Advertisement

ಸಚಿವ ಸ್ಥಾನ: ಅಂಗಾರರಿಗೆ ಕೈಕೊಟ್ಟ ನಾಯಕರು

12:05 AM Aug 21, 2019 | mahesh |

ಸುಳ್ಯ: ವಿಧಾನಸಭಾ ಕ್ಷೇತ್ರ ರಚನೆಗೊಂಡು 57 ವರ್ಷಗಳ ಬಳಿಕ ಮೊದಲ ಬಾರಿಗೆ ಸುಳ್ಯದಿಂದ ಚುನಾಯಿತಗೊಂಡ ಶಾಸಕರೋರ್ವರು ಸಚಿವ ಸ್ಥಾನ ಪಡೆಯುತ್ತಾರೆ ಎನ್ನುವ ಬೆಟ್ಟದಷ್ಟಿದ್ದ ನಿರೀಕ್ಷೆ ಮತೊಮ್ಮೆ ಹುಸಿಯಾಗಿದೆ.

Advertisement

ಯಡಿಯೂರಪ್ಪ ಸರಕಾರದ ಮೊದಲ ಹಂತದ ಸಚಿವ ಸಂಪುಟ ರಚನೆಯಲ್ಲಿ ಸುಳ್ಯ ಶಾಸಕ ಎಸ್‌. ಅಂಗಾರ ಅವರಿಗೆ ಸಚಿವ ಸ್ಥಾನ ದೊರೆತು ಮಂಗಳವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನುವುದು ಖಚಿತವಾಗಿ ಸೋಮವಾರವೇ ಪಕ್ಷದ ಮುಖಂಡರು, ಕುಟುಂಬಸ್ಥರು ಬೆಂಗಳೂರಿಗೆ ತೆರಳಿದ್ದರು. ಆದರೆ ರಾತ್ರೊರಾತ್ರಿ ನಡೆದ ಬೆಳವಣಿಗೆಯಿಂದ ಮಂಗಳವಾರ ರಾಜ್ಯಪಾಲರಿಗೆ ಸಲ್ಲಿಸಲಾದ ಪಟ್ಟಿಯಲ್ಲಿ ಅಂಗಾರ ಅವರ ಹೆಸರಿಲ್ಲದೆ ತಾಲೂಕಿನಲ್ಲಿ ತೀವ್ರ ನಿರಾಸೆ ಉಂಟಾಯಿತು.

ಎರಡನೇ ಬಾರಿ ಅವಕಾಶ ವಂಚಿತ

ಆರು ಬಾರಿ ಚುನಾಯಿತರಾಗಿರುವ ಎಸ್‌. ಅಂಗಾರ ಅವಿಭಜಿತ ಜಿಲ್ಲೆಯ ಹಿರಿಯ ಶಾಸಕ. ಹೀಗಾಗಿ ಈ ಬಾರಿ ಸಚಿವರಾಗುವುದು ನಿಶ್ಚಿತ ಎನ್ನಲಾಗಿತ್ತು. 2008ರಲ್ಲಿ ಅಂಗಾರ ಅವರಿಗೆ ಅವಕಾಶ ನೀಡಬೇಕು ಎಂದು ಸುಳ್ಯದಿಂದ ನಿಯೋಗದ ಮೂಲಕ ಆಗ್ರಹಿಸಿದ್ದರೂ ಸಿಕ್ಕಿರಲಿಲ್ಲ. ಎರಡನೇ ಬಾರಿಯೂ ಅವಕಾಶ ವಂಚಿತರಾಗಿರುವುದು ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಭದ್ರಕೋಟೆಯ ನಿರ್ಲಕ್ಷ್ಯ

Advertisement

ಸುಳ್ಯ ಬಿಜೆಪಿಯ ಭದ್ರಕೋಟೆ. ಸಂಘಟನೆ, ಪಕ್ಷ ನಿಷ್ಠೆ, ಶಿಸ್ತು ವಿಚಾರದಲ್ಲಿ ಎಲ್ಲ ಕ್ಷೇತ್ರಕ್ಕಿಂತಲೂ ಮುಂದಿದೆ. 2013ರಲ್ಲಿ ದ.ಕ. ಕ್ಷೇತ್ರದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಹೀನಾಯ ಸೋಲು ಅನುಭವಿಸಿತ್ತಾದರೂ ಸುಳ್ಯದಲ್ಲಿ ಗೆಲುವು ಸಾಧಿಸಿ ತನ್ನ ಸಾಮರ್ಥ್ಯ ಸಾಬೀತುಪಡಿಸಿತ್ತು. ಗ್ರಾ.ಪಂ., ತಾ.ಪಂ., ಜಿ.ಪಂ., ಸೊಸೈಟಿ ಚುನಾವಣೆಯಲ್ಲಿಯೂ ಇಲ್ಲಿ ಬಿಜೆಪಿಯದ್ದೆ ಪಾರುಪತ್ಯ. ಕಳೆದ ಲೋಕಸಭೆ ಚುನಾವಣೆಯಲ್ಲಿಯೂ ಜಿಲ್ಲೆಯಲ್ಲಿ ಅತ್ಯಧಿಕ ಮುನ್ನಡೆ ಕೊಟ್ಟ ಕ್ಷೇತ್ರ ಇದಾಗಿತ್ತು. ಅಷ್ಟಾಗಿಯು ಬಿಜೆಪಿ ಹೈಕಮಾಂಡ್‌ ಸುಳ್ಯವನ್ನು ನಿರ್ಲಕ್ಷಿ ಸಿರುವುದು ಕಾರ್ಯಕರ್ತರ, ಮುಖಂಡರ ಅಸಮಾಧಾನಕ್ಕೆ ಕಾರಣವೆನಿಸಿದೆ.

ಕಾಣದ ‘ಕೈ’ವಾಡ

ಹೈಕಮಾಂಡ್‌ಗೆ ರವಾನಿಸಲಾದ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಅಂಗಾರ ಅವರ ಹೆಸರು ಇತ್ತು. ಸೋಮವಾರ ರಾತ್ರಿ ತನಕವೂ ಮಂಗಳವಾರ ಪ್ರಮಾಣ ವಚನಕ್ಕೆ ಹಾಜರಾಗಲು ಪಕ್ಷದಿಂದ ಮಾಹಿತಿ ನೀಡಲಾಗಿತ್ತು. ಸೋಮವಾರ ರಾತ್ರಿ ತನಕ ಎಸ್ಕಾರ್ಟ್‌ ಸಿಬಂದಿ ಶಾಸಕರಿಗೆ ಕರೆ ಮಾಡಿ ಬೆಳಗ್ಗೆ ಹೊರಡುವ ಸಮಯದ ಬಗ್ಗೆಯೂ ಮಾಹಿತಿ ಪಡೆದಿದ್ದರು. ಹೀಗಿದ್ದರೂ ತಡರಾತ್ರಿ ನಡೆದ ಲಾಬಿ ಪರಿಣಾಮ ಅಂಗಾರ ಅವರ ಹೆಸರು ಕೈಬಿಡಲಾಯಿತು ಎಂದು ವಿಶ್ಲೇಷಿಸಲಾಗಿದೆ.

ಉಳಿದ ಶಾಸಕರ ಮೌನ

ಅಂಗಾರ ಅವರಿಗೆ ಸಚಿವ ಸ್ಥಾನ ಕೈ ತಪ್ಪಿರುವ ಬಗ್ಗೆ ಜಿಲ್ಲಾಧ್ಯಕ್ಷರು ಭೇಟಿ ಮಾಡಿ ಸಮಾಧಾನದ ಮಾತುಗಳನ್ನಾಡಿರುವುದು ಬಿಟ್ಟರೆ, ಉಳಿದ ಶಾಸಕರು, ಮುಖಂಡರು, ಸಂಸದರು ಬಹಿರಂಗವಾಗಿ ಧ್ವನಿಯೆತ್ತಿಲ್ಲ ಎನ್ನುವ ಆಕ್ರೋಶದ ಕೂಗು ಕೇಳಿ ಬಂದಿದೆ.

ಜಿಲ್ಲಾಧ್ಯಕ್ಷರು ಗುರುವಾರ ಸಭೆ ಸೇರುವ ಬಗ್ಗೆ ತೀರ್ಮಾನಿಸುವ ಬದಲು ಜಿಲ್ಲೆಯ ಎಲ್ಲ ಶಾಸಕರು ತತ್‌ಕ್ಷಣ ನಿರ್ಧಾರ ಪ್ರಕಟಿಸಬೇಕಿತ್ತು ಎಂದು ಕೆಲ ಕಾರ್ಯಕರ್ತರು, ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಂಗಾರ ಅವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ವಿಷಯದಲ್ಲಿ ಸುಳ್ಯ ಹೊರತುಪಡಿಸಿ ಉಳಿದ ಕ್ಷೇತ್ರಗಳಿಂದ ಸಿಕ್ಕ ಬೆಂಬಲದ ಬಗ್ಗೆಯು ತೃಪ್ತಿ ಇಲ್ಲ ಎಂದು ಸುಳ್ಯ ಬಿಜೆಪಿಯ ಪ್ರಮುಖ ಮುಖಂಡರೊಬ್ಬರು ಅಸಮಾಧಾನ ತೋಡಿಕೊಂಡಿದ್ದಾರೆ.

57 ವರ್ಷಗಳಿಂದ ಸಿಗದ ಮಂತ್ರಿಗಿರಿ
1962ರಲ್ಲಿ ಹೊಸ ಸುಳ್ಯ ಕ್ಷೇತ್ರ ರಚನೆಗೊಂಡು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿತ್ತು. 1967ರಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಬದಲಾಯಿತು. ಇಲ್ಲಿ ಪಕ್ಷದ ರಾಮಚಂದ್ರ, ಪಿ.ಡಿ. ಬಂಗೇರ, ಎ. ರಾಮಚಂದ್ರ, ಬಾಕಿಲ ಹುಕ್ರಪ್ಪ, ಕೆ. ಕುಶಲ, ಅಂಗಾರ ಅವರು ಕ್ಷೇತ್ರ ಪ್ರತಿನಿಧಿಸಿದ್ದರು.

ಹಾಲಿ ಶಾಸಕ ಎಸ್‌. ಅಂಗಾರ ಅವರು ಗರಿಷ್ಠ ಅವಧಿಯಿಂದ ಶಾಸಕರಾಗಿದ್ದಾರೆ. ಸುಳ್ಯ ತಾಲೂಕಿನವರಾಗಿ, ಬೇರೆ ಕ್ಷೇತ್ರದಿಂದ ಗೆದ್ದವರು ಮುಖ್ಯಮಂತ್ರಿ, ಕೇಂದ್ರ-ರಾಜ್ಯದಲ್ಲಿ ಸಚಿವರಾದ ಉದಾಹರಣೆಗಳಿವೆ. ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಜನಪ್ರತಿನಿಧಿಗಳಿಗೆ ಆ ಭಾಗ್ಯ ಸಿಕ್ಕಿರಲಿಲ್ಲ. ಪುತ್ತೂರು – ಸುಳ್ಯ ತಾಲೂಕು ಏಕ ವಿಧಾನಸಭಾ ಕ್ಷೇತ್ರವಾಗಿದ್ದ ಕಾಲದಲ್ಲಿ 1952, 57 ಮತ್ತು 62ರಲ್ಲಿ ಸುಳ್ಯದ ಬಾಳುಗೋಡು ನಿವಾಸಿ, ಪುತ್ತೂರಿನಲ್ಲಿ ನ್ಯಾಯವಾದಿಯಾಗಿದ್ದ ಕೂಜುಗೂಡು ವೆಂಕಟರಮಣ ಗೌಡ ಅವರು ಪುತ್ತೂರಿನಿಂದ ಸ್ಪರ್ಧಿಸಿ ಮೂರು ಅವಧಿಗೆ ಶಾಸಕರಾಗಿದ್ದರು.

ಈ ಸಂದರ್ಭ ಕೆ.ವಿ. ಗೌಡ ಅವರಿಗೆ ನಿಜಲಿಂಗಪ್ಪ ಸರಕಾರದಲ್ಲಿ ಉಪ ಸಚಿವ ಸ್ಥಾನದ ಆಹ್ವಾನ ಬಂದಿತ್ತು. ಆದರೆ ಕ್ಯಾಬಿನೆಟ್ ಸ್ಥಾನ ನಿರೀಕ್ಷೆಯಲ್ಲಿದ್ದ ಕೆ.ವಿ. ಗೌಡ ಅವರು ಇದನ್ನು ತಿರಸ್ಕರಿಸಿದ್ದರು. ಈ ಬಾರಿ ಅಂಗಾರ ಅವರಿಗೆ ಸ್ಥಾನ ದೊರೆಯುವ ನಿರೀಕ್ಷೆ ಕೊನೆಯ ಕ್ಷಣದಲ್ಲಿ ಕೈ ತಪ್ಪಿದೆ.

ನೈತಿಕತೆ ಕಳಕೊಂಡಿದೆ

ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಸಂಪುಟ ರಚನೆ ವೇಳೆ ಸುಳ್ಯದ ನಿಷ್ಠಾವಂತ ಶಾಸಕ ಎಸ್‌.ಅಂಗಾರ ಅವರನ್ನು ಅವ ಗಣಿಸಿ ಕಳಂಕಿತರಿಗೆ ಮಣೆ ಹಾಕಿರುವುದು ಸರಿ ಯಲ್ಲ. ಸತತ 6 ಬಾರಿ ಆಯ್ಕೆಯಾಗಿ ಕಳಂಕವಿಲ್ಲದ ಆರೆಸ್ಸೆಸ್‌ ಕಾರ್ಯಕರ್ತ ಅಂಗಾರರಿಗೆ ಮಂತ್ರಿ ಸ್ಥಾನದ ನೀಡದ ಬಿಜೆಪಿ ಹೈಕಮಾಂಡ್‌ ನೈತಿಕತೆ ಕಳೆದುಕೊಂಡಿದೆ. ಸುಳ್ಯಕ್ಕೆ ಅವ ಮಾನ ಮಾಡಲಾಗಿದೆ. ಸಂಪುಟ ಪುನಾ ರಚನೆ ಯಲ್ಲಾದರೂ ಅಂಗಾರರಿಗೆ ಅವಕಾಶ ನೀಡಬೇಕು.
– ಅಶೋಕ ನೆಕ್ರಾಜೆ, ವಿಪಕ್ಷ ನಾಯಕ, ತಾ.ಪಂ., ಸುಳ್ಯ

ಬೇಸರ ತರಿಸಿದೆ

ಹಿರಿತನ, ಪಕ್ಷನಿಷ್ಠೆ ಮತ್ತು ಪ್ರಾಮಾಣಿಕತೆ – ಎಲ್ಲ ಅಧಾರಗಳಲ್ಲಿ ಅಂಗಾರರಿಗೆ ಅವಕಾಶ ನೀಡಬೇಕಿತ್ತು. ಅವರೆಂದೂ ಸ್ಥಾನಮಾನಕ್ಕಾಗಿ ಬೇಡಿಕೆ ಇಟ್ಟವರಲ್ಲ. ಅಂತಹ ಶಾಸಕರಿಗೆ ಮಂತ್ರಿ ಸ್ಥಾನ ನಿರಾಕರಿಸಿದ ಬಗ್ಗೆ ಬೇಸರವಿದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರ ಸಮಾಲೋಚಿಸಿ ನಿರ್ಧಾರಿಸುತ್ತೇವೆ.
-ದಿನೇಶ್‌ ಸಂಪ್ಯಾಡಿ, ಅಧ್ಯಕ್ಷರು, ಸುಬ್ರಹ್ಮಣ್ಯ ಗ್ರಾಮ ಬಿಜೆಪಿ

ನ್ಯಾಯ ಸಿಗದಿದ್ದರೆ ಸೂಕ್ತ ನಿರ್ಧಾರ

ಅಂಗಾರ ನಿಷ್ಠಾವಂತ ಶಾಸಕ. ಸುಳ್ಯ ಬಿಜೆಪಿಯ ಭದ್ರಕೋಟೆ. ಹೀಗಿದ್ದರೂ ಕೊನೆ ಕ್ಷಣದಲ್ಲಿ ಅವಕಾಶ ತಪ್ಪಿಸಿರುವುದು ಅತೀವ ನೋವು ತರಿಸಿದೆ. ಚುನಾವಣೆಯಲ್ಲಿ ಸೋತ ವ್ಯಕ್ತಿಗೆ ಸಚಿವ ಸ್ಥಾನ ಕೊಟ್ಟಿರುವುದು, ಅರ್ಹ ನಿಷ್ಠಾವಂತ ಹಾಲಿ ಶಾಸಕನಿಗೆ ಅವಕಾಶ ನಿರಾಕರಿಸಿರುವ ಪಕ್ಷದ ನಾಯಕರ ನಡೆ ಬೇಸರ ಮೂಡಿಸಿದೆ. ನ್ಯಾಯ ಸಿಗದಿದ್ದರೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ.
-ವೆಂಕಟ ವಳಲಂಬೆ, ಅಧ್ಯಕ್ಷರು, ಬಿಜೆಪಿ ಮಂಡಲ ಸಮಿತಿ ಸುಳ್ಯ

ಏಕೈಕ ಮೀಸಲು ಕ್ಷೇತ್ರ

ಅವಿಭಜಿತ ಜಿಲ್ಲೆಯಲ್ಲಿ ಸುಳ್ಯ ಏಕೈಕ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. 1987ರಲ್ಲಿ ಅಂಗಾರ ಅವರು ಮೊದಲ ಬಾರಿಗೆ ಸ್ಪರ್ಧಿಸಿ ಕಾಂಗ್ರೆಸ್‌ ಅಭ್ಯರ್ಥಿ ಕೆ. ಕುಶಲ ಅವರ ವಿರುದ್ಧ ಪರಾಜಿತಗೊಂಡಿದ್ದರು. 1994ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ. ಕುಶಲ ವಿರುದ್ಧ 15,051 ಅಂತರದಿಂದ ಗೆದ್ದು ಮೊದಲ ಸಲ ವಿಧಾನಸಭೆ ಪ್ರವೇಶಿಸಿದರು. 1999ರಲ್ಲಿ ಮತ್ತೆ ಕುಶಲ ಅವರ ವಿರುದ್ಧ 6,997 ಮತಗಳ ಅಂತರದಿಂದ ಗೆದ್ದರು. ಆಮೇಲೆ ಸತತವಾಗಿ ಕಾಂಗ್ರೆಸ್‌ನ ಡಾ| ರಘು ಅವರ ವಿರುದ್ಧ 2004ರಲ್ಲಿ 17,085 ಮತ, 2008ರಲ್ಲಿ 4,322 ಮತ, 2013ರಲ್ಲಿ 1,372 ಮತಗಳ ಅಂತರದಿಂದ ಹಾಗೂ 2018ರಲ್ಲಿ 26,068 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

ಅನ್ಯಾಯವಾಗಿದೆ
ಸಚಿವಗಿರಿ ಜಿಲ್ಲೆಯ ಮತ್ತು ಕ್ಷೇತ್ರದ ಜನರ ಅಪೇಕ್ಷೆಯಾಗಿತ್ತು. ಜಿಲ್ಲೆಗೆ ಮತ್ತು ನನಗೆ ಅನ್ಯಾಯವಾಗಿದೆ. ಅನೇಕ ವರ್ಷಗಳಿಂದ ಸಂಘಟನೆಯಲ್ಲಿ ತಣ್ತೀ ಮತ್ತು ಸಿದ್ಧಾಂತವನ್ನು ಒಪ್ಪಿ ಕೆಲಸ ಮಾಡಿದ್ದೇನೆ. ತಣ್ತೀ ಸಿದ್ಧಾಂತಗಳಿಗೆ ಬೆಲೆ ಇಲ್ಲ ಅಂತ ಹೇಳಿದರೆ ನಾವು ಏನೂ ಮಾಡುವುದಕ್ಕೆ ಆಗುವುದಿಲ್ಲ. ಆದರೆ ತಣ್ತೀ, ಸಿದ್ಧಾಂತವನ್ನು ಬಿಡಲು ನಾನು ತಯಾರಿಲ್ಲ.
– ಎಸ್‌. ಅಂಗಾರ, ಶಾಸಕರು

ಬೇಸರವಾಗಿದೆ
ಸರಳ ಸಜ್ಜನಿಕೆಗೆ ಹೆಸರಾದ ಸುಳ್ಯದ ನಿಷ್ಠಾವಂತ ಶಾಸಕ ಎಸ್‌. ಅಂಗಾರ ಅವರಿಗೆ ಸಂಪುಟ ರಚನೆ ವೇಳೆ ಮಂತ್ರಿ ಸ್ಥಾನದಿಂದ ವಂಚಿತರನ್ನಾಗಿಸಿರುವುದು ನೋವಿನ ಸಂಗತಿ. ಯಾವ ಕಾರಣಕ್ಕೆ ಅವರಿಗೆ ಸಚಿವ ಪದವಿ ಕೈತಪ್ಪಿದೆ ಗೊತ್ತಿಲ್ಲ. ಮುಂದಿನ ಬಾರಿಯ ಸಂಪುಟ ಪುನಾರಚನೆ ವೇಳೆಗಾದರೂ ಅವರಿಗೆ ಅವಕಾಶ ನೀಡಿದಲ್ಲಿ ಒಳ್ಳೆಯದು.
– ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠ, ಸುಬ್ರಹ್ಮಣ್ಯ

ಕಡಬ, ಸುಬ್ರಹ್ಮಣ್ಯದಲ್ಲಿ ಅಸಮಾಧಾನ
ಅಂಗಾರ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದನ್ನು ಖಂಡಿಸಿ ಸುಬ್ರಹ್ಮಣ್ಯ, ಕಡಬದಲ್ಲೂ ಅಸಮಾಧಾನ ವ್ಯಕ್ತವಾಗಿದೆ. ಜೆಡಿಎಸ್‌ ಉಪಾಧ್ಯಕ್ಷ ಎಂ.ಬಿ. ಸದಾಶಿವ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಪಕ್ಷನಿಷ್ಠ, ಹಿರಿಯ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ನೀಡದಿರುವುದು ಸುಳ್ಯಕ್ಕೆ ಮಾಡಿದ ಅವಮಾನ ಎಂದರು. ಸುಬ್ರಹ್ಮಣ್ಯದಲ್ಲಿ ಶಾಸಕರ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಕಡಬದಲ್ಲೂ ಅತೃಪ್ತಿ ವ್ಯಕ್ತವಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next