ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಎಸ್ಎಸ್ಎಲ್ ಸಿ ಅಂತಿಮ ಪರೀಕ್ಷೆ ನಡೆಯುತ್ತಿದೆ. ಕೋವಿಡ್ ಕಾರಣದಿಂದ ಈ ಬಾರಿ ಭಿನ್ನ ರೀತಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಇಂದು ಮತ್ತು ಜು.21ರಂದು ಎರಡು ದಿನ ಪರೀಕ್ಷೆ ನಡೆಯಲಿದೆ.
ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಚಿವ ಸುರೇಶ್ ಕುಮಾರ್ ಶುಭ ಹಾರೈಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿರುವ ನಮ್ಮ ಹೆಮ್ಮೆಯ ಎಲ್ಲಾ ಮಕ್ಕಳಿಗೆ ಶುಭ ಹಾರೈಕೆಗಳು. ಮಕ್ಕಳೆಲ್ಲರೂ ಶಾಂತಚಿತ್ತರಾಗಿ, ನಿರಾತಂಕವಾಗಿ, ಏಕಾಗ್ರತೆಯಿಂದ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದಿದ್ದಾರೆ.
ಪರೀಕ್ಷೆಗಳನ್ನು ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಸಮನ್ವಯದಿಂದ ಏಕ ತಂಡವಾಗಿ ಉತ್ತಮ ವ್ಯವಸ್ಥೆಗಳನ್ನು ಮಾಡಿವೆ ಎಂದು ಪಾಲಕರಿಗೆ ಭರವಸೆ ನೀಡುತ್ತೇನೆ.ನಿಮ್ಮ ಮಕ್ಕಳು ನಮ್ಮೆಲ್ಲರ ಮಕ್ಕಳು. ನಮ್ಮ ಎಲ್ಲಾ ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷಾ ಕೇಂದ್ರಗಳು ಎಂದು ಅವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಲಸಿಕೆ ಅಭಿಯಾನಕ್ಕೆ 6 ತಿಂಗಳು : 2ನೇ ಡೋಸ್‌ಗೆ ಹೆಚ್ಚಿದ ಬೇಡಿಕೆ
ಸೋಮವಾರ ರಾಜ್ಯಾದ್ಯಂತ ಸುಮಾರು 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜುಲೈ 19 ಮತ್ತು 22ರಂದು ತಲಾ 3 ತಾಸುಗಳಲ್ಲಿ ಒಟ್ಟು ಆರು ವಿಷಯಗಳ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ 4,885 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.
ಕೋವಿಡ್ ಲಕ್ಷಣಗಳು ಅಥವಾ ಜ್ವರ, ಶೀತ, ಕೆಮ್ಮು ಇದ್ದವರಿಗೆ ಕೋವಿಡ್ ನಿಗಾ ಪರೀಕ್ಷಾ ಕೊಠಡಿ ಮೀಸಲಿಡಲಾಗಿದೆ. ಇದುವರೆಗೆ 23 ಪರೀಕ್ಷಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅವರೆಲ್ಲರಿಗೂ ಕೋವಿಡ್ ನಿಗಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಸುಮಂಗಲ ಸ್ಪಷ್ಟಪಡಿಸಿದ್ದಾರೆ.