ಟ ಎರಡು ಸೀ ಆ್ಯಂಬುಲೆನ್ಸ್ ಅಗತ್ಯ ಎಂಬುದರ ಸಹಿತ ಹಲವು ಬೇಡಿಕೆಗಳ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು.
ಶಾಸಕ ರಘುಪತಿ ಭಟ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಕೆ. ಜಯಪ್ರಕಾಶ್ ಹೆಗ್ಡೆ, ಕಾಪು ಶಾಸಕ ಲಾಲಾಜಿ ಅರ್. ಮೆಂಡನ್, ಮೈಸೂರು ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ರಾಜ್ಯ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಾಹಿಮ್, ಕೋಸ್ಟ್‌ಗಾರ್ಡ್ ಡಿಐಜಿ ಪಿ.ಕೆ. ಮಿಶ್ರಾ, ಮಿನುಗಾರಿಕೆ ಇಲಾಖೆ ನಿರ್ದೇಶಕ ರಾಮಾಚಾರ್ಯ, ಜಂಟಿ ನಿರ್ದೇಶಕ ಶಿವಕುಮಾರ್, ಮೂರು ಜಿಲ್ಲೆಗಳ ಮೀನುಗಾರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ ಸ್ವಾಗತಿಸಿ, ವಂದಿಸಿದರು.
ಮಲ್ಪೆಯಲ್ಲಿ ಸ್ವಾಗತ
ಸಾಗರ ಪರಿಕ್ರಮ ಉದ್ಘಾಟನೆ ಮತ್ತು ಮೀನುಗಾರರ ಜತೆಗೆ ಸಂವಾದದಲ್ಲಿ ಭಾಗವಹಿಸಲು ಆಗಮಿಸಿದ ಕೇಂದ್ರ ಸಚಿವ ಪರಷೋತ್ತಮ ರೂಪಾಲ ಅವರನ್ನು ಮಲ್ಪೆ ಮೀನುಗಾರರ ನೇತೃತ್ವದಲ್ಲಿ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು.
ಕೋಸ್ಟ್‌ಗಾರ್ಡ್‌ನ ವಿಕ್ರಮ್ ಹಡಗಿನಲ್ಲಿ ಕಾರವಾರದಿಂದ ಆಗಮಿಸಿದ್ದ ಸಚಿವರು ಶನಿವಾರ ರಾತ್ರಿ ಮಲ್ಪೆ ಸಮೀಪ ಸಮುದ್ರದಲ್ಲೇ ತಂಗಿದ್ದರು. ರವಿವಾರ ಬೆಳಗ್ಗೆ ರಾಜರಾಜೇಶ್ವರೀ ಟೂರಿಸ್ಟ್ ಬೋಟಿನಲ್ಲಿ ಅವರನ್ನು ಬಂದರಿಗೆ ಕರೆತರಲಾಯಿತು.