ರಾಯಚೂರು: ಮರಾಠ ಅಭಿವೃದ್ದಿ ಪ್ರಾಧಿಕಾರ ಸ್ಥಾಪಿಸಿದ್ದು ಮರಾಠಿಗರ ಅಭಿವೃದ್ದಿಗೆ ಅಲ್ಲ. ಗಡಿನಾಡಲ್ಲಿ ವಾಸಿಸುವ ರಾಜ್ಯದ ಮರಾಠಿಗರಿಗಾಗಿ ಎಂದು ವಸತಿ ಸಚಿವ ವಿ. ಸೋಮಣ್ಣ ಸಮರ್ಥನೆ ಮಾಡಿಕೊಂಡರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಾಠಿಗರು ವಾಸಿಸುವ ಗಡಿನಾಡಿನಲ್ಲಿ ಕನ್ನಡ ಶಾಲೆಗಳ ಅಭಿವೃದ್ದಿಗೆ 50 ಕೋಟಿ ಮೀಸಲಿಡಲಾಗಿದೆ. ಗಡಿಭಾಗದಲ್ಲಿರುವ ಮರಾಠಿಗರನ್ನು ಸಹ ಕನ್ನಡಿಗರ ಜತೆಗೆ ಮುಖ್ಯವಾಹಿನಿಗೆ ತರಲು ಸರ್ಕಾರ ಯತ್ನಿಸುತ್ತಿದೆ ಎಂದರು.
ಸಂಪುಟ ಪುನರಚನೆ, ವಿಸ್ತರಣೆ ಕುರಿತು ಮಾತಾನಾಡಿದ ಅವರು, ಸಂಪುಟ ಪುನರಚನೆ ಅಥವಾ ವಿಸ್ತರಣೆಯ ವಿಷಯ ಸಿಎಂ ಹಾಗೂ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಅದೆನ್ನೆಲ್ಲಾ ಅವರು ನೋಡಿಕೊಳ್ಳುತ್ತಾರೆ.ನಮ್ಮದು ಶಿಸ್ತಿನ ಪಕ್ಷ ಎಂದರು.
ಡಿಜೆ ಹಳ್ಳಿ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಬಂಧನದ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನ ಪ್ರಥಮ ಪ್ರಜೆಯಾಗಿದ್ದ ಸಂಪತ್ ರಾಜ್ ಕಣ್ಮರೆಯಾಗಿದ್ದು ನೋವಿನ ಸಂಗತಿ. ಕಾನೂನುಗಿಂತ ಯಾರು ದೊಡ್ಡವರಲ್ಲ. ಸಂಪತ್ ರಾಜ್ ಮಾಡಿದ್ದು ತಪ್ಪೋ ಸರಿಯೋ ಎನ್ನುವುದು ತನಿಖೆಯಿಂದ ಗೊತ್ತಾಗುತ್ತಿತ್ತು. ಆದರೆ, ಅವರು ಕಾನೂನಿಗೆ ಅಗೌರವ ತೋರಿ ಕಣ್ಮರೆಯಾಗಿರುವುದು ನೋವು ತರಿಸಿದೆ. ಅವರ ಬಂಧನ ಬೆಂಗಳೂರು ಪೊಲೀಸರ ದಕ್ಷತೆಗೆ ಹಿಡಿದ ಕೈಗನ್ನಡಿ ಎಂದರು.
ವಸತಿ ಸೌಲಭ್ಯದ ಕುರಿತು ಮಾತಾನಾಡಿದ ಅವರು, 2022 ಕ್ಕೆ ರಾಜ್ಯದಲ್ಲಿ ಪ್ರತಿಯೊಬ್ಬರಿಗು ಸೂರು ಕಲ್ಪಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವಾಗಿದೆ. ವಸತಿ ಸೌಲಭ್ಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಈಗಾಗಲೇ 5 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. 1.17 ಲಕ್ಷ ಮನೆಗಳ ನಿರ್ಮಾಣ ಕೆಲಸ ಆರಂಭವಾಗಿದೆ. 1,910 ಕೋಟಿ ರೂ. ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ನಗರ ಮತ್ತು ಪಟ್ಟಣ ಪ್ರದೇಶದಲ್ಲಿ 43, 000 ಮನೆ ನಿರ್ಮಾಣಕ್ಕೆ ಆದೇಶಿಸಲಾಗಿದೆ. ಈಗಾಗಲೇ ನಗರ ಪ್ರದೇಶದಲ್ಲಿ 2,300 ಮನೆಗಳ ನಿರ್ಮಾಣ ಕೆಲಸ ಶುರುವಾಗಿದೆ. ಬೆಂಗಳೂರಲ್ಲಿ 1 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ ಎಂದರು.