Advertisement

ಸಚಿವ ಪುತ್ರನ ಅಪಘಾತ ಪ್ರಕರಣ: ವಾಗ್ವಾದ

11:32 PM Feb 19, 2020 | Team Udayavani |

ವಿಧಾನ ಪರಿಷತ್‌: ಸಚಿವರ ಪುತ್ರ ಅಪಘಾತ ಮಾಡಿದ್ದಾರೆ ಎಂಬ ಪ್ರತಿಪಕ್ಷದ ಸದಸ್ಯರ ಹೇಳಿಕೆಯಿಂದ ಕಲಾಪ ಕೆಲಕಾಲ ಗದ್ದಲದ ಗೂಡಾಗಿತ್ತು. ಕಾಂಗ್ರೆಸ್‌ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರನ ಕಾರು ಅಪಘಾತ ವಿಚಾರದ ಜತೆಗೆ ಹೊಸಪೇಟೆ ಸಮೀಪ ನಡೆದ ಅಪಘಾತದ ವಿಷಯ ಪ್ರಸ್ತಾಪಿಸಿ, ಸಚಿವರೊಬ್ಬರ ಪುತ್ರ ನಡೆಸಿದ ಅಪಘಾತದಲ್ಲಿ ಇಬ್ಬರು ಸತ್ತಿದ್ದಾರೆ.

Advertisement

ಅದರ ತನಿಖೆ ಆಗಿಲ್ಲ ಎಂದರು. ಆಗ ಆಡಳಿತ ಪಕ್ಷದ ಸದಸ್ಯರು, ನೀವು ಸ್ಥಳದಲ್ಲಿದ್ದರಾ? ದೂರು ದಾಖಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ, ಸತ್ಯಾಸತ್ಯತೆ ಹೊರಬೀಳಲಿದೆ. ಇದು ಪೊಲೀಸ್‌ ಇಲಾಖೆ ದುರ್ಬಳಕೆ ಅಲ್ಲ ಎಂದು ಪ್ರತಿಪಾದಿಸಿದರು. ನಾರಾಯಣಸ್ವಾಮಿ ಮಾತು ಮುಂದುವರಿಸಿ, ಸದನ ಸಮಿತಿ ರಚಿಸಿ ಇಲ್ಲವೇ ನ್ಯಾಯಾಂಗ ತನಿಖೆ ವಹಿಸಿ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದರು.

ಕಲಾಪ ಮುಂದೂಡಿಕೆ: ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್‌ ಮಾತನಾಡಿ, ರಾಜ್ಯ ಪೊಲೀಸ್‌ ಇಲಾಖೆ ದುರ್ಬಲಗೊಳಿಸುವ ಹೇಳಿಕೆಯನ್ನು ನಿಯಮ 69 ರ ಅಡಿ ಪ್ರತಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್‌ ಮಾಡಿದ್ದಾರೆ. ಬೇಸರ ಆಗಿದ್ದರೆ ಕ್ಷಮಿಸಿ. ನಮ್ಮ ಮಾತು ಮನರಂಜನೆ ಭಾಗವಾಗುತ್ತದೆಯೇನೋ ಅನ್ನಿಸುತ್ತಿದೆ. ಇರುವ 6 ಕೋಟಿ ಜನರನ್ನು ನಾವು 75 ಮಂದಿ ಪ್ರತಿನಿಧಿಸುತ್ತಿದ್ದೇವೆ. ಆದರೆ, ಸದನ ಕಲಾಪ ನಿರೀಕ್ಷಿತ ನಿಟ್ಟಿನಲ್ಲಿ ಸಾಗುತ್ತಿಲ್ಲ. ಅನಗತ್ಯ ಚರ್ಚೆಗೆ ಸದನ ಬಳಕೆ ಆಗಬಾರದು. ಮಂಗಳೂರಿನಲ್ಲಿ ಪೊಲೀಸರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ.

ನಾವೂ ಪ್ರಾಮಾಣಿಕರಾಗಿ ಇರಬೇಕು. ತಪ್ಪು ಎಲ್ಲ ಕಡೆ ಆಗುತ್ತಿದೆ. ತನಿಖೆ ನಡೆಯುತ್ತಿದೆ. ನಿಷ್ಪಕ್ಷಪಾತ ವಿಚಾರಣೆ ಆಗುತ್ತಿದೆ. ನಮ್ಮ ವಿರುದ್ಧ ಜನ ಇದ್ದಾರೆ. ಮಂಗಳೂರಿನಲ್ಲಿ ಅನಗತ್ಯ ಗಲಾಟೆಯಾಗಿದೆ. ನೂರಾರು ಜನರ ಜೀವ ಉಳಿಸಲು ಒಂದಿಬ್ಬರ ಸಾವಾಗಿದೆ. ಯಾರ ಸಾವು ಸರಿಯಲ್ಲ. ಸಾವಾಗಿರುವುದಕ್ಕೆ ವಿಷಾದವೂ ಇದೆ ಎನ್ನುವಷ್ಟರಲ್ಲಿ ಪ್ರತಿಪಕ್ಷದ ಸದಸ್ಯರು ಆಕ್ರೋಶ ಹೊರ ಹಾಕಿ, ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು. ಸಭಾಪತಿಯವರು ಕಲಾಪವನ್ನು 10 ನಿಮಿಷ ಮುಂದೂಡಿದರು.

ಕ್ಷಮೆಯಾಚನೆ: 10 ನಿಮಿಷದ ನಂತರ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಇಬ್ಬರು ಅಮಾಯಕರ ಸಾವಾಗಿದೆ. ವಿಷಾದ ವ್ಯಕ್ತಪಡಿಸುವ ಕಾರ್ಯ ಆಗಬೇಕು. ಅವಸರದಲ್ಲಿ, ಧಾವಂತದಲ್ಲಿ ತಪ್ಪಿ ಮಾತಾಡಿರಬಹುದು. ಅವರು ತಮ್ಮ ಮಾತಿಗೆ ಕ್ಷಮೆ ಕೋರಬೇಕೆಂದು ಪ್ರತಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್‌ ಆಗ್ರಹಿಸಿದರು.

Advertisement

ಎಂ.ಕೆ.ಪ್ರಾಣೇಶ್‌ ಪ್ರತಿಕ್ರಿಯಿಸಿ, ನನ್ನ ಮಾತುಗಳಲ್ಲಿನ ಕೆಲವು ಶಬ್ದವನ್ನು ಬೇರೆ ರೀತಿ ಅಥೆಸುವುದು ಬೇಡ. ಒಂದು ಶಬ್ದಕ್ಕೆ ಹಲವು ಅರ್ಥಗಳಿರುತ್ತವೆ. ಅಂದು ಸತ್ತವರ ಬಗ್ಗೆ ವಿಷಾದವಿದೆ. ಅಂದು ಪೊಲೀಸರು ಮಧ್ಯ ಪ್ರವೇಶಿಸದಿದ್ದರೆ ನೂರಾರು ಜೀವ ಹೋಗುತ್ತಿತ್ತು ಎಂದಾಗ, ಮಧ್ಯ ಪ್ರವೇಶ ಮಾಡಿದ ಜೆಡಿಎಸ್‌ ಸದಸ್ಯ ಬಸವರಾಜ ಹೊಟ್ಟಿ, ಕ್ಷಮೆ ಕೇಳುವುದು ತಪ್ಪಲ್ಲ. ಸದನದಲ್ಲಿ ಕ್ಷಮೆ ಕೇಳಿದರೆ ವ್ಯಕ್ತಿ ಚಿಕ್ಕವನಾಗಲ್ಲ. ನಿಮ್ಮ ಅರ್ಥ ಏನೇ ಇರಬಹುದು, ಕ್ಷಮೆ ಕೇಳಿ ಎಂದು ಸಲಹೆ ನೀಡಿದರು.

ಸಿಎಎ ಚರ್ಚೆ ಆಗಲಿ: ಪ್ರಾಣೇಶ್‌ ಅವರು ಮಾತು ಮುಂದುವರಿಸಿ, ಘಟನೆಗೆ ಮೂಲ ಕಾರಣ ಯಾರೆಂದು ಪತ್ತೆಯಾಗಬೇಕು. ಪ್ರಕರಣದಲ್ಲಿ ರಾಜಕಾರಣ ಅಡಗಿದೆ. ಆಡಳಿತ- ಪ್ರತಿಪಕ್ಷ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಸಿಎಎನಲ್ಲಿ ಏನು ಲೋಪವಿದೆ? ಇದರ ಬಗ್ಗೆ ವಿಸ್ತೃತ ಚರ್ಚೆಯಾಗಲಿ ಎಂದರು. ಸದಸ್ಯೆ ಜಯಮಾಲ, ಇದಕ್ಕಾಗಿ ಪ್ರತ್ಯೇಕ ಅವಕಾಶ ಕಲ್ಪಿಸುವಂತೆ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next