ಹುಬ್ಬಳ್ಳಿ: ಬಿಜೆಪಿ ನಾಯಕರು ಅಲ್ಪ ಸಂಖ್ಯಾತರ ಮತಗಳನ್ನು ಖರೀದಿಸಲು ಪ್ರಜಾಪ್ರಭುತ್ವ ವಿರೋಧಿ ಕೆಲಸಕ್ಕೆ ಮುಂದಾಗಿದ್ದು, ಇದನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಂದಾಗಬೇಕು ಎಂದು ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಹೇಳಿದರು.
ನೆಹರು ಮೈದಾನ ಬಳಿ ಇರುವ ಜೆಡಿಎಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಜಂಟಿ ಸಭೆಯಲ್ಲಿ ಮಾತನಾಡಿದ ಅವರು, ಮತ ಖರೀದಿಗಾಗಿ ಬಿಜೆಪಿ ನಾಯಕರು ಸಮಿತಿ ರಚಿಸಿದ್ದು, ಒಬ್ಬ ಕಾರ್ಯಕರ್ತನಿಗೆ 10 ಅಲ್ಪಸಂಖ್ಯಾತರ ಮತ ಖರೀದಿಸುವ ಹೊಣೆಗಾರಿಕೆ ನೀಡಲಾಗಿದೆ. ಇದಕ್ಕಾಗಿ ಅವರ ಮತದಾರರ ಗುರುತಿನ ಚೀಟಿ ಪಡೆದು 500-1000 ರೂ. ಹಂಚುವ ಸಾಧ್ಯತೆಗಳಿವೆ. ಚುನಾವಣೆ ನಂತರ ಗುರುತಿನ ಚೀಟಿ ಮರಳಿ ಕೊಡುವಂತೆ ಸೂಚನೆ ನೀಡಲಾಗಿದೆ. ಮತ ಖರೀದಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದರು.
ಶಕ್ತಿ ಬಂದಿದೆ: ಪ್ರಹ್ಲಾದ ಜೋಶಿಯವರನ್ನು ಸೋಲಿಸಬೇಕು ಎಂದು ಬಿಜೆಪಿಯಲ್ಲಿ ತಂತ್ರಗಾರಿಕೆ ನಡೆಯುತ್ತಿದೆ. ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡದವರನ್ನು ಸೋಲಿಸಲು ಕ್ಷೇತ್ರದ ಜನತೆ ಮನಸ್ಸು ಮಾಡಿದ್ದು, ಕಾಂಗ್ರೆಸ್-ಜೆಡಿಎಸ್ ಒಗ್ಗೂಡಿ ಚುನಾವಣೆ ಎದುರಿಸುತ್ತಿರುವುದು ಬಲ ತಂದಿದೆ. ರೈತರ ಸಾಲಮನ್ನಾ ಮಾಡುವಲ್ಲಿ ಕೇಂದ್ರ ವಿಫಲ, ಮಹದಾಯಿ ವಿಚಾರದಲ್ಲಿ ಸ್ಥಳೀಯ ಸಂಸದರಿಂದ ಹಿಡಿದು ಕೇಂದ್ರದ ನಿರ್ಲಕ್ಷ್ಯ ಸೇರಿದಂತೆ ಕಳೆದ 15 ವರ್ಷದಲ್ಲಿ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡದವರನ್ನು ಸೋಲಿಸಬೇಕಾಗಿದೆ ಎಂದು ಹೇಳಿದರು.
ಜನರಿಗೆ ವಂಚನೆ: ಉಜ್ವಲ ಅಡುಗೆ ಅನಿಲ ಹೆಸರಲ್ಲಿ ಬಡವರಿಗೆ ಕೇಂದ್ರ ಸರಕಾರ ಮೋಸ ಮಾಡುತ್ತಿದೆ. ಮೊದಲ ಸಿಲಿಂಡರ್ ಮಾತ್ರ ಸಬ್ಸಿಡಿಯಲ್ಲಿ ದೊರೆಯುತ್ತಿದ್ದು, ನಂತರದ ಸಿಲಿಂಡರ್‌ಗಳಿಗೆ ಯಾವುದೇ ಸಬ್ಸಿಡಿ ದೊರೆಯುತ್ತಿಲ್ಲ. ಬೇಟಿ ಪಡಾವೋ, ಬೇಟಿ ಬಚಾವೋ ಕಾರ್ಯಕ್ರಮ ಇನ್ನೂ ಅನುಷ್ಠಾನಗೊಂಡಿಲ್ಲ. ಕೇವಲ ಸುಳ್ಳು ಭರವಸೆ, ಭಾವನಾತ್ಮಕ ಭಾಷಣ, ಚುನಾವಣೆಗಾಗಿ ಕಾಮಗಾರಿಗಳಿಗೆ ಚಾಲನೆಯಂತಹ ನಾನಾ ತಂತ್ರಗಳಿಂದ ಜನರನ್ನು ವಂಚಿಸುವ ಕೆಲಸ ಬಿಜೆಪಿ ನಾಯಕರಿಂದ ನಡೆಯುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡುವ ಕೆಲಸ ಆಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ನಮ್ಮಲ್ಲಿನ ಭಿನಾಭಿಪ್ರಾಯಗಳು ನ್ಪೋಟಗೊಂಡು ಬಹಿರಂಗವಾಗಿ ಕಿತ್ತಾಡಿ ಅದಕ್ಕೆ ಪರಿಹಾರ ಕಂಡುಕೊಂಡು ಸಹೋದರರಂತೆ ಚುನಾವಣೆ ನಡೆಸುತ್ತಿದ್ದೇವೆ. ಆದರೆ ಬಿಜೆಪಿಯಲ್ಲಿ ಎಲ್ಲವೂ ಬೂದಿ ಮುಚ್ಚಿದ ಕೆಂಡದಂತಿದ್ದು, ತಮ್ಮ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಕತ್ತಿ ಮಸೆಯುತ್ತಿದ್ದಾರೆ. ನಾವೆಲ್ಲರೂ ಸೇರಿ ಪ್ರಾಮಾಣಿಕವಾಗಿ ಚುನಾವಣೆ ಮಾಡಿ ಕುಲಕರ್ಣಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಪ್ರಸಾದ ಅಬ್ಬಯ್ಯ, ರಾಜಣ್ಣ ಕೊರವಿ, ಅನಿಲಕುಮಾರ ಪಾಟೀಲ, ಗಂಗಾಧರ ಪಾಟೀಲ ಕುಲಕರ್ಣಿ ಮಾತನಾಡಿದರು.
ಮುಖಂಡರಾದ ಅಲ್ತಾಫ್ ಹಳ್ಳೂರ, ಗುರುರಾಜ ಹುಣಸೀಮರದ, ಗಣೇಶ ಟಗರಗುಂಟಿ, ಸದಾನಂದ ಡಂಗನವರ ಇದ್ದರು.
ಕಾಂಗ್ರೆಸ್‌ನಿಂದ ಶಿಸ್ತು ಸಮಿತಿ ರಚನೆ
ಹುಬ್ಬಳ್ಳಿ: ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯು ಶಿಸ್ತು ಸಮಿತಿಯನ್ನು ರಚಿಸಿದೆ. ಪಕ್ಷ ವಿರೋಧಿ ಚಟುವಟಿಕೆ ಹಾಗೂ ಪಕ್ಷದ ಶಿಸ್ತನ್ನು ಉಲ್ಲಂ ಸುವವರ ಮೇಲೆ ಸೂಕ್ತ ಕ್ರಮಕೈಗೊಳ್ಳುವ ಎಲ್ಲ ಅಧಿಕಾರವನ್ನು ಈ ಶಿಸ್ತು ಸಮಿತಿ ಹೊಂದಿದೆ. ಜತೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಹೊಸದಾಗಿ ಏಳು ಜನರನ್ನು ವಕ್ತಾರರನ್ನಾಗಿ ನೇಮಿಸಿದೆ. ಶಿಸ್ತು ಸಮಿತಿ ಅಧ್ಯಕ್ಷರಾಗಿ ರಾಬರ್ಟ್ ದದ್ದಾಪೂರಿ, ಪ್ರಕಾಶ ಘಾಟಗೆ, ಪ್ರಕಾಶ ಕ್ಯಾರಕಟ್ಟಿ, ಅನ್ವರ ಮಧೋಳ, ದಾಕ್ಷಾಯಣಿ ಬಸವರಾಜ, ಶೈಲಾ ಕಾಮರೆಡ್ಡಿ, ವಿಜನಗೌಡ ಪಾಟೀಲ, ಡಿ.ಎಂ. ದೊಡ್ಡಮನಿ, ಬಸವರಾಜ ಬೆಣಕಲ್ ನೇಮಕಗೊಂಡಿದ್ದಾರೆ. ವಕ್ತಾರರಾಗಿ ವೇದವ್ಯಾಸ ಕೌಲಗಿ,
ವಸಂತ ಲದವಾ ಮುಂದುವರಿದಿದ್ದು, ಹೊಸದಾಗಿ ಮಹೇಂದ್ರ ಸಿಂ , ಸ್ವಾತಿ ಮಳಗಿ, ನವೀದ ಮುಲ್ಲಾ, ರಾಜು ಎಚ್.ಎಂ., ನಾಗರಾಜ ಗುರಿಕಾರ ನೇಮಕಗೊಂಡಿದ್ದಾರೆ. ದೀಪಕ ಚಿಂಚೋರೆ, ಸುನೀಲ ಸಾಂಡ್ರಾ, ಗಂಗಾಧರ ದೊಡ್ಡವಾಡ ಅವರನ್ನು ಕೈಬಿಡಲಾಗಿದೆ ಎಂದು ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ತಾಫ ಹಳ್ಳೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನರೇಂದ್ರ ಮೋದಿಯನ್ನು ರಾಜಕೀಯವಾಗಿ ಬೆಳೆಸಿದ ಲಾಲಕೃಷ್ಣ ಆಡ್ವಾಣಿ ಅವರು ಮೂಲೆ ಸೇರಿದ್ದಾರೆ. ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಬಹುದಿತ್ತು. ಆದರೆ, ವೃದ್ಧಾಶ್ರಮಕ್ಕೆ ಸೇರಿಸಿದಂತಾಗಿದೆ.
ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ
ಜೋಶಿ ಅವರಿಗೆ ವೈಯಕ್ತಿಕ ಸಾಮರ್ಥ್ಯವಿಲ್ಲದ ಕಾರಣ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಅವರು ಕ್ಷೇತ್ರಕ್ಕೆ ಏನಾದರೂ ಕೊಡುಗೆ ನೀಡಿದ್ದರೆ ತಮ್ಮ ಹೆಸರಲ್ಲಿ ಮತ ಕೇಳುತ್ತಿದ್ದರು. ನನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಲೋಕಸಭಾ ಚುನಾವಣೆ ಘೋಷಣೆ ಪೂರ್ವ ಭೂಮಿಪೂಜೆ ಮಾಡಿದ್ದು, ಸ್ವಂತಿಕೆ ಇಲ್ಲ.
ವಿನಯ ಕುಲಕರ್ಣಿ, ಕೈ-ದಳ ಮೈತ್ರಿ ಅಭ್ಯರ್ಥಿ
ಶಾಂತಿಗೆ ಹೆಸರಾಗಿರುವ ಧಾರವಾಡ ಜಿಲ್ಲೆಯಲ್ಲಿ ಮುಕ್ತ ಮನಸ್ಸಿನ ಮತ್ತು ಕಳಂಕ ರಹಿತ ರಾಜಕಾರಣ ಇರಬೇಕು. ಬೆದರಿಸುವ, ಹೆದರಿಸುವ ಹಾಗೂ ದಬ್ಟಾಳಿಕೆ ರಾಜಕಾರಣಕ್ಕೆ ಅವಕಾಶ ನೀಡಬಾರದು. ಕಳೆದ ಮೂರು ಸಲ ಆಶೀರ್ವಾದ ಮಾಡಿರುವ ರೀತಿಯಲ್ಲಿ ಮತ್ತೂಮ್ಮೆ ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಸೇವೆ ಸಲ್ಲಿಸಲು ಅನುವು ಮಾಡಿಕೊಡಬೇಕು.
ಪ್ರಹ್ಲಾದ ಜೋಶಿ, ಬಿಜೆಪಿ ಅಭ್ಯರ್ಥಿ (ಮುಗದ ಗ್ರಾಮದಲ್ಲಿ)
ಅಲ್ಪಸಂಖ್ಯಾತರ ಮತ ಖರೀದಿಗೆ ಹೊರಟ ಬಿಜೆಪಿ ವಿರುದ್ಧ ಏ. 8 ರಂದು ಚುನಾವಣಾಧಿಕಾರಿಗೆ ದೂರು ನೀಡಲಾಗುವುದು. ಬಿಜೆಪಿ ನಾಯಕರ ಈ ಕಾರ್ಯ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವಂತಿದೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮತಗಳು ಡಿಲಿಟ್ ಆಗುತ್ತಿರುವುದು ವ್ಯವಸ್ಥಿತ ತಂತ್ರವಾಗಿದೆ.
ವಿನಯ ಕುಲಕರ್ಣಿ, ಕೈ-ದಳ ಮೈತ್ರಿ ಅಭ್ಯರ್ಥಿ (ಹುಬ್ಬಳ್ಳಿಯಲ್ಲಿ)