ಬೆಂಗಳೂರು: ಸಮುದಾಯವಾರು ಡಿಸಿಎಂ ಹುದ್ದೆಯ ಬೇಡಿಕೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲೇ ನಿಗಮ-ಮಂಡಳಿಗಳ ಅಧ್ಯಕ್ಷರ ಕಾರ್ಯವ್ಯಾಪ್ತಿಯಲ್ಲಿ ಸಚಿವರ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ಸ್ಫೋಟಗೊಂಡಿದೆ.
ಈ ಸಂಬಂಧ ಹೈಕಮಾಂಡ್‌ಗೆ ದೂರು ಕೂಡ ಸಲ್ಲಿಕೆಯಾಗಿದೆ. ಇದರಿಂದ “ಕೈ’ ಪಾಳಯದಲ್ಲಿ ಈಗ ಒಂದರ ಹಿಂದೊಂದು ವಿವಾದದ ಭುಗಿಲೇಳುತ್ತಿವೆ.
ನೂತನ ಸಂಸದರ ಪ್ರಮಾಣ ವಚನ ನೆಪದಲ್ಲಿ ದೆಹಲಿಗೆ ತೆರಳಿದ ಕೆಲ ನಾಯಕರು ಅದರಲ್ಲೂ ವಿಶೇಷವಾಗಿ ವೀರಶೈವ-ಲಿಂಗಾಯತ ಸಮುದಾಯದ ಶಾಸಕರು ಹಾಗೂ ನಿಗಮ-ಮಂಡಳಿಗಳ ಅಧ್ಯಕ್ಷರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ತಮ್ಮ ಕಾರ್ಯವ್ಯಾಪ್ತಿಯಲ್ಲಿ ವಿನಾಕಾರಣ ಹಸ್ತಕ್ಷೇಪ ಮಾಡುತ್ತಿರುವ ಸಚಿವರ ವಿರುದ್ಧ ದೂರು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿರುದ್ಧ ಅದೇ ಇಲಾಖೆಗೆ ಸಂಬಂಧಿಸಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂ ಎಸ್‌ಡಿ) ಅಧ್ಯಕ್ಷ ಹಾಗೂ ಧಾರವಾಡ ಶಾಸಕ ವಿನಯ ಕುಲಕರ್ಣಿ ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ. ಈ ಭೇಟಿಯಲ್ಲಿ ಸಚಿವ ಸತೀಶ ಜಾರಕಿಹೊಳಿ, ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೇಲ್ ಕೂಡ ಇದ್ದರು ಎನ್ನಲಾಗಿದೆ. ಕೆಲವು ನಿಗಮ-ಮಂಡಳಿಗಳ ಅಧ್ಯಕ್ಷರ ಕಾರ್ಯವ್ಯಾಪ್ತಿಯಲ್ಲಿ ಹಲವು ಸಚಿವರು ಅನಗತ್ಯವಾಗಿ ಮೂಗುತೂರಿಸುತ್ತಿದ್ದಾರೆ. ಇದರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿಕ್ಕೂ ಆಗುತ್ತಿಲ್ಲ ಅಂತಾ ವರಿಷ್ಠರ ಗಮನಸೆಳೆದಿರುವುದಾಗಿ ಭೇಟಿಯಾದ ನಿಯೋಗದಲ್ಲಿನ ನಾಯಕರೊಬ್ಬರು ತಿಳಿಸಿದ್ದಾರೆ.
ಮುಖ್ಯವಾಗಿ ಹುಬ್ಬಳ್ಳಿ-ಧಾರವಾಡ ಕಾರ್ಪೋರೇಷನ್‌ಗೆ ನಗರೋತ್ಥಾನ ಯೋಜನೆ ಅಡಿ ಬರುವ ಅನುದಾನ ಹಂಚಿಕೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಅಭಿವೃದ್ಧಿ ಅಡಿ ಕೈಗೊಳ್ಳಬೇಕಾದ ಕೆರೆ ಮತ್ತಿತರ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡುವ ವಿಚಾರ, ಕೆಯುಡಬ್ಲ್ಯೂಎಸ್‌ಡಿ ಅಡಿ ಹಲವು ಯೋಜನೆಗಳು ಅಥವಾ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವುದರಿಂದ ಹಿಡಿದು ಪ್ರತಿ ಹಂತದಲ್ಲಿ ಸಚಿವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದು ಬೇರೆ ರೀತಿಯ ಪರಿಣಾಮ ಬೀರುತ್ತಿದೆ. ಅಧಿಕಾರಿಗಳಲ್ಲೂ ಗೊಂದಲಕ್ಕೆ ಎಡೆಮಾಡಿಕೊಡುತ್ತಿದೆ ಎಂದು ದೂರು ಸಲ್ಲಿಸಲಾಗಿದೆ.
ಈಗಾಗಲೇ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಅನಿವಾರ್ಯವಾಗಿ ವರಿಷ್ಠರ ಗಮನಕ್ಕೆ ತರಲಾಗಿದೆ. ದೂರು ಆಲಿಸಿದ ಅಧ್ಯಕ್ಷರು, ಈ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಸಚಿವರ ಹಿಟ್ಲರ್ ಧೋರಣೆಗೆ ಆಕ್ರೋಶ:
ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ವಿನಯ ಕುಲಕರ್ಣಿ, ಪ್ರತಿ ಹಂತದಲ್ಲೂ ಸಚಿವರ ಹಸ್ತಕ್ಷೇಪ ಇದೆ. ಕಾರ್ಪೋರೇಷನ್ ಅನುದಾನ ಹಂಚಿಕೆ ಆಗಿರಬಹುದು, ನಾನೇ ಅಧ್ಯಕ್ಷನಾಗಿರುವ ಮಂಡಳಿ ವಿಚಾರದಲ್ಲಿ ಆಗಿರಬಹುದು. ಹೀಗೆ ಪ್ರತಿಯೊಂದರಲ್ಲಿ ಮೂಗುತೂರಿಸುವುದಾದರೆ ನಮಗ್ಯಾಕೆ ಈ ಅಧ್ಯಕ್ಷಗಿರಿ ಕೊಡಬೇಕು? ಸಚಿವರ ಈ ಹಿಟ್ಲರ್ ನಡೆಯಿಂದ ಬೇಸತ್ತು ದೂರು ನೀಡಲಾಗಿದೆ. ಈ ಧೋರಣೆ ವಿರುದ್ಧ ಹೋರಾಟ ನಿರಂತರವಾಗಿರಲಿದೆ ಎಂದು ಹೇಳಿದರು.
ಇದೇ ವೇಳೆ ಮುಂಬರುವ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ರಾಜೀನಾಮೆಯಿಂದ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ವೀರಶೈವ-ಲಿಂಗಾಯತ ಸಮುದಾಯದ ನಾಯಕರನ್ನು ನೇಮಿಸಬೇಕು. ಹಿಂದಿನ ಚುನಾವಣೆಯಲ್ಲಿ ಸಮುದಾಯವು ಪಕ್ಷವನ್ನು ಬೆಂಬಲಿಸಿದೆ. ಇದರಿಂದಲೇ ಇಷ್ಟೊಂದು ಸಂಖ್ಯೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ. ಪಕ್ಷ ಸಂಘಟನೆ ಮತ್ತು ಬೆಳವಣಿಗೆ ದೃಷ್ಟಿಯಿಂದ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.