Advertisement

ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮಕ್ಕೆ ಸಚಿವರ ಗೈರು: ಸ್ಥಳೀಯರ ಆಕ್ರೋಶ

01:06 PM May 03, 2022 | keerthan |

ವಿಜಯಪುರ: ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಬಸವ ಜನ್ಮಭೂಮಿ ಬಸವನಬಾಗೇವಾಡಿ ಪಟ್ಟಣದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮಕ್ಕೆ ಸಚಿವರೇ ಗೈರಾಗುವ ಮೂಲಕ ಕಾಟಾಚಾರದ ಕಾರ್ಯಕ್ರಮ ಎಂಬಂತೆ ಆಚರಿಸಿದೆ.

Advertisement

ಬಸವನಬಾಗೇವಾಡಿಯ ಮೂಲ ನಂದೀಶ್ವರ ದೇವಸ್ಥಾನದ ಪರಿಸರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯಪುರ ಜಿಲ್ಲಾಡಳಿತ, ಜಿ.ಪಂ. ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಜಂಟಿಯಾಗಿ‌ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಗಮಿಸಬೇಕಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಸೇರಿದಂತೆ ಬಹುತೇಕ ಆಹ್ವಾನಿತ ಎಲ್ಲ ಜನಪ್ರತಿನಿಧಿಗಳು ಗೈರು ಹಾಜರಾಗಿದ್ದರು.

ಬಸವನಬಾಗೇವಾಡಿ ಶಾಸಕರಾದ ಮಾಜಿ ಸಚಿವ ಶಿವಾನಂದ ಪಾಟೀಲ, ಮೇಲ್ಮನೆ ಕಾಂಗ್ರೆಸ್ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ವಿಶೇಷಾಧಿಕಾರಿ ಶಿವಯೋಗಿ ಕಳಸದ, ಜಿಲ್ಲಾಧಿಕಾರಿ ವಿ.ಎಂ.ದಾನಮ್ಮನವರ, ಸಿಇಒ ರಾಹುಲ್ ಶಿಂಧೆ ಸೇರಿದಂತೆ ಕೆಲವೇ ಕೆಲವರು ಮಾತ್ರ ಹಾಜರಾಗಿದ್ದರು.

ರಾಜ್ಯ ಮಟ್ಟದ ರಾಜ್ಯ ಸರ್ಕಾರದ ಬಸವ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಜಿಲ್ಲೆಯ ಸಚಿವರು ಗೈರಾಗಿರುವುದು ಬೇಸರ ತರಿಸಿದೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಕಾಶ ರಾಠೋಡ ಆಕ್ಷೇಪಿಸಿದರು.

ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲೂ ಬಸವ ಜಯಂತಿ ಅಚರಿಸುವ ಮೂಲಕ ವಿಶ್ವದ ಮೊದಲ ಸಂಸತ್ ಸ್ಥಾಪನೆ ರೂವಾರಿ ಬಸವೇಶ್ವರರಿಗೆ ಗೌರವ ಸಲ್ಲಿಸಬೇಕು ಎಂದು ರಾಠೋಡ ಆಗ್ರಹಿಸಿದರು.

Advertisement

ಜನ್ಮಭೂಮಿ ಬಸವನಬಾಗೇವಾಡಿ ಪಟ್ಟಣದಲ್ಲೇ ಬಸವ ಜಯಂತಿ ಆಚರಿಸುವ ಕುರಿತು ನಾನು ಮೇಲ್ಮನೆಯಲ್ಲಿ, ಸ್ಥಳೀಯ ಶಾಸಕ ಶಿವಾನಂದ ಪಾಟೀಲ ಕೆಳ ಮನೆಯಲ್ಲಿ ಧ್ವನಿ ಎತ್ತಿದ್ದರಿಂದಲೇ ರಾಜ್ಯ ಸರ್ಕಾರ ಬಸವನಬಾಗೇವಾಡಿ ಪಟ್ಟಣದಲ್ಲಿ ರಾಜ್ಯ ಮಟ್ಟದ ಬಸವ ಜಯಂತಿ ಆಚರಿಸಲು ಮುಂದಾಗಿದೆ.

ಇದನ್ನೂ ಓದಿ:ಯಾರೂ ಹಗಲು ಕನಸು ಕಾಣಬೇಡಿ..; ಸ್ವಪಕ್ಷೀಯರಿಗೆ ಸಚಿವ ಅಶೋಕ್ ಟಾಂಗ್

ರಾಜ್ಯ ಸರ್ಕಾರ ಹೆಸರಿಗೆ ಮಾತ್ರ ಸರ್ಕಾರದಿಂದ ರಾಜ್ಯ ಮಟ್ಟದ ಬಸವ ಜಯಂತಿ ಆಚರಣೆಗೆ ಮುಂದಾಗಿದೆ. ಇದೇ ಮೊದಲ ಬಾರಿಗೆ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿತ ಇಲಾಖೆಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರ ಹೊರತಾಗಿ ಜಿಲ್ಲೆಯ ಸಂಸದ, ಬಹುತೇಕ ಶಾಸಕರು  ಗೈರು ಹಾಜರಾಗಿದ್ದಾರೆ.

ಇದು ಬಸವ ಜಯಂತಿ ವಿಷಯದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ ಮಾಡಿದೆ ಎಂದು ಸ್ಥಳೀಯರು, ಬಸವಾದಿ ಶರಣ ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.

ಬಸನ ಜನ್ಮ‌ಭೂಮಿಯಲ್ಲಿ ಬಸವ ಜಯಂತಿ ಆಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸಬೇಕೆಂಬ ಬೇಡಿಕೆಗೆ ಸ್ಪಂಧಿಸಿದ್ದ ಸರ್ಕಾರ, ಆಚರಣೆ ವಿಷಯದಲ್ಲಿ ನಿರ್ಲಕ್ಷ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮವನ್ನು ಬಸವನಬಾಗೇವಾಡಿ ಪಟ್ಟಣದಲ್ಲಿ ಆಚರಿಸುವ ಕುರಿತು ಆದೇಶ ಹೊರಡಿಸಿದ್ದು, ಆದೇಶಕ್ಕೆ ಸೀಮಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next