Advertisement

ಮಕ್ಕಳ ಸಮಸ್ಯೆ ಆಲಿಸಿದ ಸಚಿವರು

05:20 PM Feb 26, 2020 | Suhan S |

ಶ್ರೀರಂಗಪಟ್ಟಣ: ಪಟ್ಟಣದ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿರುವ ಅವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿಗಳ ಪೋಷಕರು ವಾಟ್ಸ್‌ ಆಪ್‌ನಲ್ಲಿ ಸಮಸ್ಯೆಗಳ ಕುರಿತು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮಂಗಳವಾರ ಭೇಟಿ ನೀಡಿ ಖುದ್ದು ಪರಿಶೀಲಿಸಿದರು.

Advertisement

ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೋಷಕರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಗ್ಗೆ, ಅಲ್ಲಿ ಓದುತ್ತಿರುವ ತಮ್ಮ ಮಕ್ಕಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ವಾಟ್ಸ್‌ ಆಪ್‌ ಮೂಲಕ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ನಂಜನಗೂಡಿಗೆ ಶೈಕ್ಷಣಿಕ ಸಮ್ಮೇಳನಕ್ಕೆ ಹೋಗುವ ಮಾರ್ಗ ಮಧ್ಯೆ ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್‌ ಕಟ್ಟಡದಲ್ಲಿರುವ ಮೊರಾರ್ಜಿ ವಸತಿ ಶಾಲೆಗೆ ಖುದ್ದು ಭೇಟಿ ನೀಡಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಶಾಲೆಗೆ ಭೇಟಿ ನೀಡಿದ ಸಚಿವರು, ಶಾಲೆಯ ಅವ್ಯವಸ್ಥೆ ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶಾಲೆಯ ಪ್ರಾಂಶುಪಾಲರು, ಮುಖ್ಯಶಿಕ್ಷಕರು ಸೇರಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಬಾಡಿಗೆ ಕಟ್ಟಡದ ಸಮಸ್ಯೆಯನ್ನು ಕೆಲ ಅಧಿಕಾರಿಗಳು ಸಚಿವರ ಗಮನಕ್ಕೆ ತಂದು, ಶಾಲೆಗಾಗಿ ಈಗಾಗಲೇ ಸ್ಥಳ ಗೊತ್ತುಪಡಿಸಲಾಗಿದೆ. ಹೊಸ ಕಟ್ಟಡ ನಿರ್ಮಿಸಿಕೊಡುವುದರ ಜೊತೆಗೆ ಅಗತ್ಯ ಮೂಲ ಸೌಕರ್ಯ ವ್ಯವಸ್ಥೆ ಒದಗಿಸುವಂತೆ ಮನವಿ ಮಾಡಿದರು. ಬಳಿಕ ಸಚಿವ ಸುರೇಶ್‌ಕುಮಾರ್‌ ಮಾತನಾಡಿ, ವಾಸ್ತವವಾಗಿ ಶಾಲೆಯಲ್ಲಿ ಮಕ್ಕಳಿಗೆ ಅತ್ಯಗತ್ಯವಾಗಿ ಬೇಕಾದ ಕುಡಿಯುವ ನೀರಿಲ್ಲ, ಇಲ್ಲಿ ಮಕ್ಕಳು ಮಲಗಲು ಸರಿಯಾದ ಕೊಠಡಿ ಮತ್ತು ಸ್ನಾನಕ್ಕೆ ಬಿಸಿ ನೀರಿನ ಕೊರತೆ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭವಾಗಿ ಹದಿನೈದು ವರ್ಷ ಕಳೆದರೂ ಸ್ವಂತ ಕಟ್ಟಡ ಇಲ್ಲದೇ ಇರುವುದು ವಿಪರ್ಯಾಸ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ನೂತನ ಕಟ್ಟಡದೊಂದಿಗೆ ಯೋಗ್ಯ ವಾತಾವರಣ ಸೃಷ್ಟಿಲು ಸರ್ಕಾರದಿಂದ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಡಿಡಿಪಿಐ ರಘುನಂದನ್‌, ಉಪ ವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್‌ ರೂಪಾ, ಬಿಇಒ ರುಕ್ಸಾನ ನಾಜನೀನ್‌, ಜಿಲ್ಲಾ ಮಟ್ಟದ ವಸತಿ ಶಾಲೆಗಳ ಅಭಿವೃದ್ಧಿ ಅಧಿಕಾರಿಗಳು ಇತರರಿದ್ದರು.

ಜಿಲ್ಲೆಯಲ್ಲಿ ವಸತಿ ಶಾಲೆ ಸೇರಿದಂತೆ ಇತರೆ ಸರ್ಕಾರಿ ಶಾಲೆಗಳಲ್ಲೂ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಕಂಡು ಬಂದಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಡುವಂತೆ ಸೂಚಿಸಿದ್ದೇನೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಲು ಪ್ರಯತ್ನಿಸುತ್ತೇನೆ.  –ಸುರೇಶ್‌ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next