Advertisement

ಶಿಕ್ಷಕರ ವರ್ಗಾವಣೆ ಕರಡು ಸಿದ್ಧ ಸಚಿವ ತನ್ವೀರ್‌ ಸೇಠ್

06:50 AM Sep 05, 2017 | |

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರ ವರ್ಗಾವಣೆಯ ಕರಡು ಸಿದ್ಧವಾಗಿದ್ದು, ಸೆ.5ರಂದು ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಹೇಳಿದರು.

Advertisement

ಸೋಮವಾರ ಶಿಕ್ಷಕರ ಸದನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದಂಪತಿ ಶಿಕ್ಷಕರಲ್ಲಿ ಒಬ್ಬರು ಸರ್ಕಾರಿ ಶಿಕ್ಷಕರಾಗಿದ್ದರೆ, ಕನಿಷ್ಠ 5 ವರ್ಷ ಸೇವೆ ಸಲ್ಲಿಸಬೇಕೆಂಬ ನಿಯಮದಲ್ಲಿ ವಿನಾಯ್ತಿ ನೀಡಲಿದ್ದೇವೆ. ಹಾಗೆಯೇ ದಂಪತಿ ಶಿಕ್ಷಕರಲ್ಲಿ ಒಬ್ಬರು ಖಾಸಗಿ ಉದ್ಯೋಗಿದ್ದರೆ, ವರ್ಗಾವಣೆಗೆ ಅರ್ಜಿ ಸಲ್ಲಿಸಲು ಕನಿಷ್ಠ 5 ವರ್ಷದ ಸೇವಾವಧಿ ಹೊಂದಿರಬೇಕು. ಜಿಲ್ಲೆಯ ಒಳಗೆ ಅಥವಾ ಸ್ವಂತ ಜಿಲ್ಲೆಗೆ ಶಿಕ್ಷಕರನ್ನು ವರ್ಗಾವಣೆ ಮಾಡಲು ಹೆಚ್ಚಿನ ಆದ್ಯತೆ ನೀಡಲಿದ್ದೇವೆ ಎಂದರು.

ಶಿಕ್ಷಕರ ವರ್ಗಾವಣೆ ನೀತಿಯ ಕರಡು ಸಂಪೂರ್ಣ ಸಿದ್ಧವಾಗಿದ್ದು, ಅದರಂತೆ ಶಿಕ್ಷಕರ ವರ್ಗಾವಣೆಗೆ ನೂತನ ಮಾನದಂಡಗಳನ್ನು ನಿಗದಿ ಪಡಿಸಲಾಗಿದೆ. ಕರಡು ನೀತಿ ಪ್ರಕಟವಾದ ನಂತರ ಶಿಕ್ಷಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. ಆಕ್ಷೇಪಣೆ ಸ್ವೀಕರಿಸಿ, ಪರಿಶೀಲಿಸಿದ ನಂತರ ನೀತಿಯನ್ನು ಜಾರಿ ಮಾಡಿ ಶಿಕ್ಷಕರ ವರ್ಗಾವಣೆ ನಡೆಸಲಿದ್ದೇವೆ ಎಂಬ ಮಾಹಿತಿ ನೀಡಿದರು.

ಪದೋನ್ನತಿ:
ಮುಖ್ಯ ಶಿಕ್ಷಕ ಹುದ್ದೆಯಿಂದ ಬಿಇಒ ಹುದ್ದೆಗೆ, ಬಿಇಒಯಿಂದ ಉಪನಿರ್ದೇಶಕರ ಹುದ್ದೆಗೆ ಹಾಗೂ ಉಪನಿರ್ದೇಶಕರ ಹುದ್ದೆಯಿಂದ ಜಂಟಿ ನಿರ್ದೇಶಕರ ಹುದ್ದೆಗೆ ಪದನ್ನೋತಿ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಪಿಯು ಇಲಾಖೆಯಲ್ಲಿ ಉಪನ್ಯಾಸಕರ ಹುದ್ದೆಯಿಂದ ಪ್ರಾಂಶುಪಾಲರ ಹುದ್ದೆಗೆ, ಪ್ರಾಂಶುಪಾಲರ ಹುದ್ದೆಯಿಂದ ಪಿಯು ಉಪನಿರ್ದೇಶಕರ ಹುದ್ದೆಗೆ, ಉಪನಿರ್ದೇಶಕರ ಹುದ್ದೆಯಿಂದ ಜಂಟಿ ನಿರ್ದೇಶಕರ ಹುದ್ದೆಗೆ ಪದನ್ನೋತಿ ನೀಡಲಾಗುವುದು. ವೇತನ ಬಡ್ತಿ ಹಾಗೂ ಕಾಲ್ಪನಿಕ ವೇತನ ಸಂಬಂಧ ಸರ್ಕಾರಿ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದರು.

ಅನುದಾನ ತಾರತಮ್ಯ ಸಲ್ಲದು:
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ 2017 -18 ನೇ ಸಾಲಿನಲ್ಲಿ ರಾಜ್ಯಕ್ಕೆ 1,341 ಕೋಟಿ ರೂ. ಕ್ರಿಯಾ ಯೋಜನೆ ಸಿದ್ದಪಡಿಸಿತ್ತಾದರೂ, ಬಂದಿರುವುದು ಕೇವಲ 476 ಕೋಟಿ ರೂ. ಮಾತ್ರ. ರಾಜ್ಯ ಶಿಕ್ಷಣ ಇಲಾಖೆಗೆ 106 ಕೋಟಿ ರೂ. ಕಡಿಮೆ ಅನುದಾನ ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರ ಶಿಕ್ಷಣದಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸುವುದು ಸರಿಲ್ಲ. ಸರ್ಕಾರಿ ಶಾಲಾ ದುರಸ್ತಿಗಾಗಿ ಹೆಚ್ಚುವರಿ ಅನುದಾನ ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗುತ್ತದೆ ಎಂದರು.

Advertisement

ಸರ್ಕಾರಿ ಶಾಲೆ ಮುಚ್ಚಲ್ಲ
ಸರ್ಕಾರಿ ಶಾಲೆಗಳನ್ನು ಮುಚ್ಚುವ ಯಾವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ. ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಇದ್ದರೂ, ಆತನಿಗೆ ಪಾಠ ಮಾಡಲು ಶಿಕ್ಷಕರನ್ನು ನೇಮಿಸಲಾಗುತ್ತದೆ. ಶಾಲೆ ಮುಚ್ಚುವ ನಿರ್ಧಾರ ಕೈಗೊಂಡಿಲ್ಲ ಮತ್ತು ಈ ಬಗ್ಗೆ ಶ್ವೇತ ಪತ್ರ ಹೊರಡಿಸಲಾಗಿದೆ ಎಂದು ಸಚಿವ ತನ್ವೀರ್‌ ಸೇಠ್ ತಿಳಿಸಿದರು.

ಶಾಲಾ ಮಕ್ಕಳಿಗೆ ಪ್ಯಾಕೇಟ್‌ ಹಾಲು ನೀಡುವ ಯೋಜನೆಯನ್ನು ನ.1ರಿಂದ ಮೈಸೂರು ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಆರಂಭಿಸಲಾಗುತ್ತದೆ. ಇದರ ಸಾಧಕ ಬಾಧಕ ತಿಳಿದು, ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತದೆ.
-ತನ್ವೀರ್‌ ಸೇಠ್ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next