ಬಾಗಲಕೋಟೆ: ಪ್ರಸ್ತುತ ಘೋಷಿತ ತೇರದಾಳ ತಾಲೂಕನ್ನು ಸದೃಢವಾಗಿ ರಚಿಸುವ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ಜರುಗಿತು.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಘೋಷಿತ ತೇರದಾಳ ತಾಲೂಕಿಗೆ ಯಾವ ಯಾವ ಗ್ರಾಮಗಳನ್ನು ಸೇರಿಸಬೇಕು ಎಂಬುದರ ಹಾಗೂ ಸಾರ್ವಜನಿಕರ ಸಲಹೆ ಆಲಿಸಿ ಚರ್ಚಿಸಲಾಯಿತು. ತಾಲೂಕು ರಚನೆಗೆ ಬೇಕಾದ ಎಲ್ಲ ಅಂಶ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಹೋಬಳಿ ಕೇಂದ್ರ ಹಾಗೂ ನೆಮ್ಮದಿ ಕೇಂದ್ರಗಳ ಸ್ಥಾಪನೆ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಸಾರ್ವಜನಿಕರ ಪ್ರಕಟಣೆ ನೀಡುವ ಮೂಲಕ ಒಂದು ತಿಂಗಳ ಅವ ಕೊಟ್ಟು ಸಾರ್ವಜನಿಕರಿಂದ ಆಕ್ಷೇಪಣೆ ಪಡೆದುಕೊಂಡು ಅವುಗಳನ್ನು ಪರಿಶೀಲಿಸಿದ ನಂತರ ಅಂತಿಮ ವರದಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ತಾಲೂಕು ಘೋಷಣೆಗೆ ಸಾರ್ವಜನಿಕರು ಅನೇಕ ಹೋರಾಟ ಮಾಡಿದ್ದು, ನಿಮ್ಮ ನಿರೀಕ್ಷೆಗೆ ತಕ್ಕಂತೆ ಸದೃಢ, ಸುಂದರ ತಾಲೂಕನ್ನಾಗಿ ರಚಿಸಲಾಗುವುದು ಎಂದರು.
ಹೊಸ ತಾಲೂಕು ರಚನೆ ಕುರಿತು ವಿವಿಧ ಸಮಿತಿಗಳು ಮಾಡಿರುವ ಶಿಫಾರಸ್ಸುಗಳು, ಸರ್ಕಾರದ ಸುತ್ತೋಲೆಗಳು ಹಾಗೂ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಿದ ತೇರದಾಳ ವಿಶೇಷ ತಹಶೀಲ್ದಾರ್ ಮಹೆಬೂಬಿ, ತಾಲೂಕು ರಚನೆಗೆ ಕನಿಷ್ಠ 1 ಲಕ್ಷ ಜನಸಂಖ್ಯೆ ಇರಬೇಕು. ಆಡಳಿತಾತ್ಮಕ ಅನುಕೂಲತೆ, ಹೊಸ ಹೋಬಳಿ ಸೃಷ್ಟಿಸದೇ ತಾಲೂಕ ರಚನೆ ಹಾಗೂ ಜಿಲ್ಲಾ ವ್ಯಾಪ್ತಿದಾಟಿ ಬೇರೆ ಜಿಲ್ಲೆಗಳ ಗ್ರಾಮಗಳನ್ನು ಪರಿಗಣಿಸಲಾಗದು ಎಂದು ಹೇಳಿದರು. ಅಖಂಡ ಜಮಖಂಡಿ ತಾಲೂಕಿನ ಮೂಲ ತೇರದಾಳ ಹೋಬಳಿಗೆ 23 ಗ್ರಾಮಗಳು ಒಳಪಟ್ಟಿದ್ದು, ತೇರದಾಳ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ತೇರದಾಳ ಹೋಬಳಿಯ 23 ಗ್ರಾಮಗಳು ಹಾಗೂ ಮುಧೋಳ ತಾಲೂಕಿನ 10 ಗ್ರಾಮಗಳು ಸೇರಿ ಒಟ್ಟು 33 ಗ್ರಾಮಗಳನ್ನು ಒಳಗೊಂಡ ತೇರದಾಳ ಮತಕ್ಷೇತ್ರವಾಗಿರುತ್ತದೆ ಎಂದು ತಿಳಿಸಿದರು.
ನೂತನ ರಬಕವಿ-ಬನಹಟ್ಟಿ ತಾಲೂಕ ಕೇಂದ್ರವೆಂದು ಡಿಸೆಂಬರ 2017 ರಂದು ಸರ್ಕಾರವು ಅಂತಿಮ ಅಧಿಸೂಚನೆ ಹೊರಡಿಸಿದೆ. ಅದರ ವ್ಯಾಪ್ತಿಯಲ್ಲಿ ತೇರದಾಳ ಹೋಬಳಿಯ 21 ಗ್ರಾಮಗಳು ಹಾಗೂ ಮುಧೋಳ ತಾಲೂಕಿನ ತೇರದಾಳ ಮತಕ್ಷೇತ್ರ ವ್ಯಾಪ್ತಿಯ 10 ಗ್ರಾಮಗಳು ಸೇರಿ ಒಟ್ಟಾರೆಯಾಗಿ 31 ಗ್ರಾಮಗಳ ತಾಲೂಕಾ ಕೇಂದ್ರವಾಗಿ ರಬಕವಿ-ಬನಹಟ್ಟಿ ತಾಲೂಕು ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು. ಘೋಷಿತ ತೇರದಾಳ ತಾಲೂಕಾ ಕೇಂದ್ರಕ್ಕೆ ಈ ಗ್ರಾಮಗಳು 6ರಿಂದ 7 ಕಿ.ಮೀ ಅಂತರದಲ್ಲಿವೆ ಎಂದು ಸಭೆಗೆ ತಿಳಿಸಿದರು.
ಮುಧೋಳ ಶಾಸಕ ಗೋವಿಂದ ಕಾರಜೋಳ, ತೇರದಾಳ ಶಾಸಕ ಸಿದ್ದು ಸವದಿ, ವಿಧಾನಪರಿಷತ್ ಸದಸ್ಯ ಎಸ್.ಆರ್. ಪಾಟೀಲ, ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಜಿ.ಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ, ಉಪವಿಭಾಗಾಧಿಕಾರಿ ಮೊಹಮ್ಮದ ಇಕ್ರಮ ಉಪಸ್ಥಿತರಿದ್ದರು.