ಕಾರವಾರ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರು ನೀಡಿದ್ದ ಖಾಸಗಿ ವಿಡಿಯೋವೊಂದನ್ನು ಓರ್ವ ಸಚಿವ ಮತ್ತು ಓರ್ವ ಎಂಎಲ್ ಸಿ ದೆಹಲಿ ಮಟ್ಟದ ನಾಯಕರಿಗೆ ನೀಡಿದ್ದಾರೆ. ಆ ವಿಡಿಯೋ ಬಳಸಿ ಮುಖ್ಯಮಂತ್ರಿಗಳಿಗೂ ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಯವುದೋ ವಿಡಿಯೋವೊಂದನ್ನು ಸಂತೋಷ್ ಅವರು ಸಚಿವ ಮತ್ತು ಎಂಎಲ್ ಸಿ ಗೆ ಕೊಟ್ಟಿದ್ದರು ಎಂದು ನನಗೆ ಮಾಹಿತಿ ಬಂದಿತ್ತು. ಅವರು ಆ ವಿಡಿಯೋವನ್ನು ಇತ್ತೀಚೆಗೆ ದೆಹಲಿಯ ರಾಷ್ಟ್ರೀಯ ನಾಯಕರಿಗೆ ನೀಡಿದ್ದಾರೆ. ಈ ವಿಚಾರವಾಗಿ ಸಂತೋಷ್ ಬೇಸರಗೊಂಡಿದ್ದರು. ಇದು ಎಷ್ಟು ಸತ್ಯವೆಂದು ನನಗೆ ಗೊತ್ತಿಲ್ಲ, ತನಿಖೆಯಾಗಲಿ ಎಂದು ಹೇಳಿದರು.
ಇದನ್ನೂ ಓದಿ:ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದ ಸಮಗ್ರ ತನಿಖೆ: ಬೊಮ್ಮಾಯಿ
ಸಂತೋಷ್ ನೀಡಿದ್ದ ಆ ಖಾಸಗಿ ವಿಡಿಯೋ ಬಳಸಿ ಸಚಿವ ಮತ್ತು ಎಂಎಲ್ ಸಿ ಮುಖ್ಯಮಂತ್ರಿ ಸೇರಿದಂತೆ ಹಲವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದೂ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಶುಕ್ರವಾರ ರಾತ್ರಿ ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆ ಯತ್ನ ಮಾಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಸದ್ಯ ಸಂತೋಷ್ ಚೇತರಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.