Advertisement

ಸಮ್ಮಿಶ್ರಕ್ಕೆ ಅಲ್ಪ ಯಶಸ್ಸು

12:40 PM Jul 14, 2019 | Sriram |

ಬೆಂಗಳೂರು: ವಿಶ್ವಾಸಮತ ಯಾಚನೆಗೆ ಹೊರಟಿರುವ ಮೈತ್ರಿ ಸರಕಾರದ ನಾಯಕರು ಮ್ಯಾಜಿಕ್‌ ಸಂಖ್ಯೆಯನ್ನು ಹೊಂದಿ ಸಿಕೊಳ್ಳಲು ಅತೃಪ್ತ ಶಾಸಕರ “ರಿವರ್ಸ್‌ ಆಪರೇಷನ್‌’ನ ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಮೂರು ದಿನಗಳ ಹಿಂದೆಯಷ್ಟೇ ರಾಜೀ ನಾಮೆ ನೀಡಿದ್ದ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್‌ ಜತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಹಿತ ಹಲವು ನಾಯಕರು 16 ತಾಸುಗಳ ಕಾಲ ನಡೆಸಿದ ಸಂಧಾನ ಯಶಸ್ವಿಯಾಗಿದೆ.

“ನಾನು ಕಾಂಗ್ರೆಸ್‌ನಲ್ಲಿಯೇ ಉಳಿಯುತ್ತೇನೆ. ಜತೆಗೆ ರಾಜೀನಾಮೆ ಹಿಂಪಡೆಯು ತ್ತೇನೆ. ಡಾ| ಕೆ. ಸುಧಾಕರ್‌ ಸೇರಿದಂತೆ ಇತರ ಸ್ನೇಹಿತರನ್ನು ಮನವೊಲಿಸುತ್ತೇನೆ’ ಎಂದು ಎಂಟಿಬಿ ನಾಗರಾಜ್‌ ಶನಿವಾರ ರಾತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಘೋಷಿಸಿದ್ದಾರೆ. ಇದರೊಂದಿಗೆ ಮೈತ್ರಿ ಸರಕಾರದ “ವಿಶ್ವಾಸ’ಕ್ಕೆ ಗುಟುಕು ಜೀವ ಬಂದಿದೆ. ಇನ್ನೊಂದೆಡೆ, ಚಿಕ್ಕಬಳ್ಳಾಪುರ ಶಾಸಕ ಡಿ. ಸುಧಾಕರ್‌ ಯಾರ ಕೈಗೂ ಸಿಗದೆ ಮುಂಬಯಿಗೆ ತೆರಳಿದ್ದಾರೆ. ಅಷ್ಟೇ ಅಲ್ಲ, ಮುಂಬಯಿಯಲ್ಲಿರುವ ಶಾಸಕರು ಯಾವುದೇ ಸಕಾರಾತ್ಮಕ ಸಂದೇಶ ಕಳುಹಿಸದೆ ಇರುವುದು ಮೈತ್ರಿ ಆತಂಕವನ್ನು ಹೆಚ್ಚಿಸಿದೆ.

ರಾಜೀನಾಮೆ ನೀಡಿ ರಾಜಧಾನಿಯಲ್ಲಿಯೇ ಉಳಿದಿರುವ ಶಾಸಕರ ಮನವೊಲಿಕೆ ಹೊಣೆಯನ್ನು ಸಚಿವ ಡಿ.ಕೆ. ಶಿವಕುಮಾರ್‌ ವಹಿಸಿದ್ದರು. ಬೆಳ್ಳಂಬೆಳಗ್ಗೆ ಸಚಿವ ಡಿ.ಕೆ. ಶಿವ ಕುಮಾರ್‌ ಅವರು ಎಂಟಿಬಿ ನಾಗರಾಜ್‌ ಮನೆಗೆ ಭೇಟಿ ಮಾಡಿ ಸಂಧಾನ ಪ್ರಕ್ರಿಯೆಗೆ ಚಾಲನೆ ನೀಡಿದರು. ಅನಂತರ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾದರು.

ರಾಮಲಿಂಗಾ ರೆಡ್ಡಿ- ರೋಷನ್‌ ಬೇಗ್‌, ಎಂಟಿಬಿ ನಾಗರಾಜ್‌- ಡಾ| ಕೆ. ಸುಧಾಕರ್‌ ಒಪ್ಪಿ ಕೊಂಡರೆ ಮುಂಬಯಿಯಲ್ಲಿರುವ ನಾಲ್ವರು ಒಪ್ಪಿಕೊಳ್ಳುತ್ತಾರೆ. ಅನಂತರ ಪಕ್ಷೇತರರನ್ನೂ ಸೆಳೆಯಬಹುದು ಎಂಬ ಲೆಕ್ಕಾಚಾರ ಮೈತ್ರಿ ನಾಯಕರದ್ದು. ಮಂಗಳವಾರ ಸುಪ್ರೀಂ ತೀರ್ಪು ಬರುವ ಮುನ್ನ ಮನವೊಲಿಕೆ ಪೂರ್ಣ ಗೊಳಿಸಬೇಕೆನ್ನುವುದು ಮೈತ್ರಿ ನಾಯಕರ ಉದ್ದೇಶ ಎನ್ನಲಾಗಿದೆ.

Advertisement

ಮಾತುಕತೆ ಬಿರುಸುಗೊಳಿಸಲು ಕೇಂದ್ರ ನಾಯಕರಾದ ಗುಲಾಮ್‌ ನಬಿ ಆಜಾದ್‌ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಬೆಂಗಳೂರಿಗೆ ಆಗಮಿಸಿದ್ದಾರೆ.

ರಾಮಲಿಂಗಾ ರೆಡ್ಡಿ ಹಿಂದೆಗೆಯುತ್ತಾರಾ?
ಹಿರಿಯ ಶಾಸಕರಾದ ರಾಮಲಿಂಗಾ ರೆಡ್ಡಿ ಮತ್ತು ರೋಷನ್‌ ಬೇಗ್‌ ಜತೆ ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸೋಮವಾರ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸುವುದಾಗಿ ರೆಡ್ಡಿ ಸ್ಪಷ್ಟಪಡಿಸಿದ್ದು, ರಾಜೀನಾಮೆ ಹಿಂದೆಗೆತದ ಬಗ್ಗೆ ಸ್ಪಷ್ಟತೆ ನೀಡಿಲ್ಲ.

ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವ ರಾಜ್‌, ಮುನಿರತ್ನ ಮತ್ತು ಗೋಪಾಲಯ್ಯ ಆಪ್ತರ ಮೂಲಕ ಒತ್ತಡ ಹಾಕಿಸಿ ರಾಜೀನಾಮೆ ವಾಪಸ್‌ ಪಡೆಯುವ ಪ್ರಯತ್ನಗಳೂ ನಡೆಯುತ್ತಿವೆ.

ಮತ್ತೆ ಐವರು ಸುಪ್ರೀಂಗೆ
“ಒಂದೆಡೆ ಮನವೊಲಿಕೆ ಪ್ರಯತ್ನ’ ನಡೆಯು ತ್ತಿರುವಂತೆಯೇ ತಮ್ಮ ರಾಜೀನಾಮೆ ಆದಷ್ಟು ಬೇಗ ಅಂಗೀಕರಿಸಬೇಕು ಎಂದು ಐವರು ಕಾಂಗ್ರೆಸ್‌ ಶಾಸಕರು ಶನಿವಾರ ಸುಪ್ರೀಂ ಮೆಟ್ಟಿಲೇರಿದ್ದಾರೆ.

10 ಅತೃಪ್ತ ಶಾಸಕರ ಅರ್ಜಿಗಳು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿವೆ. ಈಗ ಮತ್ತೆ ಆನಂದ್‌ ಸಿಂಗ್‌, ಕೆ. ಸುಧಾಕರ್‌, ಎಂಟಿಬಿ ನಾಗರಾಜ್‌, ಮುನಿರತ್ನ ಮತ್ತು ರೋಷನ್‌ ಬೇಗ್‌ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ.

ವಿಶ್ವಾಸ ವಿಫ‌ಲಕ್ಕೆ
ಬಿಜೆಪಿ ರಣತಂತ್ರ
ಯಲಹಂಕ/ಬೆಂಗಳೂರು: ಮೈತ್ರಿ ಸರಕಾರದ ವಿಶ್ವಾಸವನ್ನು ವಿಫ‌ಲಗೊಳಿಸಲು ಬಿಜೆಪಿ ರಣತಂತ್ರ ಆರಂಭಿಸಿದೆ. ಮುಂದಿನ ವಾರದಲ್ಲಿ ಬಿಜೆಪಿ ಸರಕಾರ ರಚನೆಯಾಗಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಸಮೀಪದ ರಮಡಾ ರೆಸಾರ್ಟ್‌ನಲ್ಲಿ ಇರುವ ಶಾಸಕರಿಗೆ ಯಡಿಯೂರಪ್ಪ ಧೈರ್ಯ ತುಂಬಿದ್ದಾರೆ. ಶಾಸಕರು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಊಹಾಪೋಹ, ವದಂತಿಗಳ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಡಿ. ಈಗಾಗಲೇ ರಾಜೀನಾಮೆ ನೀಡಿರುವ ಕಾಂಗ್ರೆಸ್‌, ಜೆಡಿಎಸ್‌ನ ಅತೃಪ್ತ ಶಾಸಕರು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಯಡಿಯೂರಪ್ಪ ಶಾಸಕರಿಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ ವಿಶ್ವಾಸಕ್ಕೆ ಗೌಡರ ಸಲಹೆ
ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಪ್ರಸಕ್ತ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಅತೃಪ್ತರ ಮನವೊಲಿಕೆಗೆ ಮುಂದಾಗಬೇಕು. ಯಾವುದೇ ರೀತಿಯ ಭರವಸೆ ಕಾಂಗ್ರೆಸ್‌ ನಾಯಕರ ಜತೆ ಮಾತ ನಾಡಿಯೇ ನೀಡಬೇಕು. ಈ ವಿಚಾರದಲ್ಲಿ ಸಮನ್ವಯತೆ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. 2 ದಿನಗಳಲ್ಲಿ ಸಿಎಂ ಎಚ್‌.ಡಿ. ಕುಮಾರ ಸ್ವಾಮಿಯವರು ಸುಮಾರು 3 ಬಾರಿ ದೇವೇಗೌಡ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ದೇವೇಗೌಡರು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಗುಲಾಂ ನಬಿ ಆಜಾದ್‌ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಗುಲಾಂ ನಬಿ ಆಜಾದ್‌ ಮತ್ತೆ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಬಿಜೆಪಿ ಶಾಸಕರಿಗೆ ಗಾಳ
ಇದರ ನಡುವೆ ಬಿಜೆಪಿಯ ನಾಲ್ವರು ಶಾಸಕರಿಗೆ ಕುಮಾರಸ್ವಾಮಿ ಗಾಳ ಹಾಕಿದ್ದು, ನಾಲ್ವರಿಗೂ ಸಚಿವ ಸ್ಥಾನದ ಭರವಸೆ ನೀಡಲಾಗಿದೆ. ಜೆಡಿಎಸ್‌ನಲ್ಲಿದ್ದು ಬಿಜೆಪಿಗೆ ಹೋಗಿ ಶಾಸಕರಾಗಿರುವವರನ್ನು ಸಂಪರ್ಕಿಸುವ ಕೆಲಸ ನಡೆಯುತ್ತಿದೆ.ಬಿಜೆಪಿಯವರಿಗೆ ಅಚ್ಚರಿ ಮೂಡಿಸುವ ರೀತಿಯಲ್ಲಿ ಅಂತಿಮ ಕ್ಷಣದಲ್ಲಿ ನಾಲ್ಕು ಬಿಜೆಪಿ ಶಾಸಕರನ್ನು ತಮ್ಮತ್ತ ಸೆಳೆದು ಸರಕಾರ ಉಳಿಸಿಕೊಳ್ಳಲು ರಹಸ್ಯ ಕಾರ್ಯಾಚರಣೆ ಮಾಡಲಾಗುತ್ತಿದೆ ಎನ್ನಲಾಗಿದೆ.

107ರ ಮೇಲೆ ಕಣ್ಣು
ಮೈತ್ರಿ ಲೆಕ್ಕಾಚಾರ
ಸದ್ಯ ವಿಧಾನಸಭೆ ಬಲ (ರಾಜೀನಾಮೆ ಅಂಗೀಕಾರಗೊಂಡರೆ) 210 ಇದೆ. ಬಹುಮತಕ್ಕೆ 106 ಸದಸ್ಯ ಬಲ ಬೇಕು. ಸದ್ಯ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಎಸ್‌ಪಿ ಸೇರಿ 101 ಶಾಸಕ ರಿದ್ದಾರೆ. ಎಂ.ಟಿ.ಬಿ. ನಾಗರಾಜ್‌ ಹಿಂದೆೆಗೆದುಕೊಂಡಿ ರುವುದರಿಂದ ಮೈತ್ರಿ ಬಲ 102. ರಾಮಲಿಂಗಾ ರೆಡ್ಡಿ, ಬೇಗ್‌, ಸುಧಾಕರ್‌ ಹಿಂಪಡೆದರೆ ಸಂಖ್ಯೆ 105ಕ್ಕೆ ಏರಲಿದೆ. ಪಕ್ಷೇತರರನ್ನು ಮತ್ತೆ ಸೆಳೆದರೆ 107ಕ್ಕೆ ಹೆಚ್ಚಳವಾಗಲಿದೆ- ಇದು ಮೈತ್ರಿ ಲೆಕ್ಕಾಚಾರ.

ಮತ್ತೆ ರಾಜೀನಾಮೆ?
ಬಿಜೆಪಿ ಲೆಕ್ಕಾಚಾರ
105 ಶಾಸಕರ ಬಲದೊಂದಿಗೆ ಇಬ್ಬರು ಪಕ್ಷೇತರರು ಈಗಾಗಲೇ ಬೆಂಬಲ ಘೋಷಿಸಿರುವುದರಿಂದ ಬಿಜೆಪಿ ಶಾಸಕರ ಬಲ ಈಗ 107. ಬಹುಮತಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು, ಮಹಿಳಾ ಶಾಸಕಿಯರು ಸೇರಿದಂತೆ ಇನ್ನೂ ಮೂರ್‍ನಾಲ್ಕು ಮಂದಿ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳಿವೆ. ಆ ಬೆಳವಣಿಗೆಯಾದರೆ ಬಿಜೆಪಿಯ ಸಂಖ್ಯಾಬಲ ಮ್ಯಾಜಿಕ್‌ ಸಂಖ್ಯೆಗಿಂತಲೂ ಹೆಚ್ಚಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next