ಚಿಕ್ಕಬಳ್ಳಾಪುರ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶ್ ಕುಮಾರ್ ಅವರು ಶುಕ್ರವಾರ ಜಿಲ್ಲೆಯ ಗಡಿ ತಾಲೂಕು ಗೌರಿಬಿದನೂರಿನ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾಗಮ ವ್ಯವಸ್ಥೆಯನ್ನು ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ತಾಲೂಕಿನ ಕಲ್ಲಿನಾಯಕನಹಳ್ಳಿ ಗ್ರಾಪಂನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮೊದಲು ಭೇಟಿ ನೀಡಿದ ಸಚಿವರು, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ವಿದ್ಯಾಗಮ ಕಾರ್ಯಕ್ರಮದ ಬಗ್ಗೆ ಸಮಾಲೋಚನೆ ನಡೆಸಿದರು. ನಂತರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಈ ವರ್ಷದ ಪಠ್ಯಕಡಿತ, ತರಗತಿಗಳು ಹಾಗೂ ಜೂನ್‌ನಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆ ಬಗ್ಗೆ ಸಂವಾದ ನಡೆಸಿದರು.
ಶೇ.30 ರಷ್ಟು ಪಠ್ಯ: ಬಳಿಕ ಮಾತನಾಡಿದ ಸಚಿವರು, ಜೂನ್‌ನಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಪರೀಕ್ಷಾ ದೃಷ್ಟಿಯಿಂದ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಆಗಬಾರದು ಎಂಬ ಉದ್ದೇಶದಿಂದ ಈ ವರ್ಷ ಶೇ.30 ರಷ್ಟು ಪಠ್ಯ ಕಡಿಮೆ ಮಾಡಲಾಗಿದೆ. ಶಿಕ್ಷಕರೂ ಕೂಡ ಇದನ್ನು ಸವಾಲಾಗಿ ಸ್ವೀಕರಿಸಿದ್ದಾರೆ ಎಂದು ತಿಳಿಸಿದರು.
ಪೂರ್ಣ ಪ್ರಮಾಣದಲ್ಲಿ ಪ್ರಾರಂಭ: ಕೋವಿಡ್‌ನಿಂದ ದೂರಗಾಮಿ ಪರಿಣಾಮ ಬೀರುವ ಕ್ಷೇತ್ರ ಯಾವುದಾದರೂ ಇದ್ದರೆ ಅದು ಶಿಕ್ಷಣ ಕ್ಷೇತ್ರವೇ ಆಗಿದೆ. ಕೋವಿಡ್‌ನಿಂದ ಕಳೆದ ವರ್ಷಪೂರ್ತಿ ತರಗತಿಗಳು ಇರಲಿಲ್ಲ. ಪ್ರಸ್ತುತ ವರ್ಷ ಆರೋಗ್ಯ ಇಲಾಖೆ ಜೊತೆ ಚರ್ಚಿಸಿ ಇದೀಗ 9, 10, 11 ಮತ್ತು 12 ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ್ದೇವೆ. 6 ರಿಂದ 8 ನೇ ತರಗತಿ ವರೆಗೆ ವಿದ್ಯಾಗಮ ಕಾರ್ಯಕ್ರಮದ ಮೂಲಕ ತರಗತಿ ನಡೆಸಲಾಗುತ್ತಿದೆ ಎಂದರು.
ಇದೇ ವೇಳೆ ಗೌರಿಬಿದನೂರು ಪಟ್ಟಣದ ಗ್ರಂಥಾಲಯ ಮತ್ತು ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ನಿರ್ಮಿಸುತ್ತಿರುವ ಆಟದ ಮೈದಾನ ಹಾಗೂ ಇತರೆ ಕಾಮಗಾರಿಗಳನ್ನು ಸಚಿವರು ವೀಕ್ಷಿಸಿದರು. ರಾಷ್ಟೀಯ ಮಟ್ಟದಲ್ಲಿ ನಡೆದ ಇನ್ಸ್‌ಫೈರ್ ಪದಕ ಪಡೆದ ಮುತ್ತಕ್ಕ ಹಾಗೂ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿನಿ ಸುಚಿತ್ರಾ ಅವರನ್ನು ಸಚಿವರು ಸನ್ಮಾನಿಸಿದರು.
ಇದನ್ನೂ ಓದಿ :ಅನುದಾನಕ್ಕಾಗಿ ಭಿಕ್ಷಾಟನೆ; ಶಾಲೆಗಳ ಪ್ರತಿಭಟನೆ
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಸರಸ್ವತಮ್ಮ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್ ಜಿ.ನಾಗೇಶ್, ತಹಶೀಲ್ದಾರ್ ಶ್ರೀನಿವಾಸ್, ಗೌರಿಬಿದನೂರು ತಾಪಂ ಇಒ ಮುನಿರಾಜು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.