ಬೆಂಗಳೂರು: ರಾಜ್ಯ ಸರ್ಕಾರ ನಿವೃತ್ತ ಅಧಿಕಾರಿಗಳ ವೇತನ ಆಯೋಗ ಬೇಡ,ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಆಯೋಗ ರಚನೆ ಮಾಡಬೇಕು.ವಿಜಯ ಭಾಸ್ಕರ್ ನೇತೃತ್ವದ ಸಮಿತಿ ನೀಡಿರುವ ವರದಿ ಆಧಾರದಲ್ಲಿ ಖಾಲಿ ಹುದ್ದೆ ರದ್ದು ಪಡಿಸಲು ಮುಂದಾಗಿದೆ. ಅದನ್ನು ಖಂಡಿಸಲಾಗುವುದು ಎಂದು ಸಚಿವಾಲಯದ ನೌಕರರ ಸಂಘ ಸೋಮವಾರ ಆಕ್ರೋಶ ಹೊರ ಹಾಕಿದೆ.
ಸಚಿವಾಲಯದ ನೌಕರರ ಸಂಘದ ಪತ್ರಿಕಾಗೋಷ್ಠಿ ನಡೆಸಿ ಸಚಿವಾಲಯ ನೌಕರ ಸಂಘದ ಅಧ್ಯಕ್ಷ ಗುರುಸ್ವಾಮಿ ಅವರು ಮಾತನಾಡಿದರು.
ಸರ್ಕಾರದ ಧೋರಣೆ ವಿರುದ್ಧ ಸೆಪ್ಟೆಂಬರ್ 30 ರಂದು ಧರಣಿ ನಡೆಸಲಾಗುವುದು. ನಿವೃತ್ತ ಐಎಎಸ್ ಅಧಿಕಾರಿಗಳ ಬೂಟಾಟಿಕೆಯ ಸಮಿತಿ ಬೇಡ. ಸರ್ಕಾರಿ ನೌಕರರು ಗುಲಾಮರಲ್ಲ. ನಾವು ಅರ್ಹತೆಯ ಮೇಲೆ ಉದ್ಯೋಗ ಪಡೆದುಕೊಂಡಿದ್ದೇವೆ. ಸರ್ಕಾರ ನೌಕರರ ನಿರ್ಲಕ್ಷ್ಯ ಮಾಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಜಯಕುಮಾರ್ ಮಾತನಾಡಿ, ಅಕ್ಕಪಕ್ಕದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೌಕರರ ವೇತನ ರಾಜ್ಯ ಸರ್ಕಾರಿ ನೌಕರರ ವೇತನಕ್ಕೂ ಶೇ 40% ರಷ್ಟು ವ್ಯತ್ಯಾಸ ಇದೆ. ನಾವು ಈಗಾಗಲೇ ಮೂರ್ನಾಲ್ಕು ವೇತನ ಆಯೋಗಗಳನ್ನು ಕಳೆದುಕೊಂಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಒಂದು ಸಾವಿರ ಜನರಿಗೆ 18-20 ನೌಕರರಿದ್ಧರೆ, ನಮ್ಮ ರಾಜ್ಯದಲ್ಲಿ 11 ಜನ ಇದ್ದಾರೆ. ಸರ್ಕಾರ ಹೊಸ ಹೊಸ ಯೋಜನೆ ಘೋಷಣೆ ಮಾಡುತ್ತಿದೆ. ಇದರಿಂದ ನೌಕರರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.