ಹುಬ್ಬಳ್ಳಿ: ರಾಜ್ಯಸಭೆ ಚುನಾವಣೆಯಲ್ಲಿ ಕೋಮುವಾದಿ ಪಕ್ಷದ ಅಭ್ಯರ್ಥಿ ಸೋಲಿಸಬೇಕೆಂದು ಜಾತ್ಯತೀತದಲ್ಲಿ ನಂಬಿಕೆ ಇರುವವರು ಆತ್ಮಸಾಕ್ಷಿಯಿಂದ ಮತ ಹಾಕುತ್ತಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅಲ್ಪಸಂಖ್ಯಾತ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಅವರು ಗೆಲ್ಲುವ ವಿಶ್ವಾಸವಿದೆ. ಮೊದಲು ನಾವು ಅಭ್ಯರ್ಥಿ ಹಾಕಿದ್ದೇವೆ. ತದನಂತರ ಜೆಡಿಎಸ್ ಅಭ್ಯರ್ಥಿ ಘೋಷಿಸಿದ್ದಾರೆ. ಕೋಮುವಾದಿ ಬಿಜೆಪಿ ಪಕ್ಷ ಸೋಲಿಸಲು ಅವರು ನಮಗೆ ಸಹಕರಿಸಬೇಕಿತ್ತು ಎಂದರು.
ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆಗೆ ನಿಂತಾಗ ನಾವು ಸಹಕರಿಸಿದ್ದೇವು. ಅವರು ಸಹ ಈಗ ಸಹಕರಿಸಬೇಕಿತ್ತು. ದೇವೇಗೌಡರು ಗೆಲ್ಲಬೇಕೆಂಬ ಇಚ್ಛೆ ಅವಾಗ ನಮ್ಮದ್ದಿತ್ತು. ಅದೇ ರೀತಿ ಅವರು ನಮ್ಮ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕಿತ್ತು. ಈಗ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದು ಅಂದರೇನು ಎಂದು ಪ್ರಶ್ನಿಸಿದರು.
ರಾಷ್ಟ್ರೀಯ ನಾಯಕರು ತೀರ್ಮಾನಕ್ಕೆ ನಮ್ಮ ಅಭಿಪ್ರಾಯ ಕೇಳುತ್ತಾರೆ. ಚಡ್ಡಿಗಳು ಇನ್ನೇನು ಕೆಲಸ ಮಾಡುತ್ತಾರೆ. ಅವರು ಚಡ್ಡಿ ಕೆಲಸಾನೇ ಮಾಡುವುದು. ಆರ್ ಎಸ್ ಎಸ್ ಕೋಮುವಾದಿ ಸಂಘಟನೆ ಎಂದು ಮೊದಲಿನಿಂದಲೂ ಹೇಳುತ್ತಿದ್ದೇನೆ ಇದು ಹೊಸದಲ್ಲ. ಸರಸಂಘ ಸಂಚಾಲಕರು 97 ವರ್ಷದಲ್ಲಿ ಒಂದೇ ಜಾತಿಯವರು ಇದ್ದಾರೆ. ಬೇರೆ ಜಾತಿಯವರು ಸಂಘದಲ್ಲಿ ಯಾಕಿಲ್ಲ. ಸತ್ಯವನ್ನು ಸುಲಭವಾಗಿ ತಳ್ಳಿಹಾಕಲು ಆಗುವುದಿಲ್ಲ ಎಂದರು.
ಬಹಳ ವರ್ಷದಿಂದ ಹೇಳುತ್ತಿದ್ದೇನೆ. ನಾನು ಸುಟ್ಟುಹೋಗಿಲ್ಲ. ಗಾಂಧೀಜಿ ಅವರನ್ನು ಗೋಡ್ಸೆ ಕೊಲೆ ಮಾಡಿದ್ದಾಗ ಆರ್ ಎಸ್ಎಸ್ ಬ್ಯಾನ್ ಮಾಡಲಾಗಿತ್ತು. ನಂತರ ತೆಗೆದು ಹಾಕಲಾಗಿತ್ತು ಎಂದರು.