ಶೃಂಗೇರಿ: ದತ್ತ ಪೀಠ ಹಿಂದೂಗಳದ್ದಾಗಬೇಕು. ಈ ನಿಟ್ಟಿನಲ್ಲಿ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಇಂಧನ ಸಚಿವ ವಿ.ಸುನೀಲ್‌ಕುಮಾರ್ ಹೇಳಿದರು.
ಶ್ರೀಶಾರದಾ ಪೀಠಕ್ಕೆ ಗುರುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ದತ್ತ ಪೀಠದ ಹೋರಾಟವನ್ನು ಅಂದಿನಿಂದ ಇಂದಿನವರೆಗೂ ನಡೆಸಿಕೊಂಡು ಬರಲಾಗಿದೆ. ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕಾನೂನಿನನ್ವಯ ಕೈಗೊಳ್ಳಬೇಕಾದ ಎಲ್ಲ ಕ್ರಮವನ್ನು ಸರಕಾರ ಕೈಗೊಂಡಿದೆ. ದತ್ತ ಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಹಾಗೂ ಪರಂಪರೆಯಂತೆ ಪೂಜಾದಿಗಳು ಶೀಘ್ರದಲ್ಲೇ ನಡೆಯುವಂತೆ ಮಾಡಲಾಗುತ್ತದೆ ಎಂದರು.
ಶೃಂಗೇರಿ 110 ಕೆವಿ ವಿದ್ಯುತ್ ಸ್ಥಾವರದ ಬಗ್ಗೆ ಮಾತನಾಡಿದ ಸಚಿವರು, ಈಗಾಗಲೇ ಸರಕಾರದ ಅನುಮೋದನೆ ದೊರಕಿದ್ದು, ಸ್ಥಳದ ಮಂಜೂರಾತಿ ಪ್ರಕ್ರಿಯೆ ಹಾಗೂ ಸ್ಥಳದ ಮಣ್ಣು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಮೂರು ತಿಂಗಳಿನಲ್ಲಿ ಸ್ಥಳದ ಸಮಸ್ಯೆ ಪರಿಹರಿಸಿ, ಸ್ಥಾವರ ಆರಂಭಕ್ಕೆ ಚಾಲನೆ ನೀಡಲಾಗುತ್ತದೆ. ರಾಜ್ಯದಲ್ಲಿರುವ ವಿದ್ಯುತ್ ಪರಿವರ್ತಕಗಳ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಇದಕ್ಕೂ ಮುನ್ನ ಅವರು ಶ್ರೀಶಾರದಾಂಬಾ ದೇಗುಲಕ್ಕೆ ಆಗಮಿಸಿ ಶ್ರೀತೋರಣಗಣಪತಿ, ಶ್ರೀ ಶಂಕರಾಚಾರ್ಯ, ಶ್ರೀ ಶಕ್ತಿಗಣಪತಿ ಹಾಗೂ ಶ್ರೀ ಶಾರದಾಂಬೆಗೆ ಪೂಜೆ ಸಲ್ಲಿಸಿದರು. ನಂತರ ಗುರುಭವನಕ್ಕೆ ತೆರಳಿ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಅನಂತರ ಮಳೆ ದೇವರೆಂದು ಹೆಸರು ಪಡೆದಿರುವ ಕಿಗ್ಗಾದ ಶ್ರೀ ಶಾಂತ ಸಮೇತ ಋಷ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಬಿಜೆಪಿ ಅಧ್ಯಕ್ಷ ಟಿ.ಎಸ್.ಉಮೇಶ್, ಟಿ.ಕೆ. ಪರಾಶರ, ನೂತನಕುಮಾರ್, ಹರೀಶ್ ಶೆಟ್ಟಿ, ವೇಣುಗೋಪಾಲ್, ನಾಗರಾಜ್, ಅರುಣ ಇದ್ದರು.