ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಅಲ್ಪಸಂಖ್ಯಾಕರು ಶೇ.100ರಷ್ಟು ಸುರಕ್ಷಿತವಾಗಿದ್ದಾರೆ. ಅಸಹಿಷ್ಣುತೆಯ ಘಟನೆಗಳು ಹಾಲಿ ಸರಕಾರದ ಆಳ್ವಿಕೆಯಲ್ಲಿ ಹೆಚ್ಚಾಗಿವೆ ಎಂಬ ವಿಚಾರ ಸತ್ಯಕ್ಕೆ ದೂರವಾದುದು ಎಂದು ರಾಷ್ಟ್ರೀಯ ಅಲ್ಪಸಂಖ್ಯಾಕರ ಆಯೋಗದ (ಎನ್‌ಸಿಎಂ) ಇಕ್ಬಾಲ್ ಸಿಂಗ್ ಲಾಲ್‌ಪುರ ತಿಳಿಸಿದ್ದಾರೆ.
ಇದನ್ನೂ ಓದಿ;“ಒಬ್ಬ ಮಹಿಳೆಯ ಹಣೆಗೆ ಸಿಂಧೂರ ಹಚ್ಚಿದರೆ ಮಾತು ಕೊಟ್ಟಂತೆ’: ಅಲಹಾಬಾದ್ ಹೈಕೋರ್ಟ್
ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದ ನಂತರ ಅಲ್ಪಸಂಖ್ಯಾಕರ ಮೇಲಿನ ದೌರ್ಜನ್ಯ ಜಾಸ್ತಿಯಾಗಿವೆ’ ಎಂಬ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಆರೋಪಕ್ಕೆ ಈ ಸ್ಪಷ್ಟನೆ ನೀಡಿದ್ದಾರೆ.
ಅಂಕಿಅಂಶಗಳ ಪ್ರಕಾರವೂ ಕೂಡಾ ದೇಶದಲ್ಲಿ ಗಲಭೆ, ಕೊಲೆ ಹಾಗೂ ಥಳಿತದಂತಹ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವುದಾಗಿ ಲಾಲ್ ಪುರ ಹೇಳಿದರು. ಈ ಹಿಂದೆ ಏನು ನಡೆದಿತ್ತು ಎಂಬುದನ್ನು ಪುನರಾವಲೋಕನ ಮಾಡಿಕೊಳ್ಳಿ, ಅಲಿಗಢ್ ಗಲಭೆ ನಡೆದ ಸಂದರ್ಭದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿ ಇಲ್ಲದಿರುವ ರಾಜ್ಯಗಳಲ್ಲಿಯೂ ಗಲಭೆ ನಡೆಯುತ್ತಿದೆ ಎಂಬುದನ್ನು ಕೇಳಿದ್ದೇವೆ. ನಾನೊಬ್ಬ ಸಾಂವಿಧಾನಿಕ ಸಂಸ್ಥೆಯ ವ್ಯಕ್ತಿಯಾಗಿ ಹೇಳುವುದಾದರೆ, ಅಂಕಿ ಅಂಶಗಳ ಪ್ರಕಾರವೂ ಈಗ ಗಲಭೆ, ಕೊಲೆ, ಸುಲಿಗೆಯಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದಾಗಿ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.