Advertisement

ಚಂಪಾ ಟೀಕೆಗೆ ಸಚಿವ ತನ್ವೀರ್‌ ತಿರುಗೇಟು

11:18 AM Nov 26, 2017 | Team Udayavani |

ಮೈಸೂರು: ನನ್ನ ಕನ್ನಡಾಭಿಮಾನ, ಕನ್ನಡದ ಮೇಲಿನ ಪ್ರೀತಿ, ಕನ್ನಡದ ಬಗೆಗೆ ನನಗಿರುವ ಬದ್ಧತೆಯನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಆದರೆ, ಸಮ್ಮೇಳನಾಧ್ಯಕ್ಷ ಪೊ›. ಚಂದ್ರಶೇಖರ ಪಾಟೀಲ ಅವರು ವೈಯಕ್ತಿಕ ಟೀಕೆಗೆ ಈ ವೇದಿಕೆಯನ್ನು ಬಳಸಿಕೊಂಡಿದ್ದು ಸರಿಯಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ಸೇಠ್ ತಿರುಗೇಟು ನೀಡಿದ್ದಾರೆ.

Advertisement

ಪ್ರೊ. ಚಂಪಾ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಹಾಗೆಯೇ ಸಚಿವನಾಗಿ ನನಗೂ ಒಂದಷ್ಟು ಸಾರ್ವಜನಿಕ ಜವಾಬ್ದಾರಿಗಳಿವೆ. ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ನನ್ನ ಇಲಾಖೆ ಬಗ್ಗೆ ನಡೆದ ಚರ್ಚೆಗೆ ಉತ್ತರ ನೀಡಬೇಕಾದ ಜವಾಬ್ದಾರಿ ನನ್ನ ಮೇಲಿತ್ತು. ಹೀಗಾಗಿ ಶುಕ್ರವಾರ ನಾನು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕೆ ಬರಲಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಬದ್ಧತೆ ಪ್ರಶ್ನಿಸಿದ್ದು ಸರಿಯಲ್ಲ: ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಕನ್ನಡದ ಮೇಲಿನ ನನ್ನ ಬದ್ಧತೆಯನ್ನು ಪ್ರಶ್ನೆ ಮಾಡಿದ್ದು ಸರಿಯಲ್ಲ. ಮುಖ್ಯಮಂತ್ರಿ ಅವರ ಸಮ್ಮುಖದಲ್ಲೇ ನನ್ನ ಖಾತೆ ಬದಲಾವಣೆಗೆ ಚಂಪಾ ಒತ್ತಾಯಿಸಿದ್ದಾರೆ. ನನ್ನನ್ನು ಈ ಖಾತೆಯಲ್ಲಿ ಉಳಿಸಿಕೊಳ್ಳುವುದು, ಬಿಡುವುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ.

ಚಂಪಾ ಅವರು ಈ ವಿಚಾರ ಪ್ರಸ್ತಾಪ ಮಾಡಿರುವುದಕ್ಕೆ ನನ್ನ ಆಕ್ಷೇಪವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೊ›. ಚಂಪಾ ಅವರು ಸೇರಿದಂತೆ ಎಲ್ಲರಿಗೂ ವಾಕ್‌ ಸ್ವಾತಂತ್ರವಿದೆ. ಹಾಗೆಂದು ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಚಂಪಾ ಅವರು ತಮ್ಮ ಅಭಿಪ್ರಾಯ ಮಂಡನೆಗೆ ಬಳಸಿಕೊಳ್ಳಬಾರದಿತ್ತು ಎಂದು ಸಚಿವರು ಅಸಮಾಧಾನ ಹೊರಹಾಕಿದರು.

ನನ್ನ ಮತ್ತು ನನ್ನ ಇಲಾಖೆಗೆ ಸಂಬಂಧಿಸಿದಂತೆ ಪ್ರೊ.ಚಂಪಾ ಅವರು ಕೆಲವೊಂದು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಹಾಗೆಂದು ಅವರಿಗೆ ಪ್ರತ್ಯುತ್ತರ ನೀಡಲು ನಾನು ಈ ವೇದಿಕೆ ಬಳಸಿಕೊಳ್ಳಲು ಮುಂದಾಗುವುದಿಲ್ಲ.

Advertisement

ರಾಜ್ಯದಲ್ಲಿ ಭಾಷೆ ಬೆಳವಣಿಗೆ ಹಾಗೂ ಕರ್ನಾಟಕದ ಶಿಕ್ಷಣ ನೀತಿಗೆ ಯಾವ ರೀತಿ ತಿದ್ದುಪಡಿ ತರಬೇಕು ಎಂಬ ಚಿಂತನೆ ನನ್ನ ಮುಂದಿದೆ. ಇದ್ಯಾವುದರ ಬಗ್ಗೆ ಮಾಹಿತಿ ಇಲ್ಲದೆ, ಶುಕ್ರವಾರ ಈ ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ನೀತಿಗಳ ಬಗ್ಗೆ ಅಸಮಾಧಾನ ವ್ಯಕ್ತವಾಗಿರುವುದು ಸರಿಯಲ್ಲ ಎಂದರು. 

ಗಣ್ಯರ ಸಾಲಲ್ಲಿ ಮಂತ್ರಿಗಳು: ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕೆ ಗೈರಾದ ಕಾರಣಕ್ಕೆ ಸಮ್ಮೇಳನಾಧ್ಯಕ್ಷ ಪೊ›. ಚಂಪಾ ಅವರ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್ ಅವರು ಶನಿವಾರ, ಸಮ್ಮೇಳನಕ್ಕೆ ಆಗಮಿಸಿ ಗಣ್ಯರ ಸಾಲಲ್ಲಿ ಕುಳಿತು ಗೋಷ್ಠಿಯನ್ನು ಆಲಿಸಿದರು. ಅದೇ ಸಾಲಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಉಪಸ್ಥಿತರಿದ್ದರು.

ಶಾಲೆಗಳ ಸಂಯೋಜನೆ ಮಸೂದೆ ಅನುಷ್ಠಾನಕ್ಕೆ ಕೆಲವೊಂದು ಕಾನೂನು ತೊಡಕುಗಳಿದೆ. ಅದನ್ನು ಅರ್ಥ ಮಾಡಿಕೊಳ್ಳದೆ ಶಿಕ್ಷಣ ಸಚಿವರ ವಿರುದ್ಧ ದೂರುವುದು ಸರಿಯಲ್ಲ.
-ತನ್ವೀರ್‌ಸೇಠ್, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next