Advertisement

ಸಚಿವರು ಏನು ಬೇಕಾದರೂ ಹೇಳಬಹುದು, ಆದ್ರೆ ಗ್ಯಾರಂಟಿ ಯೋಜನೆ ನಿಲ್ಲಲ್ಲ: ಶರಣ ಪ್ರಕಾಶ್‌ ಪಾಟೀಲ್

03:19 PM Aug 16, 2024 | Team Udayavani |

ಕೊಪ್ಪಳ: ನಮ್ಮ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ. ಬಡವರಿಗಾಗಿ ಈ ಯೋಜನೆ ಜಾರಿ ಮಾಡಿದೆ. ಬೇರೆ ಸಚಿವರು ಈ ಬಗ್ಗೆ ವಿಭಿನ್ನವಾಗಿ ಮಾತನಾಡಿರಬಹುದು. ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆಗಳು ಬಡವರಿಗಾಗಿ ತಲುಪಲಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರು ಸ್ವಾಭಿಮಾನದಿಂದ ಬದುಕಲಿ ಎಂದು ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಿವೆ. ಗ್ಯಾರಂಟಿ ಯೋಜನೆಗಳು ನಿಗದಿತ ಮಾನದಂಡ ರೂಪಿಸಿದೆ. ಆದಾಯ ತೆರಿಗೆ, ಸರ್ಕಾರಿ ನೌಕರರು ಇದರ‌ ವ್ಯಾಪ್ತಿ ಹೊರಗಿದ್ದಾರೆ ಎಂದರು.

ಸಿಎಂ ಸಂಪುಟದಲ್ಲಿ ಕೆಲ ಸಚಿವರಿಗೆ ಕೊಕ್ ಕೊಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಚಿವರ ಬದಲಾವಣೆ ಸಿಎಂ ಹಾಗೂ ಹೈಕಮಾಂಡ್ ಗೆ ಬಿಟ್ಟಿರುವ ವಿಚಾರ. ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ಅಂಥ ಯಾವುದೇ ಚರ್ಚೆಯೂ ನಡೆದಿಲ್ಲ ಎಂದರು.

ನಾಳೆಯಿಂದ ಓಪಿಡಿ ಬಂದ್ ಮಾಡುವ ವಿಚಾರವಾಗಿ ಮಾತನಾಡಿದ ಸಚಿವರು, ಅದು ರಾಷ್ಟ್ರೀಯ ವೈದ್ಯಕೀಯ ಸಂಘವು ಕೈಗೊಂಡಿರುವ ನಿಲುವು. ರಾಜ್ಯದಲ್ಲಿ ಎಲ್ಲ ವೈದ್ಯರಿಗೆ ನಾವು ರಕ್ಷಣೆ ಕೊಡುತ್ತೇದ್ದೇವೆ. ಎನ್ ಎಂಸಿ ನಿಯಮಗಳನ್ನು ನಾವು ಅನುಸರಿಸುತ್ತಿದ್ದೇವೆ. ವೈದ್ಯರ ಯೋಗಕ್ಷೇಮ ಬಗ್ಗೆ ವಿಚಾರ ಮಾಡಿದ್ದೇವೆ. ಅವರ ಬೇಡಿಕೆಗಳ ಮಾಹಿತಿಯನ್ನು ನಾವು ಕೇಳಿದ್ದೇವೆ ಎಂದರು.

ರಾಯಚೂರಿಗೆ ಏಮ್ಸ್ ಮಂಜೂರು ಮಾಡುವ ವಿಚಾರವಾಗಿ ಮಾತನಾಡಿದ ಶರಣ ಪ್ರಕಾಶ್‌ ಪಾಟೀಲ್‌, ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ನಾವು ಹಾಗೂ ಸಿಎಂ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ ಎಂದರು.

Advertisement

ಮುಡಾ ಹಗರಣವು ಹಗರಣವೇ ಅಲ್ಲ. ಸಿಎಂ ಕುಟುಂಬ ಮುಡಾಗೆ ಜಮೀನು ಕೊಟ್ಟು ಬದಲಿಗೆ 14 ನಿವೇಶನ ಪಡೆದಿದೆ. ಹಿಂದೆ ಬಿಜೆಪಿ ಸರ್ಕಾರವೇ ಸಿಎಂ ಕುಟುಂಬಕ್ಕೆ ನಿವೇಶನ ಕೊಟ್ಟಿದೆ. ಇದರಲ್ಲಿ ಅಪರಾಧ ಏನಿದೆ ಹೇಳಿ ಎಂದರೆ ಬಿಜೆಪಿ ಹೇಳಲು ಸಿದ್ದರಿಲ್ಲ. ಮುಡಾ ಹಗರಣ ಹಗರಣವೇ ಅಲ್ಲ ಎಂದರು.

ಕಲ್ಯಾಣ ಕರ್ನಾಟಕಕ್ಕೆ 371 ಜೇ ಮೀಸಲು ದೊರೆತ ಬಳಿಕ ನಮಗೆ ವಿಶೇಷ ಅನುದಾನ ಲಭಿಸಿದೆ. ಕಲ್ಯಾಣ ಕರ್ನಾಟಕಕ್ಕೆ ಬಂದ ಅನುದಾನ ಲ್ಯಾಪ್ಸ್ ಆಗಲ್ಲ. ನಮ್ಮ ಸರ್ಕಾರ ಬಂದ ಬಳಿಕ 5 ಸಾವಿರ ಕೋಟಿ ಅನುದಾನ ಕೊಟ್ಟಿದೆ. ಸಚಿವ ಸಂಪುಟದ ಉಪ ಸಮಿತಿಯಲ್ಲಿ ತೀರ್ಮಾನ ಮಾಡಿದ್ದು. ಇದೇ ವರ್ಷದಲ್ಲಿ ಕಲ್ಯಾಣ ಕರ್ನಾಟಕದಲ್ಲಿ 15 ಸಾವಿರ ವಿವಿಧ ಹುದ್ದೆ ನೇಮಕಾತಿ ಮಾಡಲಿದ್ದೇವೆ. ಮುಂದಿನ ವರ್ಷ 15 ಸಾವಿರ ನೇಮಕಾತಿ ಈ ಭಾಗದಲ್ಲಿ ನಡೆಯಲಿದೆ. ನಮ್ಮ ಸರ್ಕಾರ ಎರಡೂವರೆ ವರ್ಷ ಪೂರ್ಣಮಾಡುವ ವೇಳೆ 30 ಸಾವಿರ ಹುದ್ದೆ ಈ ಭಾಗದಲ್ಲಿ ನೇಮಕಾತಿ ಮಾಡಲಿದ್ದೇವೆ ಇದು ನಮ್ಮ ಭದ್ದತೆ. ಮಿಕ್ಕುಳಿದ ವರ್ಷದಲ್ಲಿ ಮತ್ತೆ 20 ಸಾವಿರ ನೇಮಕ ಮಾಡಬೇಕೆಂಬುದು ನಮ್ಮ ಗುರಿ ಇದೆ. ಈ ಬಗ್ಗೆ ನಮ್ಮ ಉಪ ಸಮಿತಿಯು ಈ ಬಗ್ಗೆ ಮಾನಿಟರ್ ಮಾಡಿ ಎಲ್ಲ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿ ಮಾಡಲಿದ್ದೇವೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.

ಕೊಪ್ಪಳದಲ್ಲಿ 450 ಬೆಡ್ ನ ಹೊಸ ಆಸ್ಪತ್ರೆ ಅ.02 ರಂದು ಲೋಕಾರ್ಪಣೆ ಮಾಡುವೆವು. ಈಗಾಗಲೇ ಆಸ್ಪತ್ರೆಯ ಆರಂಭಕ್ಕೆ ಸಿದ್ದತೆ ನಡೆದಿದೆ. ವೈದ್ಯರ ತಂಡದ ಜೊತೆ ಚರ್ಚೆ ಮಾಡಿರುವೆ. ಕಿಮ್ಸ್ ನಲ್ಲಿ ವಿಭಾಗವಾರು ರೋಗಿಗಳ ಆರೋಗ್ಯ ತಪಾಸಣೆಗೆ ವೈದ್ಯರಿಗೆ ಗುರಿ ನೀಡಿದೆ. ಜಿಲ್ಲಾ ಆಸ್ಪತ್ರೆಯಿಂದ ಕಿಮ್ಸ್ ಹೊಸ ಆಸ್ಪತ್ರೆಗೆ ಶಿಪ್ಟ್ ಆಗಲಿದ್ದೇವೆ. ಕಿಮ್ಸ್ ಕುರಿತಂತೆ ಹಲವು ದೂರುಗಳು ಇವೆ. ಹೊಸ ಆಸ್ಪತ್ರೆ ಆರಂಭವಾದ ಬಳಿಕ ಎಲ್ಲ ಸಮಸ್ಯೆ ಬಗೆಹರಿಯಲಿವೆ. ಹೊಸ ಆಸ್ಪತ್ರೆಗೆ ಇನ್ನ ಕೆಲವು ಅಗತ್ಯ ಸೌಲಭ್ಯ ಕಲ್ಪಿಸುವ ಕೆಲಸ ನಡೆದಿದೆ ಎಂದರು.

ಕೊಪ್ಪಳ‌ ಕಿಮ್ಸ್ ವಿರುದ್ದ ಕೆಡಿಪಿ ಸಭೆಯಲ್ಲಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿಸಿ ನೇತೃತ್ವದಲ್ಲಿ ವಿಚಾರಣೆ ನಡೆಸಲು ಆದೇಶ ಮಾಡಿದೆ. ಡಿಸಿ ಈ ಕುರಿತಂತೆ ಎಲ್ಲ ವಿಚಾರಣೆ ನಡೆಸಿ ಅವರು ನಮಗೆ ವರದಿ ನೀಡಲಿದ್ದಾರೆ. ಮೆಡಿಕಲ್ ಕಾಲೇಜಿನಲ್ಲಿ ಹುದ್ದೆಗಳ ಕೊರತೆ ಇದೆ. ಇನ್ಮುಂದೆ ಕೆಎಇ ಮೂಲಕ ನೇಮಕಕ್ಕೆ ಒತ್ತು ನೀಡಲಿದ್ದೇವೆ ಎಂದರು.

ಕೊಪ್ಪಳ ಮೆಡಿಕಲ್ ಕಾಲೇಜು ನೊಂದಣಿ ಮಾಡದೆ ಇರುವ ವಿಚಾರಕ್ಕೆ ಮಾತನಾಡಿ, ಪದೆ ಪದೇ ನೊಂದಣಿ ಕಷ್ಟವಾಗಲಿದೆ ಈ ಬಗ್ಗೆ ಡಿಸಿ ಅವರು ಗಂಭೀರವಾಗಿ ಪರಿಶೀಲನೆ ಮಾಡುವಂತೆ ಹೇಳಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಸಾವಿನ ಪ್ರಮಾಣ ಹೆಚ್ಚಳ ವಿಚಾರ, ಈ ಕುರಿತು ಗಮನಕ್ಕೆ ಬಂದಿದೆ. ಆಸ್ಪತ್ರೆಯ ವೈದ್ಯರಿಗೆ ಈ ಬಗ್ಗೆ ಸೂಚನೆ ನೀಡಿದೆ. ಅಲ್ಲದೆ ಖಾಸಗಿ ಆಸ್ಪತ್ರೆಯಿಂದ ಬರುವ ರೋಗಿಗಳು ತುಂಬಾ ಸೀರಿಯಸ್ ಇರುತ್ತಾರೆ. ಕೊನೆ ಹಂತಕ್ಕೆ ಆಸ್ಪತ್ರೆಗೆ ದಾಖಲಾಗುತ್ತಾರೆ. ಹಾಗಾಗಿ ಸಾವಿನ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next