ಕೆಜಿಎಫ್: ನಗರದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಚಾಲನಾ ಪರವಾನಗಿ ಇಲ್ಲದೆ ದ್ವಿಚಕ್ರ ವಾಹನಗಳನ್ನು ಓಡಿಸುವುದು, ವ್ಹೀಲಿಂಗ್ ಮಾಡುವುದು ಹೆಚ್ಚಾಗಿದ್ದು, ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಾಗಿದೆ ಸಾರ್ವಜನಿಕರು ಆರೋಪಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೆಚ್ಚಾಗಿ ಬೈಕ್‌ಗಳಲ್ಲಿ ಬರುತ್ತಿದ್ದರು, ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯವರು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. 18 ವರ್ಷದೊಳಗಿನ ಬಾಲಕ, ಬಾಲಕಿಯರು ಚಾಲನಾ ಪರವಾನಗಿ ಇಲ್ಲದೇ ವಾಹನ ಚಾಲನೆ ಮಾಡುವುದು ಅಪರಾಧವಾಗಿದೆ. ಮಕ್ಕಳಿಗೆ ವಾಹನ ನೀಡುವ ಮೂಲಕ ಪೋಷಕರು, ತಮ್ಮದೇ ಮಕ್ಕಳ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ.
ಶಾಲಾ ಆಡಳಿತ ಮಂಡಳಿ ಪೋಷಕರಿಗೆ ನಿರ್ದೇಶನ ನೀಡುತ್ತಿಲ್ಲ: ಮಕ್ಕಳಿಗೆ ಚಲಾಯಿಸಲು ವಾಹನ ನೀಡಿದರೆ ಪೋಷಕರು ಅಥವಾ ವಾಹನ ಮಾಲೀಕರಿಗೆ ಶಿಕ್ಷೆಯಾಗುತ್ತದೆ ಎಂಬ ಕಾನೂನು ಇದ್ದರೂ, ನಗರದಲ್ಲಿನ ಪೋಷಕರು ತಲೆಕಡಿಸಿಕೊಂಡಿಲ್ಲ. ಶಾಲಾ ಕಾಲೇಜುಗಳಿಗೆ ದ್ವಿಚಕ್ರ ವಾಹನಗಳನ್ನು ಚಲಾಯಿಸಿಕೊಂಡು ಬರುವ ಮಕ್ಕಳ ಪೋಷಕರಿಗೆ ಶಾಲಾ ಆಡಳಿತ ಮಂಡಳಿಯವರು ಈ ಬಗ್ಗೆ ಸೂಕ್ತ ನಿರ್ದೇಶನ ನೀಡುತ್ತಿಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ದೂರುಗಳಾಗಿದೆ. ಬೈಕ್, ಸ್ಕೂಟರ್‌ಗಳಲ್ಲಿ ಕಾಲೇಜಿಗೆ ಬರುವ ಹುಡುಗರು ಸಂಚಾರ ನಿಯಮಗಳನ್ನು ಉಲ್ಲಂಘಿ ಸುತ್ತಿದ್ದಾರೆ, ಹೆಲ್ಮೆಟ್ ಧರಿಸುವುದಿಲ್ಲ, ಒಂದು ಬೈಕ್‌ನಲ್ಲಿ ಮೂವರು, ನಾಲ್ವರನ್ನು ಕೂರಿಸಿಕೊಂಡು ಮನಬಂ ದಂತೆ ಅತಿ ವೇಗದಲ್ಲೂ ಬೈಕ್‌ಗಳನ್ನು ಚಲಾಯಿಸುತ್ತಾರೆ. ಮೊಬೈಲ್‌ನಲ್ಲಿ ಮಾತನಾಡುತ್ತಾ ಬೈಕ್ ಚಲಾಯಿಸುವರ ಸಂಖ್ಯೆ ಹೆಚ್ಚಾಗಿದೆ.
ಶಾಲಾ ಪಕ್ಕದ ಅಂಗಡಿ, ಬಂಕ್‌ಗಳಲ್ಲಿ ಬೈಕ್ ನಿಲುಗಡೆ: ಇನ್ನು ಕೆಲವರು ಮೀಲಿಂಗ್ ಕೂಡ ಮಾಡುತ್ತಾರೆ. ಕೆಲವು ಮಕ್ಕಳು ಪೋಷಕರಿಗೆ ಟ್ಯೂಶನ್‌ಗೆ ಹೋಗಿ ಬರುವುದಾಗಿ ಹೇಳಿ, ಬೈಕ್‌ಗಳನ್ನು ತೆಗೆದುಕೊಂಡು ಹೊರಬರುತ್ತಾರೆ. ಆದರೆ ಟ್ಯೂಶನ್‌ಗೆ ಹೋಗದೆ ಮುಖ್ಯ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಸುತ್ತುವುದು ಹೆಚ್ಚಾಗಿದ್ದು, ಟ್ಯೂಶನ್ ಶಿಕ್ಷಕರು ಸಹ ಇದರ ಬಗ್ಗೆ ಯಾವ ಮಕ್ಕಳಿಗೂ ಬೈಕ್ ತರಬಾರದು ಎಂದು ತಿಳಿ ಹೇಳಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ನಗರದ ಪ್ರತಿಷ್ಠಿತ ಶಾಲಾ ಕಾಲೇಜುಗಳಿಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬೈಕ್‌ನಲ್ಲಿ ಬರುತ್ತಾರೆ, ಕೆಲವು ಶಾಲೆಗಳಲ್ಲಿ ಮಕ್ಕಳು ಬೈಕ್ ತರಬಾರದು ಎಂದು ಶಾಲಾ ಆಡಳಿತ ಮಂಡಳಿಯವರು ಸೂಚನೆ ನೀಡಿದ್ದಾರೆ. ಆದರೂ ಕೆಲವೊಂದು ಮಕ್ಕಳು ಬೈಕ್‌ನಲ್ಲಿ ಬಂದು ಶಾಲೆಯ ಸಮೀಪವಿರುವ ಪೆಟ್ರೋಲ್ ಬಂಕ್, ಬಸ್ ನಿಲ್ದಾಣ, ರಸ್ತೆಗಳ ಪಕ್ಕದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಕಾಲೇಜಿಗೆ ಬರುತ್ತಿದ್ದಾರೆ ಎನ್ನಲಾಗಿದೆ.
ಮುಖ್ಯ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ : ಕೆಲವು ಪಡ್ಡೆ ಹುಡುಗರು, ಬೈಕ್‌ಗಳಲ್ಲೇ ಸ್ಟಂಟ್ ಮಾಡುತ್ತಾ, ಗಾಡಿಗಳನ್ನು ಓಡಿಸುವ ಮೂಲಕ ಅಮಾಯಕ ಜನರನ್ನು ಹೆದರಿಸುತ್ತಾರೆ. ಒಬ್ಬರು ವ್ಹೀಲಿಂಗ್ ಮಾಡುತ್ತಿದ್ದರೆ ಮತ್ತೆ ಕೆಲವರು ಹಿಂದೆ ಗಾಡಿಗಳಲ್ಲಿ ಕುಳಿತು ಮೊಬೈಲ್‌ನಲ್ಲಿ ವಿಡಿಯೋಗಳನ್ನು ಮಾಡುವುದು ಹೆಚ್ಚಾಗಿದೆ. ವಿಡಿಯೋ ಮಾಡುವ ಸಂದರ್ಭದಲ್ಲಿ ಇವರನ್ನು ನೋಡುವುದಕ್ಕೆ ಕೆಲವರು ರಸ್ತೆಯಲ್ಲಿ ನಿಲ್ಲುತ್ತಾರೆ, ಇದರಿಂದ ಅಪಘಾತಗಳೂ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ವೀಲಿಂಗ್ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ವೀಲಿಂಗ್ ಮಾಡುವವರ ವಿರುದ್ಧ ಹಾಗೂ ಅಂತಹ ಮಕ್ಕಳ ಪೋಷಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ. ಮಕ್ಕಳಿಗೆ ಬುದ್ಧಿ ಹೇಳಿ ಮುಂದಾಗುವ ಅವಘಡವನ್ನು ತಡೆಯುವಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಪೋಷಕರು ಮುಂದಾಗಬೇಕು. ಶಾಲಾ ಆಡಳಿತ ಮಂಡಳಿಗಳಿಗೆ ಸೂಕ್ತ ನಿರ್ದೇಶನ ನೀಡಿ ಮಕ್ಕಳು ಕಾಲೇಜಿಗೆ ಬೈಕ್ ತರದಂತೆ ನಿಯಮಾವಳಿ ಹಾಕಬೇಕೆಂದು ಜನರು ಆಗ್ರಹಿಸಿದ್ದಾರೆ.
ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಪರವಾ ನಿಗೆ ಇಲ್ಲದೆ ವಾಹನವನ್ನು ಚಾಲಾಯಿಸ ಬಾರದೆಂದು ಅರಿವು ಮೂಡಿಸಲಾಗಿದೆ. ಮಕ್ಕಳು ಬೈಕ್‌ಗಳನ್ನು ಚಲಾಯಿಸಿದರೆ ಪೋಷಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಾಗುವುದು. ಅಪ್ರಾಪ್ತರ ವಾಹನಗಳಿಗೆ ದಂಡ ವಿಧಿ ಸಲಾಗಿದೆ. ಕೆಲವು ಮಕ್ಕಳ ಪೋಷಕರನ್ನು ಠಾಣೆಗಳಿಗೆ ಕರೆಸಿ ಬುದ್ದಿವಾದವನ್ನು ಹೇಳಲಾಗಿದೆ. ಆದಾಗ್ಯೂ ಸಂಚಾರ ನಿಯಮ ಉಲ್ಲಂಘನೆ ಮುಂದುವರಿಸಿದರೆ ವಾಹನವನ್ನೇ ಜಪ್ತಿ ಮಾಡಲಾಗುವುದು.
– ಡಾ. ಧರಣಿದೇವಿ, ಪೊಲೀಸ್ ವರಿಷ್ಠಾಧಿಕಾರಿ
– ನಾಗೇಂದ್ರ ಕೆ