Advertisement

Udupi: ಉಡುಪಿಯ ಮೀನುಗಾರ ಮುಖಂಡರೊಂದಿಗೆ ಸಚಿವರ ಸಭೆ

12:39 AM Oct 13, 2023 | Team Udayavani |

ಕುಂದಾಪುರ/ಉಡುಪಿ: ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್‌. ವೈದ್ಯ ಅವರೊಂದಿಗೆ ಉಡುಪಿ ಜಿಲ್ಲೆಯ ಮೀನುಗಾರ ಮುಖಂಡರ ಸಭೆಯು ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಗುರುವಾರ ನಡೆಯಿತು. ಪ್ರಮುಖವಾಗಿ ಮಲ್ಪೆ, ಗಂಗೊಳ್ಳಿ, ಕೊಡೇರಿ ಬಂದರಿನ ಸಮಸ್ಯೆಗಳ ಕುರಿತು ಪ್ರಸ್ತಾವವಾಯಿತು.

Advertisement

ನಾಡದೋಣಿ ಮೀನುಗಾರರ ಸೀಮೆಎಣ್ಣೆ ಸಬ್ಸಿಡಿಯನ್ನು ಹೆಚ್ಚಿಸುವಂತೆ ಮೀನುಗಾರರು ಮನವಿ ಮಾಡಿಕೊಂಡರು. ಇದಕ್ಕೆ ಸಚಿವರು ಪೆಟ್ರೋಲ್‌ ಎಂಜಿನ್‌ಗೆ ಪರಿವರ್ತಿಸುವ ಬಗ್ಗೆ ಚಿಂತಿಸುವಂತೆ ಮೀನುಗಾರರಿಗೆ ತಿಳಿಸಿದರು.

ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಅವರು, ಮಹಿಳಾ ಮೀನುಗಾರರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಿಗುವ ಸಾಲ ಸೌಲಭ್ಯವನ್ನು ಸಹಕಾರಿ ಬ್ಯಾಂಕ್‌ಗಳ ಮೂಲಕ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮಲ್ಪೆ ಬಂದರು ವಿಸ್ತರಿಸಿ
ಮಲ್ಪೆ ಬಂದರಿನಲ್ಲಿ ಬೋಟ್‌ಗಳ ಸಂಖ್ಯೆ ಹೆಚ್ಚುತ್ತಿದ್ದು, ಜಾಗದ ಸಮಸ್ಯೆಯಾಗುತ್ತಿದೆ. ಬಂದರಿನ ವಿಸ್ತರಣೆ ಆಗಬೇಕಿದೆ. ಇದಲ್ಲದೆ ಪಡುಕೆರೆ ಸಮೀಪ ಬೋಟ್‌ಗಳ ನಿಲುಗಡೆಗೆ ವ್ಯವಸ್ಥೆ ಮಾಡಿಕೊಟ್ಟರೆ ಅನುಕೂಲವಾಗಲಿದೆ ಎಂದು ಮುಖಂಡರು ತಿಳಿಸಿದರು.

ಗಂಗೊಳ್ಳಿ ಬಂದರು
ಗಂಗೊಳ್ಳಿ ಬಂದರಿನ ಜೆಟ್ಟಿ ದುರಸ್ತಿ ಬಗ್ಗೆ ಮೀನುಗಾರ ಮುಖಂಡರು ಸಚಿವರ ಗಮನ ಸೆಳೆದರು. ಮಹಿಳಾ ಮೀನುಗಾರರ ವಿಶ್ರಾಂತಿ ಕೊಠಡಿ, ಹರಾಜು ಪ್ರಾಂಗಣದ ಅವ್ಯವಸ್ಥೆ ಬಗ್ಗೆ ಮನವರಿಕೆ ಮಾಡಲಾಯಿತು. ಮಾಸಾಂತ್ಯಕ್ಕೆ ಗಂಗೊಳ್ಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ತಿಳಿದುಕೊಂಡು, ಪುನರ್‌ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಸಚಿವರ ಭರವಸೆ ನೀಡಿದರು.
ಕೊಡೇರಿ ಬಂದರಿಗೆ 2 ಸಾವಿರ ಕೋ.ರೂ. ಅನುದಾನ ನೀಡಿದರೂ ಸಮರ್ಪಕ ಬಳಕೆಯಾಗುತ್ತಿಲ್ಲ. ಬ್ರೇಕ್‌ವಾಟರನ್ನು 100 ಮೀ. ವಿಸ್ತರಿಸುವಂತೆ ಮೀನುಗಾರರು ಮನವಿ ಮಾಡಿದ್ದು, ಪ್ರಯತ್ನಿಸುವುದಾಗಿ ಸಚಿವರು ತಿಳಿಸಿದರು.

Advertisement

ಮೀನುಗಾರಿಕೆ ಮತ್ತು ಪಶು ಸಂಗೋಪನಾ ಇಲಾಖೆ ಕಾರ್ಯದರ್ಶಿ ಚಿನ್ನೂಬಾಯಿ, ನಿರ್ದೇಶಕ ದಿನೇಶ್‌ ಕುಮಾರ್‌ ಕಳ್ಳೇರ್‌, ಮೀನುಗಾರಿಕೆ ಇಲಾಖೆಯ ಉಡುಪಿ ಜಿಲ್ಲಾ ಜಂಟಿ ನಿರ್ದೇಶಕ ವಿವೇಕ್‌ ಆರ್‌., ಮಲ್ಪೆ ಮೀನುಗಾರರ ಸಂಘದ ದಯಾನಂದ ಕೆ. ಸುವರ್ಣ, ನಾಡದೋಣಿ ಮೀನುಗಾರರ ಮುಖಂಡರಾದ ಆರ್‌.ಕೆ. ಕೋಟ್ಯಾನ್‌ ಮಲ್ಪೆ, ಕೇಶವ ಕೋಟ್ಯಾನ್‌, ಆನಂದ ಖಾರ್ವಿ ಉಪ್ಪುಂದ, ಗಂಗೊಳ್ಳಿಯ ಮೀನುಗಾರ ಮುಖಂಡರಾದ ರಮೇಶ್‌ ಕುಂದರ್‌, ಸದಾಶಿವ ಖಾರ್ವಿ ಕಂಚುಗೋಡು, ಯಶವಂತ್‌ ಗಂಗೊಳ್ಳಿ, ರಾಘವೇಂದ್ರ ಖಾರ್ವಿ ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next