Advertisement

ತ್ರಿವಳಿ ತಲಾಖ್‌ ಪರ ಸಚಿವ ತನ್ವೀರ್‌ ಸೇಠ್ ಹೇಳಿಕೆಗೆ ಖಂಡನೆ

06:35 AM Jan 02, 2018 | Team Udayavani |

ಬೆಂಗಳೂರು: ತ್ರಿವಳಿ ತಲಾಖ್‌ ನಿಷೇಧಿಸುವ ಕೇಂದ್ರ ಸರ್ಕಾರದ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿರುವ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಹೇಳಿಕೆ ಖಂಡಿಸಿರುವ ರಾಜ್ಯ ಬಿಜೆಪಿ, ಈ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡುವಂತೆ ಆಗ್ರಹಿಸಿದೆ. ಜತೆಗೆ ತ್ರಿವಳಿ ತಲಾಖ್‌ ವಿಚಾರದಲ್ಲಿ ಕಾಂಗ್ರೆಸ್‌ ರಾಷ್ಟ್ರಮಟ್ಟದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಬೇಕು. ಲೋಕಸಭೆಯಲ್ಲಿ ಒಪ್ಪಿಗೆಯಾದ ತ್ರಿವಳಿ ತಲಾಖ್‌ಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆಯಲು ಸಹಕಾರ ನೀಡುತ್ತದೆಯೇ ಎಂಬುದನ್ನು ಹೇಳಬೇಕು ಎಂದು ಒತ್ತಾಯಿಸಿದೆ.

Advertisement

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ವಕ್ತಾರರೂ ಆಗಿರುವ ಶಾಸಕ ಎಸ್‌.ಸುರೇಶ್‌ಕುಮಾರ್‌, ಸುಪ್ರೀಂ ಕೋರ್ಟ್‌ ಸೂಚನೆಯಂತೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್‌ಗೆ ಇತಿಶ್ರೀ ಹಾಡಲು ಲೋಕಸಭೆಯಲ್ಲಿ ವಿಧೇಯಕ ಮಂಡಿಸಿದಾಗ ಆರಂಭದಲ್ಲಿ ಕಾಂಗ್ರೆಸ್‌ ಈ ವಿಚಾರವನ್ನು ಸಂಸದೀಯ ಸ್ಥಾಯಿ ಸಮಿತಿಗೆ ವಹಿಸಬೇಕು ಎಂದು ಹೇಳಿದರೂ ನಂತರ ಬೆಂಬಲಿಸಿ ವಿಧೇಯಕ ಅಂಗೀಕರಿಸಲು ಸಹಕರಿಸಿದೆ. ಆದರೆ, ಅದಾದ ಬಳಿಕ ಸಚಿವ ತನ್ವೀರ್‌ ಸೇಠ್ ಯಾವುದೇ ಕಾರಣಕ್ಕೂ ತ್ರಿವಳಿ ತಲಾಖ್‌ ನಿಷೇಧ ಒಪ್ಪಲು ಸಾಧ್ಯವಿಲ್ಲ. ಮಸೂದೆಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದು ಅಕ್ಷಮ್ಯ ಎಂದರು.

ತಮ್ಮ ಸಂಪುಟ ಸದಸ್ಯರ ಈ ಹೇಳಿಕೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಣೆ ನೀಡಬೇಕು. ತನ್ವೀರ್‌ ಸೇಠ್ ಅವರ ಹೇಳಿಕೆಯನ್ನು ಒಪ್ಪುತ್ತಾರೋ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ವಿಚಾರದಲ್ಲಿ ರಾಜಕಾರಣ ಬಿಟ್ಟು ಮಹಿಳಾ ಸಬಲೀಕರಣ, ಸಮಾನತೆ ಮತ್ತು ಗೌರವದ ದೃಷ್ಟಿಯಿಂದ ನೋಡಬೇಕು. ಅಲ್ಲದೆ, ಕಾಂಗ್ರೆಸ್‌ ಕೂಡ ಈ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಮುಸ್ಲಿಂ ಮಹಿಳೆಯರು ಪುರುಷ ಜತೆಗಾರರಿಲ್ಲದೆ ಹಜ್‌ ಯಾತ್ರೆ ಕೈಗೊಳ್ಳಲು ಇದೇ ಮೊದಲ ಬಾರಿಗೆ ಅವಕಾಶ ನೀಡುವ ಮಹತ್ವದ ತೀರ್ಮಾನವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದು, ಇದು ಸ್ವಾಗತಾರ್ಹ. ಮಹಿಳಾ ಸಶಕ್ತೀಕರಣ ಕುರಿತು ಬಿಜೆಪಿಗೆ ಇರುವ ಬದ್ಧತೆಯನ್ನು ಈ ನಿರ್ಧಾರ ಸ್ಪಷ್ಟಪಡಿಸುತ್ತಿದ್ದು, ಇದರ ಬಗ್ಗೆಯೂ ಕಾಂಗ್ರೆಸ್‌ ತನ್ನ ನಿಲುವು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next