Advertisement

“ಭಾರತ ವಿರೋಧಿ ಕೃತ್ಯ’: 20 ಯೂಟ್ಯೂಬ್‌ ಚಾನೆಲ್‌, 2 ವೆಬ್‌ಸೈಟ್‌ ಬ್ಲಾಕ್‌

08:51 PM Dec 21, 2021 | Team Udayavani |

ನವದೆಹಲಿ: ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಹಾಗೂ ಭಾರತ ವಿರೋಧಿ ಪ್ರಚಾರದಲ್ಲಿ ತೊಡಗಿದ್ದ 20 ಯೂಟ್ಯೂಬ್‌ ಚಾನೆಲ್‌ಗಳು ಹಾಗೂ 2 ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶಿಸಿದೆ. ವಿಶೇಷವೆಂದರೆ, ಇವುಗಳ ಪೈಕಿ ಪಾಕಿಸ್ತಾನ ಪ್ರಾಯೋಜಿತ ನಕಲಿ ಸುದ್ದಿ ಜಾಲವೂ ಸೇರಿದೆ.

Advertisement

ಗುಪ್ತಚರ ಸಂಸ್ಥೆಗಳು ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಜಂಟಿಯಾಗಿ ಪರಿಶೀಲನೆ ನಡೆಸಿ, ಮಾಹಿತಿ ತಂತ್ರಜ್ಞಾನ(ಡಿಜಿಟಲ್‌ ಮಾಧ್ಯಮ ನೀತಿಸಂಹಿತೆಗಳು) ನಿಯಮಗಳು, 2021ರ ರೂಲ್‌ 16ರಡಿ ತುರ್ತು ಅಧಿಕಾರವನ್ನು ಬಳಸಿಕೊಂಡು ಈ ಕ್ರಮ ಕೈಗೊಂಡಿವೆ. ಈ ನ್ಯೂಸ್‌ ಚಾನೆಲ್‌ಗಳು ಮತ್ತು ಪೋರ್ಟಲ್‌ಗಳನ್ನು ಬ್ಲಾಕ್‌ ಮಾಡುವಂತೆ ಇಂಟರ್ನೆಟ್‌ ಸೇವಾದಾರರಿಗೆ ನಿರ್ದೇಶಿಸುವಂತೆ ದೂರಸಂಪರ್ಕ ಇಲಾಖೆಗೆ ಮನವಿ ಮಾಡಲಾಗಿದೆ.

ಈ ಚಾನೆಲ್‌ಗಳು ಕಾಶ್ಮೀರ, ಭಾರತೀಯ ಸೇನೆ, ಅಲ್ಪಸಂಖ್ಯಾತ ಸಮುದಾಯಗಳು, ರಾಮಮಂದಿರ, ಜ.ಬಿಪಿನ್‌ ರಾವತ್‌ ಸೇರಿದಂತೆ ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳ ಕುರಿತು ವಿಭಜನೀಯ ಅಂಶಗಳನ್ನು ಒಳಗೊಂಡ ಕಂಟೆಂಟ್‌ಗಳನ್ನು ಪ್ರಸಾರ ಮಾಡುತ್ತಿದ್ದವು.

ಇದನ್ನೂ ಓದಿ:ಗುರುವಿನಲ್ಲಿ ಶಕ್ತಿ ಮತ್ತು ಭಕ್ತರಲ್ಲಿ ಭಕ್ತಿ ಇದ್ದರೆ ಮಾತ್ರ ಮಠಗಳು ಅಭಿವೃದ್ಧಿ

ಪಾಕಿಸ್ತಾನದ ಎನ್‌ಪಿಜಿ:
ಈ ಭಾರತ ವಿರೋಧಿ ಸುಳ್ಳು ಮಾಹಿತಿಗಳನ್ನು ಹಬ್ಬಿಸುವ ಚಾನೆಲ್‌ಗಳ ಪೈಕಿ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ನಯಾ ಪಾಕಿಸ್ತಾನ್‌ ಗ್ರೂಪ್‌(ಎನ್‌ಪಿಜಿ) ಕೂಡ ಒಂದು. ಇದು ಯೂಟ್ಯೂಬ್‌ ಚಾನೆಲ್‌ಗಳ ದೊಡ್ಡ ಜಾಲವನ್ನೇ ಹೊಂದಿದ್ದು, ಇದಕ್ಕೆ ಒಟ್ಟಾರೆ ಸುಮಾರು 35 ಲಕ್ಷ ಚಂದಾದಾರರಿದ್ದಾರೆ. ಈ ಚಾನೆಲ್‌ನಲ್ಲಿ ಪ್ರಸಾರವಾಗುವ ವಿಡಿಯೋಗಳು ಸುಮಾರು 55 ಕೋಟಿ ಬಾರಿ ವೀಕ್ಷಣೆಗೆ ಒಳಗಾಗುತ್ತಿವೆ. ಪಾಕಿಸ್ತಾನದ ಸುದ್ದಿವಾಹಿನಿಗಳ ನಿರೂಪಕರೇ ಎನ್‌ಪಿಜಿಯ ಕೆಲವು ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಆ್ಯಂಕರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ.

Advertisement

ಈ ಚಾನೆಲ್‌ಗಳಲ್ಲಿ ರೈತರ ಪ್ರತಿಭಟನೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳ ಬಗ್ಗೆಯೂ ಪ್ರಸಾರ ಮಾಡಲಾಗಿದೆ. ಜತೆಗೆ, ಸರ್ಕಾರದ ವಿರುದ್ಧ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಕೆಲಸಗಳನ್ನೂ ಈ ಚಾನೆಲ್‌ಗಳು ಮಾಡುತ್ತಿದ್ದವು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next