Advertisement

ಟಿಪ್ಪು ಜಯಂತಿ: ಜಮೀರ್‌ ನಿಯೋಗದಿಂದ ಸಿದ್ದರಾಮಯ್ಯಗೆ ಭರ್ಜರಿ ಸನ್ಮಾನ

12:36 PM Nov 10, 2018 | |

ಬೆಂಗಳೂರು: ಟಿಪ್ಪು ಜಯಂತಿಯಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಭರ್ಜರಿ ಸನ್ಮಾನ ಮಾಡಿದ್ದಾರೆ. 

Advertisement

ಜಮೀರ್‌ ನೇತೃತ್ವದ ಮುಸ್ಲಿಂ ಧರ್ಮ ಗುರುಗಳ ನಿಯೋಗ ಸಿದ್ದರಾಮಯ್ಯ ಅವರಿಗೆ ಟಿಪ್ಪುಟೋಪಿ, ಬೆಳ್ಳಿಯ ಖಡ್ಗ , ಹಾರ ಹಾಕಿ  ಸನ್ಮಾನಿಸಿ ಗೌರವಿಸಿದೆ. 

ಈ ವೇಳೆ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಆಚರಣೆಯನ್ನು  ಬಲವಾಗಿ ಸಮರ್ಥಿಸಿಕೊಂಡು ಬಿಜೆಪಿ ರಾಜಕೀಯ ಉದ್ದೇಶಕ್ಕಾಗಿ ವಿರೋಧ ಮಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಮಾಡಿದ್ದರು. ಟಿಪ್ಪು ಕ್ರುಸೇಡರ್‌ ಪುಸ್ತಕಕ್ಕೆ ಜಗದೀಶ್‌ ಶೆಟ್ಟರ್‌ ಅವರು ಮುನ್ನುಡಿ ಬರೆದಿದ್ದರು , ಆವಾಗ ಟಿಪ್ಪು ಮತಾಂಧ ಆಗಿರಲಿಲ್ಲವೆ ಎಂದು ಪ್ರಶ್ನಿಸಿದರು. 

ಇದು ನಾಲ್ಕನೇ ವರ್ಷ ಟಿಪ್ಪು ಜಯಂತಿ ಆಚರಣೆ , ನಾವು ಅಧಿಕಾರದಲ್ಲಿದ್ದಾಗ ಮೂರು ಬಾರಿ ಮಾಡಿದ್ದೆವು. ಕೇವಲ ಟಿಪ್ಪು ಜಯಂತಿ ಮಾತ್ರವಲ್ಲ, ಜೊತೆಗೆ ಕಿತ್ತೂರು ಚೆನ್ನಮ್ಮ, ಹೆಮರೆಡ್ಡಿ ಮಲ್ಲಮ್ಮ ಸೇರಿದಂತೆ 13 ಜಯಂತಿಗಳನ್ನು ಮಾಡಿದ್ದೇವೆ ಎಂದರು. 

ಟ್ವೀಟ್‌ನಲ್ಲಿ ಬಿಜೆಪಿಗೆ ಪ್ರಶ್ನೆಗಳ ಮಳೆ !

Advertisement


1. ಟಿಪ್ಪು ವಿರೋಧಿಗಳಿಗೆ ನಿಜವಾದ ಟಿಪ್ಪು ಸುಲ್ತಾನ್ ಕಾಣಬೇಕಾದರೆ ಕೋಮುವಾದದ ಕನ್ನಡಕ ಕಳಚಿಟ್ಟು ನೋಡಬೇಕಾಗುತ್ತದೆ. ಇದಕ್ಕಾಗಿ ಬಿಜೆಪಿ ಸರ್ಕಾರವೇ ಪ್ರಕಟಿಸಿದ ಪುಸ್ತಕ ಓದಬೇಕಾಗುತ್ತದೆ.

2.ಟಿಪ್ಪು ಯುದ್ಧದ ವೇಳೆ ಜನರನ್ನು ಸಾಯಿಸಿದ್ದ ಲೂಟಿ ಮಾಡಿದ್ದ  ಎನ್ನುವುದು ವಿರೋಧಿಗಳ ಆರೋಪ. ಟಿಪ್ಪು ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ, ಟಿಪ್ಪು  ಪ್ರಜಾತಾಂತ್ರಿಕವಾಗಿ ಆಯ್ಕೆಯಾದವನ್ನಲ್ಲ. ಆತ ಒಬ್ಬ ರಾಜ. ಆ ಕಾಲದಲ್ಲಿ ಯುದ್ದಧರ್ಮಕ್ಕೆ ತಕ್ಕಂತೆ ನಡೆದುಕೊಂಡಿದ್ದ.

3.ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ಒಂದು ಸಂಸ್ಥಾನದ ರಾಜ ಎನ್ನುವ ವಾದ ಹುಟ್ಟಿಕೊಂಡಿದೆ.
ಇಂತಹ ಮೊಂಡುವಾದದವರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ,ವೀರ ಸಿಂಧೂರ ಲಕ್ಷ್ಮಣ,ರಾಣಿ ಅಬ್ಬಕ್ಕದೇವಿ ಸೇರಿದಂತೆ ಬ್ರಿಟಿಷರ ವಿರುದ್ದ ಹೋರಾಡಿ ಪ್ರಾಣಾರ್ಪಣೆ ಮಾಡಿದವರನ್ನು ಯಾವ ಗುಂಪಿಗೆ ಸೇರಿಸುತ್ತಾರೆ?

4.ರಾಜ್ಯ ಸರ್ಕಾರ ಆಚರಿಸುತ್ತಿರುವುದು ಯಾವುದೇ ಒಂದು ಧರ್ಮಕ್ಕೆ ಸೇರಿದ ನಾಯಕನ ಜಯಂತಿಯಲ್ಲ. ಒಬ್ಬ ದೇಶಪ್ರೇಮಿ, ಜಾತ್ಯತೀತ, ಮತ್ತು ಜನಪರ ಅರಸನಾಗಿದ್ದ ಟಿಪ್ಪುವಿನ ಜಯಂತಿ ಆಚರಿಸುತ್ತಿದ್ದೇವೆ. ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಟಿಪ್ಪುವಿಗೆ ಮಾತ್ರವಲ್ಲ ಈ ನಾಡಿಗೆ ಬಗೆವ ದ್ರೋಹ.

5.ಟಿಪ್ಪು ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ವೈರಿಗಳಾಗಿದ್ದ ಬ್ರಿಟಿಷ್ ಇತಿಹಾಸಕಾರರಿಂದಲ್ಲ. ಟಿಪ್ಪು ಬಗ್ಗೆ ಮೈಸೂರು ಭಾಗದಲ್ಲಿ  ಲಾವಣಿಗಳಿವೆ. ಅವುಗಳಲ್ಲಿ ಟಿಪ್ಪುವಿನ ದೇಶಪ್ರೇಮ,ಜಾತ್ಯತೀತ ಧೋರಣೆ,ಅಭಿವೃದ್ದಿಯ ಕಲ್ಪನೆಗಳ ಮಾಹಿತಿ ಇದೆ. ಈ ಲಾವಣಿ, ಪದ,ಹಾಡುಗಳೇನಿಜವಾದ ಇತಿಹಾಸ.

6.ಮಹಾಪುರುಷ ಮಹಿಳೆಯರ ಜಯಂತಿ ಆಚರಣೆಯ ಸಂಪ್ರದಾಯವನ್ನು ಹಿಂದಿನ ನಮ್ಮ ಸರ್ಕಾರ ಹುಟ್ಟುಹಾಕಿದ್ದಲ್ಲ, ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಜಯಂತಿ ಆಚರಣೆ ಪಟ್ಟಿಗೆ ಇನ್ನಷ್ಟು ಹೆಸರುಗಳನ್ನು ಸೇರಿಸುತ್ತಾ ಬಂದಿವೆ.ಆಗ ಕಾಣಿಸಿಕೊಳ್ಳದ ಪ್ರತಿರೋಧ ಟಿಪ್ಪು ಆಚರಣೆ ಬಗ್ಗೆ ಮಾತ್ರ ಯಾಕೆ?

7.ಸರ್ಕಾರವೇ ಜಯಂತಿಗಳನ್ನು ಆಚರಿಸುವುದಕ್ಕೆ ಕಾರಣವಿದೆ. ಇದನ್ನು ಸಾರ್ವಜನಿಕರಿಗೆ ಬಿಟ್ಟರೆ ತಮ್ಮ ಜಾತಿ ಧರ್ಮಗಳಿಗೆ ಸೇರಿರುವ ಮಹಾಪುರುಷ ಮಹಿಳೆಯರ ಜಯಂತಿ ಆಚರಣೆಯನ್ನಷ್ಟೇ ಮಾಡಿ ಅವರನ್ನು ತಮ್ಮ ಜಾತಿ ಧರ್ಮಗಳಿಗೆ ಸೀಮಿತಗೊಳಿಸುತ್ತಾರೆ. ಇದು ಮಹಾನ್ ವ್ಯಕ್ತಿಗಳಿಗೆ ಅಗೌರವವೂ ಹೌದು.

8.ಟಿಪ್ಪು ಜಯಂತಿ ಆಚರಣೆ ಬಗ್ಗೆ ಬಿಜೆಪಿ ಕರ್ನಾಟಕ ನಿಲುವು ಆತ್ಮವಂಚನೆಯಿಂದ ಕೂಡಿದ್ದಾಗಿದೆ. ತಾವು ಅಧಿಕಾರದಲ್ಲಿದ್ದಾಗ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ, ಟಿಪ್ಪುವನ್ನು ಹಾಡಿ ಹೊಗಳಿ, ಪುಸ್ತಕ ಬರೆಸಿ ಈಗ ವಿರೋಧಿಸುತ್ತಿರುವುದು ಸ್ವಾರ್ಥರಾಜಕಾರಣವಲ್ಲದೆ ಮತ್ತೇನು?

Advertisement

Udayavani is now on Telegram. Click here to join our channel and stay updated with the latest news.

Next