ಕುಂದಗೋಳ: ಸ್ಥಳೀಯ ವಿಧಾನಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಶನಿವಾರ ಆಗಮಿಸಿದ್ದ ಸಚಿವ ಯು.ಟಿ. ಖಾದರ್ ಎದುರು ಅಲ್ಪಸಂಖ್ಯಾತರ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ಆಗ ಸಮಾಧಾನಪಡಿಸಿದ ಸಚಿವರು, ನಾವು ಇರುತ್ತೇವೆ. ಮುಂದೆ ಹಾಗೆ ಆಗದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗದುಕೊಂಡು ಹೋಗುತ್ತೇವೆ. ಒಗ್ಗಟ್ಟಾಗಿ ಚುನಾವಣೆ ಮಾಡಿ ಎಂದು ಸೂಚಿಸಿದರು.
ಬ್ಲಾಕ್ ಅಧ್ಯಕ್ಷರ ಹೊಣೆ: ಸಚಿವ ಖಾದರ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿಗೆ ಹೆಚ್ಚು ಮತಗಳು ಬಿದ್ದಿವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರನ್ನು ಗೆಲ್ಲಿಸಬೇಕೆಂದು ಹೇಳಿದರು.
ಪಟ್ಟಣದಲ್ಲಿ 16 ವಾರ್ಡ್ ಗಳಿವೆ. ಪ್ರತಿ ವಾರ್ಡ್‌ಗೆ ಒಂದರಂತೆ ಕೋರ್ ಕಮಿಟಿ ರಚಿಸಿ ಆಯಾ ವಾರ್ಡ್‌ಗಳ ಮತದಾರರನ್ನು ಖುದ್ದಾಗಿ ಭೇಟಿ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಬೇಕು. ಗ್ರಾಮ ಬಿಟ್ಟು ಗುಳೇ ಹೋದವರ ಪಟ್ಟಿ ಮಾಡಿ ಮತದಾನಕ್ಕೆ ಕರೆಸುವ ಜವಾಬ್ದಾರಿ ಬ್ಲಾಕ್ ಅಧ್ಯಕ್ಷರು ಹೊರಬೇಕು ಎಂದರು.
Advertisement
ಪಟ್ಟಣದ ಅಜೀಜ್ ಕ್ಯಾಲಕೊಂಡ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಪಂ ಅಧ್ಯಕ್ಷ ಹಾಸಂಬಿ ಛಡ್ಡಿ ಅವರ ಪುತ್ರ ಯುಸೂಪ್ ಛಡ್ಡಿ ಮಾತನಾಡಿ, ಇಲ್ಲಿಯವರಿಗೂ ಪಕ್ಷದ ಯಾವ ಕೆಲಸ ಕಾರ್ಯಗಳಿಗೂ ಕರೆದಿಲ್ಲ. ನಮಗೆ ಯಾವ ಜವಾಬ್ದಾರಿ ವಹಿಸುತ್ತಿಲ್ಲ. ಪಪಂ ಸದಸ್ಯ ಹಾಗೂ ಅಧ್ಯಕ್ಷರನ್ನು ವೇದಿಕೆಗಾಗಲಿ, ಇನ್ನಿತರ ಚಟುವಟಿಕೆಗಳಾಗಲಿ ಆಹ್ವಾನಿಸುವುದಿಲ್ಲ. ಇಲ್ಲಿನ ಕಾಂಗ್ರೆಸ್ ಮುಖಂಡರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾದರೆ ನಾವು ಹೇಗೆ ಚುನಾವಣೆ ಮಾಡಬೇಕು. ಈಗ ಉಪ ಚುನಾವಣೆ ಬಂದಿದೆ ಎಂದು ನಮಗೆ ಮೊಬೈಲ್ ಕರೆ ಮಾಡಿ ಕರೆಯುತ್ತಿದ್ದಾರೆ. ಕಳೆದ ಚುನಾವಣೆಯಲ್ಲೂ ಹೀಗೇ ಆಯಿತು ಎಂದು ಅಸಮಾಧಾನ ಹೊರಹಾಕಿದರು.
Related Articles
Advertisement
ಅರವಿಂದ ಕಟಗಿ, ಶಂಕರಗೌಡ ದೊಡ್ಡಮನಿ, ಷಣ್ಮುಖ ಶಿವಳ್ಳಿ, ಸಕ್ರಪ್ಪ ಲಮಾಣಿ, ಅಜ್ಜಪ್ಪ ಕುಡವಕ್ಕಲ, ಅಜೀಜ್ ಕ್ಯಾಲಕೊಂಡ, ಖೈಯೀಮ ನಾಲಬಂದ್, ಇಲಿಯಾಸ್ ಕಿತ್ತೂರ, ಬಸವರಾಜ ದೊಡಮನಿ, ಸಲೀಮ ಕ್ಯಾಲಕೊಂಡ, ನಾಸೀರ ಭಾಣಿ, ಮಕ್ತುಮಸಾಬ್ ಹುಲಗೂರ ಇದ್ದರು.