ಸಕಲೇಶಪುರ: ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಕಾಮಗಾರಿ ಸ್ಥಳಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೀಶ್ವರ್ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ತಾಲೂಕಿನ ಮೂಗಲಿ ಗ್ರಾಮದಲ್ಲಿರುವ ಶಂಕರನಾರಾಯಣ ಕನಕ್ಷನ್ (ಪ್ರೈ) ಕಂಪನಿ ಆಡಳಿತ ಕಚೇರಿಗೆ ಭೇಟಿ ನೀಡಿದ ಸಚಿವದ್ವಯರು ಈ ಸಂದರ್ಭದಲ್ಲಿ ಯೋಜನೆಯ ರೂಪುರೇಷೆ, ಸಾಧಕ-ಬಾಧಕಗಳ ಬಗ್ಗೆ ಅಧಿಕಾರಿಗಳ ಬಳಿ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡರು.
ನಂತರ ಹೆಬ್ಬನಹಳ್ಳಿ ಗ್ರಾಮದ ಸಮೀಪವಿರುವ ಯೋಜನೆಯ ಸುರಂಗ ಮಾರ್ಗದ ಬಳಿ ತೆರಳಿ ವೀಕ್ಷಣೆ ನಡೆಸಿದರು. ಇದೇ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಭುವನಾಕ್ಷ ಸಚಿವರಿಗೆ ಮನವಿ ಸಲ್ಲಿಸಿ ಎತ್ತಿನಹೊಳೆ ಯೋಜನೆಯ ಕಾಮಗಾರಿ ನಡೆಸುವ ವೇಳೆ ಡೈನಮೆಟ್ ಬಳಸಿ ಬಂಡೆ ಸಿಡಿಸಲಾಗುತ್ತಿದೆ. ಇದರಿಂದ 30 ಮನೆಗಳ ಗೋಡೆ ಬಿರುಕು ಬಿಟ್ಟು, ಕುಸಿಯುವ ಸ್ಥಿತಿಯಲ್ಲಿವೆ. ಆದ್ದರಿಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಸೂಕ್ತ ಪರಿಹಾರ ನೀಡುವ ಬಗ್ಗೆ ಚಿಂತಿಸಲಾಗುವುದು ಎಂದು ಭರವಸೆ ನೀಡಿದರು.
ತಾ.ಪಂ ಸದಸ್ಯ ಸಿಮೆಂಟ್ ಮಂಜು ಮಾತನಾಡಿ, ಎತ್ತಿನಹೊಳೆ ಯೋಜನೆ ಹಾದು ಹೋಗುವ ಕುಂಬರ್ಡಿ, ನಡೆಹಳ್ಳಿ, ಮುಂತಾದ ಕಡೆ ಹಲವು ಬಡವರ ಮನೆಗಳಿಗೆ ದಾಖಲೆ ಇಲ್ಲ. ಅವರು ಇತ್ತ ಮನೆ ಖಾಲಿ ಮಾಡಲಾಗದೆ, ಅತ್ತ ಪರಿಹಾರ ಸಿಗದೆ ಪರದಾಡುತ್ತಿದ್ದಾರೆ. ಯೋಜನೆವ್ಯಾಪ್ತಿಯ ಕೆಲವು ಗ್ರಾಮಗಳಿಗೆ ಮೂಲ ಸೌಕರ್ಯ ಇನ್ನೂ ಒದಗಿಸಿಲ್ಲ ಎಂದರು.
ಇದನ್ನೂ ಓದಿ:ಉಡುಪಿ ಜಿಲ್ಲೆಯಲ್ಲಿ ತುರ್ತು ಸೇವೆಗೆ 112ಕ್ಕೆ ಕರೆ ಮಾಡಿ : ಪೊಲೀಸ್ ವರಿಷ್ಠಾಧಿಕಾರಿ ಸೂಚನೆ
ಈ ಕುರಿತು ಪ್ರತಿಕ್ರಿಯಿಸಿದ ಜಲ ಸಂಪನ್ಮೂಲ ಸಚಿವರು, ಈ ಕುರಿತು ಕೂಡಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಯೋಜನೆಯ ಅಭಿಯಂತರ ಜಯಣ್ಣಗೆ ಆದೇಶಿಸಿದರು. ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಉಪವಿಭಾಗಾಧಿಕಾರಿ ಗಿರೀಶ್ ನಂದನ್, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಕಾರ್ಯಪಾಲಕ ಎಂಜಿನಿಯರ್ ಜಯಣ್ಣ,ಡಿವೈಎಸ್‌ಪಿ ಬಿ.ಆರ್.ಗೋಪಿ, ಯೋಜನೆಯ ಅಧಿಕಾರಿಗಳು ಉಪಸ್ಥಿತರಿದ್ದರು.