Advertisement

ಕರಾವಳಿಗರ ರೈಲು ಹೋರಾಟಕ್ಕೆ ಸಚಿವೆ, ಸಂಸದರ ಬೆಂಬಲ

12:13 AM Aug 06, 2021 | Team Udayavani |

ಮಂಗಳೂರು: ಮಂಗಳೂರು- ತೋಕೂರು ರೈಲ್ವೇ ಲೈನ್‌ ಸೇರಿದಂತೆ ಮಂಗಳೂರು ಭಾಗವನ್ನು ನೈಋತ್ಯ ರೈಲ್ವೇಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಹೊಸದಿಲ್ಲಿಯಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಅವನ್ನು ಭೇಟಿಯಾಗಿ ಮನವಿ ಅರ್ಪಿಸಿದ್ದಾರೆ.

Advertisement

ಪ್ರಸ್ತುತ ಮಂಗಳೂರು ಪ್ರದೇಶ ಮೂರು ವಿಭಾಗಗಳಲ್ಲಿ ಹಂಚಿಹೋಗಿರುವುದರಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಹಾಗೂ ಈ ಭಾಗವನ್ನು ನೈಋತ್ಯ ರೈಲ್ವೇಗೆ ಸೇರಿಸಬೇಕಾದ ಅನಿವಾರ್ಯವನ್ನು ವಿವರಿಸಿ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಹಾಸನ ಮಂಗಳೂರು ರೈಲ್ವೇ ಅಭಿವೃದ್ಧಿ ಕಂಪೆನಿಯನ್ನು ನೈಋತ್ಯ ರೈಲ್ವೇಯೊಂದಿಗೆ ವಿಲೀನಗೊಳಿಸುವುದು, ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದ ಹೊಸ ಕಟ್ಟಡ ನಿರ್ಮಾಣ ಹಾಗೂ ಪ್ಲಾಟ್‌ ಫಾರ್ಮ್ 4 ಮತ್ತು 5ರ ಕಾಮಗಾರಿಯನ್ನು ಚುರುಕುಗೊಳಿಸುವುದು, ಮಂಗಳೂರು ಜಂಕ್ಷನ್‌ ನಿಲ್ದಾಣದಲ್ಲಿ ಆಧುನಿಕ ಸೌಲಭ್ಯಗಳ ಅಳವಡಿಕೆ ಹಾಗೂ ನಿಲ್ದಾಣದ ಮೂಲಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವುದು, ಪುತ್ತೂರು ವಿವೇಕಾನಂದ ಕಾಲೇಜು ರಸ್ತೆಯಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣ, ಕಬಕ ಪುತ್ತೂರು ಸ್ಟೇಶನ್‌ ಯಾರ್ಡ್‌ನಲ್ಲಿ ಕೆಳಸೇತುವೆ ನಿರ್ಮಾಣ, ಮಂಗಳೂರು ಬೈಕಂಪಾಡಿಯ ಮೀನಕಳಿಯ ರೈಲ್ವೇ ಯಾರ್ಡ್‌ನಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮುಂತಾದ ಬೇಡಿಕೆಗಳ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ನಳಿನ್‌ ಕುಮಾರ್‌ ಅವರು ಸಚಿವರಿಗೆ ಬೇಡಿಕೆ ಮಂಡಿಸಿದ್ದಾರೆ.

ಹೊಸ ರೈಲುಗಳಿಗೆ ಬೇಡಿಕೆ :

ಮಂಗಳೂರಿನಿಂದ ತಿರುಪತಿ ಮತ್ತು ಚೆನ್ನೈಗೆ ಹಾಸನ ಮೂಲಕ ಹೊಸ ರೈಲುಗಳ ಸಂಚಾರ ಆರಂಭ, ಗೇಜ್‌ ಪರಿವರ್ತನೆಗೆ ಮೊದಲು ಸಂಚರಿಸುತ್ತಿದ್ದ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ರೈಲನ್ನು ಮಂಗಳೂರು ಕೇಂದ್ರ ರೈಲು ನಿಲ್ದಾಣದಿಂದ ಮೀರಜ್‌ಗೆ ಮರು ಪ್ರಾರಂಭಿಸುವಂತೆ ನಳಿನ್‌ ಮನವಿ ಮಾಡಿದರು.

Advertisement

ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಸಚಿವರು ಬೇಡಿಕೆಗಳ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಶೀಘ್ರದಲ್ಲಿ ಈಡೇರಿಸುವ ಭರವಸೆ ನೀಡಿದ್ದಾರೆ.

ಶಿರಾಡಿ, ಚಾರ್ಮಾಡಿ ರಸ್ತೆ ದುರಸ್ತಿಗೆ ಗಡ್ಕರಿಗೆ ಮನವಿ :

ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾದ ನಳಿನ್‌ ಕುಮಾರ್‌ ಕಟೀಲು ಅವರು ಮಂಗಳೂರಿನಿಂದ ರಾಜ್ಯದ ಇತರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ಮತ್ತು ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟಿಯಲ್ಲಿ ಭೂಕುಸಿತದಿಂದಾಗಿ ರಸ್ತೆ ಸಂಪರ್ಕಕ್ಕೆ ಅಡಚಣೆಯುಂಟಾಗಿರುವುದನ್ನು ವಿವರಿಸಿ ದುರಸ್ತಿಗೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಹಾಗೂ ಘಾಟಿಯಲ್ಲಿ ಕುಸಿತ ತಡೆಗೆ ಶಾಶ್ವತ ಕಾಮಗಾರಿ ಕೈಗೊಳ್ಳುವಂತೆ ಮನವಿ ಮಾಡಿದರು. ಬೇಡಿಕೆಗಳ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಶೀಘ್ರದಲ್ಲಿ ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ಉದಯವಾಣಿ  ಅಭಿಯಾನ ಪರಿಣಾಮ : ಮೂರು ರೈಲ್ವೇ ವಲಯಗಳಲ್ಲಿ ಹಂಚಿ ಹೋಗಿರುವುದರಿಂದ ಮಂಗಳೂರು ಭಾಗ ಎದುರಿಸುತ್ತಿರುವ ತ್ರಿಶಂಕು ಸ್ಥಿತಿ ಹಾಗೂ ಸಮಸ್ಯೆಗಳನ್ನು ಕುರಿತು ಉದಯವಾಣಿ ನವೆಂಬರ್‌ನಲ್ಲಿ 13 ದಿನಗಳ ನಿರಂತರ ಸರಣಿ ಲೇಖನಗಳನ್ನು ಪ್ರಕಟಿಸಿ ಜನಾಭಿಪ್ರಾಯವನ್ನು ರೈಲ್ವೇ ಇಲಾಖೆ ಹಾಗೂ ಜನಪ್ರತಿನಿಧಿಗಳ ಮುಂದಿರಿಸಿತ್ತು. ಈ ಭಾಗದ ರೈಲು ಪ್ರಯಾಣಿಕರ ಬಳಕೆದಾರರ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿ ನಿರಂತರ ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ.

ಕೊಂಕಣ ರೈಲ್ವೇ ವಿಲೀನಕ್ಕೆ ಶೋಭಾ ಆಗ್ರಹ :

ಉಡುಪಿ: ಭಾರತೀಯ ರೈಲ್ವೇ ಯೊಂದಿಗೆ ಕೊಂಕಣ ರೈಲ್ವೇ ನಿಗಮ ನಿಯಮಿತವನ್ನು (ಕೆಆರ್‌ಸಿಎಲ್‌) ವಿಲೀನ ಗೊಳಿಸುವಂತೆ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಅವರನ್ನು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ರಾಜ್ಯಗಳೊಂದಿಗೆ ಜಂಟಿ ಯೋಜನೆ ಯಾಗಿ ನಿಗಮವನ್ನು ಆರಂಭಿಸಲಾಗಿತ್ತು. ಆದರೆ ಕರಾವಳಿ ಜನರ ಆಶೋತ್ತರಗಳನ್ನು ಇದು ಈಡೇರಿಸಿಲ್ಲವಾದ ಕಾರಣ ರೈಲ್ವೇಯೊಂದಿಗೆ ವಿಲೀನಗೊಳಿಸಿ ನೈಋತ್ಯ ರೈಲ್ವೇ (ಕರ್ನಾಟಕ-ಗೋವಾ) ಮತ್ತು ಮಧ್ಯ ರೈಲ್ವೇ (ಮಹಾರಾಷ್ಟ್ರ) ವ್ಯಾಪ್ತಿಗೆ ಸೇರಿಸಬೇಕು. ಇದು ಬಹುದಿನದ ಜನರ ಬೇಡಿಕೆಯಾಗಿದೆ ಎಂದು ತಿಳಿಸಿದರು.

ಕಾರವಾರ – ಯಶವಂತಪುರದ ನಡುವೆ ವಾರದಲ್ಲಿ ಮೂರು ದಿನ ಓಡಾಡುತ್ತಿತ್ತು. ಇದರಲ್ಲಿ ಕಾರವಾರ ಮತ್ತು ಮಂಗಳೂರು ನಡುವೆ ರದ್ದುಗೊಳಿಸಿದ್ದನ್ನು ಮತ್ತೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ಕೆಆರ್‌ಸಿಎಲ್‌ ಇದುವರೆಗೆ ಕರ್ನಾಟಕದ ಜನರಿಗಾಗಿ ಒಂದೇ ಒಂದು ರೈಲನ್ನು ಆರಂಭಿಸಿಲ್ಲ. ಆದರೆ ಬಹಳ ದೀರ್ಘ‌ ಕಾಲದ ಕಾನೂನು ಸಮರದ ಬಳಿಕ ಆರಂಭಿಸಿದ ರೈಲನ್ನು ರದ್ದು ಪಡಿಸಿದೆ. ಇದಕ್ಕೆ ಉದಾಹರಣೆ ಬೆಂಗಳೂರು – ಕಣ್ಣೂರು/ಕಾರವಾರ ರಾತ್ರಿ ರೈಲು. ಬೆಂಗಳೂರು-ಕಾರವಾರ- ಬೆಂಗಳೂರು ರಾತ್ರಿ ರೈಲನ್ನು (ಪಂಚಗಂಗಾ ಎಕ್ಸ್‌ಪ್ರೆಸ್‌) ಮಂಗಳೂರಿನಲ್ಲಿ ನಿಲುಗಡೆ ಇಲ್ಲದೆ ಬೆಂಗಳೂರು-ಕಣ್ಣೂರು/ಕಾರವಾರದ ರೈಲನ್ನು ರದ್ದುಗೊಳಿಸಿದರು.

ಕರ್ನಾಟಕದಲ್ಲಿ 250 ಕಿ.ಮೀ. ಮಾರ್ಗವಿದೆಯಾದರೂ ಯಾವುದೇ ಜಿಲ್ಲಾ ಕೇಂದ್ರದಲ್ಲಿ ರೈಲು ನಿಲುಗಡೆ ಸೌಲಭ್ಯವನ್ನು ಕಲ್ಪಿಸಿಲ್ಲ. ಕಾರವಾರದಲ್ಲಿ ರೈಲಿಗೆ ನೀರು ತುಂಬಿಸುವ ವ್ಯವಸ್ಥೆಯೂ ಇಲ್ಲ ಎಂದು ಶೋಭಾ ಸಚಿವರ ಗಮನಕ್ಕೆ ತಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next