ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಆಗಮಿಸಿ ಇಂದು ನಡೆಸಿರುವ ನಾಲ್ಕು ಸಭೆಗಳಲ್ಲಿ ಮೂರು ಸಭೆಗಳಿಗೆ ನಮ್ಮನ್ನು ಆಹ್ವಾನಿಸಿಲ್ಲ ಎಂದು ಕಾಂಗ್ರೆಸ್‌ನ ಇಬ್ಬರು ಶಾಸಕರು ಹಾಗೂ ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷರು ಆಕ್ಷೇಪಿಸಿ ವಾಗ್ವಾದ ನಡೆಸಿದ ಘಟನೆ ನಡೆಯಿತು.
ಶಿಕ್ಷಣ ಸಚಿವ ಹಾಗೂ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ಬುಧವಾರ ಜಿಲ್ಲೆಗೆ ಆಗಮಿಸಿ, ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳೊಡನೆ ವಿವಿಧ ಸಭೆಗಳನ್ನು ನಡೆಸಿದರು. ಕೊನೆಯ ಸಭೆ ಆರಂಭವಾದಾಗ ಕಾಂಗ್ರೆಸ್ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಜಿ.ಪಂ. ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ ಮತ್ತು ಜಿ.ಪಂ.ನ ಕೆಲವು ಸದಸ್ಯರು ಕೆಡಿಪಿ ಸಭಾಂಗಣಕ್ಕೆ ಧಾವಿಸಿ ಬಂದರು.
ಶಾಸಕ ಆರ್. ನರೇಂದ್ರ ಮಾತನಾಡಿ, ಸಚಿವರೇ ಕಾರ್ಯಕ್ರಮದ ಪಟ್ಟಿ ನೋಡಿ. ಇಂದು 10ಕ್ಕೆ ನೀರಾವರಿ ನಿಗಮ, ಸೆಸ್ಕ್ ಅಧಿಕಾರಿಗಳ ಸಭೆ, 10.40ಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ, 11ಕ್ಕೆ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಪರಿಶೀಲನಾ ಸಭೆ ನಡೆದಿದೆ. ಈ ಸಭೆಗಳು ಸಚಿವರು ಮತ್ತು ಅಧಿಕಾರಿಗಳಿಗೆ ಸೀಮಿತವಾಗಿದೆ. 12ಕ್ಕೆ ಕೋವಿಡ್ ಸೋಂಕು ನಿಯಂತ್ರಿಸುವ ಬಗ್ಗೆ ಸಭೆ ಇದೆ. ಈ ಒಂದ ಸಭೆಗೆ ಮಾತ್ರ ನಮ್ಮನ್ನು ಆಹ್ವಾನಿಸಲಾಗಿದೆ. ಉಳಿದ ಮೂರು ಸಭೆಗಳಿಗೇಕೆ ಆಹ್ವಾನ ನೀಡಿಲ್ಲ. ಈ ಥರ ಮಾಡುವುದು ಸರಿಯಲ್ಲ. ಶಾಸಕರ ಅಗತ್ಯವಿಲ್ಲ ಎಂದು ಹೇಳಿ ಬಿಡಿ. ನಾವು ಬರುವುದೇ ಇಲ್ಲ. ಎಂದು ಏರು ದನಿಯಲ್ಲಿ ಪ್ರಶ್ನಿಸಿದರು. ಹಿರಿಯ ಶಾಸಕ ಸಿ. ಪುಟ್ಟರಂಗಶೆಟ್ಟಿ ಸಹ ಇದಕ್ಕೆ ದನಿಗೂಡಿಸಿದರು.
ಆಗ ಜಿ.ಪಂ. ಸದಸ್ಯರೊಬ್ಬರು ಧಿಕ್ಕಾರ ಕೂಗಿದ ಪ್ರಸಂಗವೂ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಸಿ.ಎಸ್. ನಿರಂಜನಕುಮಾರ್ ಸಹ ಏರುದನಿಯಲ್ಲಿ ಸಭೆಗೆ ಆಹ್ವಾನ ನೀಡುವವರು ಜಿಲ್ಲಾಧಿಕಾರಿಯವರು, ಇದರಲ್ಲಿ ಸಚಿವರ ಪಾತ್ರವಿಲ್ಲ ಎಂದು ಹೇಳಿದರು.
ಆಗ ಎದ್ದು ನಿಂತ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು, ನಾನು 35 ಸಲ ಚಾಮರಾಜನಗರಕ್ಕೆ ಬಂದಿದ್ದೇನೆ. ಪ್ರತಿ ಬಾರಿ ಕೊಳ್ಳೇಗಾಲದಿಂದ ಶಾಸಕ ನರೇಂದ್ರ ಅವರ ಜೊತೆಯೇ ಬರುತ್ತಿದ್ದೆ. ಈ ಬಾರಿ ಈ ರೀತಿ ಆಗಿರುವುದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ. ಇದು ಪ್ರಮುಖವಾದ ಸಭೆ, ನೀವೆಲ್ಲ ಭಾಗವಹಿಸಿ ಎಂದರು.
ಇದರಿಂದ ಸಮಾಧಾನಗೊಂಡ ನರೇಂದ್ರ ಮತ್ತು ಪುಟ್ಟರಂಗಶೆಟ್ಟಿ, ಸಚಿವರು ಕ್ಷಮೆ ಯಾಚಿಸಿರುವುದು ದೊಡ್ಡ ವಿಚಾರ ಹಾಗಾಗಿ ನಾವು ಸಭೆಯಲ್ಲಿ ಭಾಗವಹಿಸುತ್ತೇವೆ ಎಂದು ವೇದಿಕೆ ಹತ್ತಿ ಕುಳಿತರು.