ಶಿವಮೊಗ್ಗ: ಅನೇಕ ಹಿರಿಯರು ಶಿಕ್ಷಣ ಸಚಿವರಾಗಿ ಶಿಕ್ಷಣ ಇಲಾಖೆಗೆ ಗೌರವ ಬರುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇದೀಗ ಆಚಾರವಿಲ್ಲದ ನಾಲಿಗೆ ರೀತಿಯಲ್ಲಿ ಮಧು ಬಂಗಾರಪ್ಪ ಮಾತನಾಡುತ್ತಿದ್ದಾರೆ. ಆ ಪುಣ್ಯಾತ್ಮನ ಬಾಯಿಯಲ್ಲಿ ಇವೇನು ಹೊಸತಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಟೀಕಾಪ್ರಹಾರ ನಡೆಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೂ ಅವರಗಿಂತ ಚೆನ್ನಾಗಿ ಮಾತಾಡಲು ಬರುತ್ತದೆ. ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಕೆಲಸ ಆಗುತ್ತಿದೆ. ಆದರೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಅಭಿವೃದ್ಧಿ ಕೆಲಸಗಳಿಗಾಗಿ ಸ್ವತಃ ನಾನೇ ಮಧು ಬಂಗಾರಪ್ಪ ಮನೆಗೆ ಹೋಗಿದ್ದೆ. ವಿಮಾನ ನಿಲ್ದಾಣದ ಕಾಮಗಾರಿಯ ತನಿಖೆ ಮಾಡಿಸಲಿ. ಅವರದ್ದೇ ಸರ್ಕಾರ ಇದೆ. ಸಣ್ಣ ಸಣ್ಣ ಹಣವನ್ನು ಸಹ ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಶಿವಮೊಗ್ಗಕ್ಕೆ ಮಧು ಬಂಗಾರಪ್ಪ ಏನು ತಂದಿದ್ದಾರೆ ಎಂದು ಪ್ರಶ್ನಿಸಿದ ಅವರು, ನನ್ನ ಅವಧಿಯಲ್ಲಾದ ಅಭಿವೃದ್ಧಿಯ ದೊಡ್ಡ ಪಟ್ಟಿಯನ್ನೇ ನಾನು ಕೊಡುತ್ತೇನೆ ಎಂದು ತಿರುಗೇಟು ನೀಡಿದರು.
12 ಸಾವಿರ ಶಿಕ್ಷಕರ ನೇಮಕ ಮಾಡಿದ್ದು ಬಿಜೆಪಿ ಸರಕಾರ. ಅದನ್ನು ನಾವೇ ಮಾಡಿದ್ದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳುತ್ತಾರೆ. ಶಿಕ್ಷಣ ಸಚಿವರು ಜಿಲ್ಲೆಗೆ ಒಂದು ಕೊಠಡಿ ಸಹ ತಂದಿಲ್ಲ. ಶಿಕ್ಷಣ ಸಚಿವರಾಗಿ ಹೆಸರು ಮಾಡಲು ಅವಕಾಶ ಇದೆ. ಅದನ್ನು ಉಪಯೋಗಿಸಿಕೊಳ್ಳಿ. ಅಭಿವೃದ್ಧಿ ಮೂಲಕ ಸವಾಲು ಹಾಕಿ ಎಂದು ಸಲಹೆ ನೀಡಿದರು.
ಸರ್ವಜನಾಂಗದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿ ಕಾರಕ್ಕೆ ಬಂದಿದ್ದಾರೆ. ಈಗ ಒಬಿಸಿ ನಾಯಕರನ್ನು ತುಳಿಯುವ ಕೆಲಸ ಆಗುತ್ತಿದೆ ಅಂದಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಬೆರಳು ತೋರಿಸುವ ಕೆಲಸ ಆಗಿದೆ. ಕೋರ್ಟ್‌ನಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ. ನಿಮ್ಮಿಂದ ಕಲಿಯುವ ಅವಶ್ಯಕತೆ ನನಗಿಲ್ಲ. ನಿಮ್ಮ ಮಾತು, ನಡವಳಿಕೆಗೆ ಲೋಕಸಭಾ ಚುನಾವಣೆಯಲ್ಲಿ ನಿಮಗೆ ಹಿನ್ನಡೆ ಆಗಿದೆ. ಶಿಕ್ಷಣ ಇಲಾಖೆಗೆ ಗೌರವ ಬರುವ ರೀತಿಯಲ್ಲಿ ನಡೆದುಕೊಳ್ಳಿ. ಮುತ್ಸದ್ದಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಕೊಳ್ಳಲಿ ಎಂದು ಹಾರೈಸುತ್ತೇನೆ. ಅಭಿವೃದ್ಧಿಯ ಶ್ವೇತಪತ್ರ ಕೊಡಲು ನಾನು ತಯಾರಿದ್ದೇನೆ. ವೈಯಕ್ತಿಕ ಟೀಕೆ- ಟಿಪ್ಪಣಿ ಬಿಟ್ಟು ರಾಜಕಾರಣ ಮಾಡಬೇಕು. ಸುಳ್ಳಿನ ಆರೋಪದ ಮೇಲೆ ಯಡಿಯೂರಪ್ಪನವರನ್ನು ನಿಲ್ಲಿಸಲಾಗಿತ್ತು. ಮಧು ಬಂಗಾರಪ್ಪ ಕುಟುಂಬದ ಮೇಲೂ ಹಗರಣ ಆರೋಪ ಇದೆಯಲ್ಲ ಎಂದು ಕುಟುಕಿದರು.
ಶಿಕ್ಷಣ ಇಲಾಖೆಯಲ್ಲಿ ಅನೇಕ ಬದಲಾವಣೆ ಆಗಬೇಕಿದೆ. ಅದನ್ನು ಮಾಡಿ. ಡಿಡಿಪಿಐಗೆ ಇಷ್ಟು ರೇಟ್, ಬಿಒಇಗೆ ಇಷ್ಟು ರೇಟ್ ಅಂತ ರಾಜ್ಯದಲ್ಲಿ ಫಿಕ್ಸ್ ಆಗಿದೆ. ಟಾರ್ಗೆಟ್ ಮಾಡಿ ಪಟ್ಟಿ ಮಾಡಿ ವರ್ಗಾವಣೆ ಮಾಡುತ್ತಿದ್ದಾರೆ. ವರ್ಗಾವಣೆ ದಂಧೆ ನಡೆಯುತ್ತಿದೆ. ಆರೋಪ- ಪ್ರತ್ಯಾರೋಪಕ್ಕೆ ನಾವು ಹೆದರಲ್ಲ. ಬಂಗಾರಪ್ಪನವರ ಬಗ್ಗೆ ನಮಗೆ ಗೌರವ ಇದೆ ಎಂದರು.
ಧಮಕಿ ಹಾಕಿ ಪಾದಯಾತ್ರೆ ನಿಲ್ಲಿಸುವ ಪ್ರಯತ್ನ ನಡೆದಿದೆ. ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿದೆ ಅಂತ ಅವರೇ ಒಪ್ಪಿಕೊಂಡಿದ್ದಾರೆ. ಈ ಕಾಂಗ್ರೆಸ್ ಸರ್ಕಾರ ಬಂದು 1 ವರ್ಷ ನಾಲ್ಕು ತಿಂಗಳು ಆಗಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಎಸ್ಸಿ ಸಮಾಜದ ಅಧಿ ಕಾರಿಯನ್ನು ಕಾಂಗ್ರೆಸ್‌ನವರು ಬಲಿ ತೆಗೆದುಕೊಂಡರು. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಕುಟುಂಬ ಭಾಗಿ ಆಗಿದೆ. ಕೋಟ್ಯಂತರ ರೂ. ಬೆಲೆಬಾಳುವ ನಿವೇಶನ ಮಾರಿದ್ದಾರೆ. ಶಾಸಕರಿಗ 30 ಲಕ್ಷ ಹಣ ಕೊಡಲು ಆಗದೆ ಪಿಎಸ್‌ಐ ಮೃತಪಟ್ಟಿದ್ದಾರೆ. ಸರ್ಕಾರ ಎಡವಿದಾಗ ಎಚ್ಚರಿಸುವ ಕೆಲಸ ವಿರೋಧ ಪಕ್ಷ ಮಾಡುತ್ತಿದೆ. ಎನ್‌ಡಿಎ ನೇತೃತ್ವದಲ್ಲಿ ಸ್ವಾರ್ಥಕ್ಕಾಗಿ ಪ್ರತಿಭಟನೆ ಮಾಡಿಲ್ಲ. ಬಡವರ ಹಣ ದುರುಪಯೋಗ ಆಗಿದೆ. ಮುಡಾ ಹಗರಣ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಧಮ್ಕಿ ಹಾಕುವ ರಾಜಕಾರಣ ಬೇಡ ಎಂದರು ಪ್ರಮುಖರಾದ ಹರಿಕೃಷ್ಣ, ಅಣ್ಣಪ್ಪ ಇತರರಿದ್ದರು.