Advertisement

ಅಸಹಾಯಕತೆಯಿಂದ ಅಸಂಬದ್ಧ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ: ಸಚಿವ ಸುನೀಲ್ ಕುಮಾರ್

04:59 PM Oct 19, 2021 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಲ್ಲಿ ಅಸಹಾಯಕರಾಗಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿರುವಂತೆ ಕಾಣುತ್ತಿದೆ ಎಂದು ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.

Advertisement

ರಾಜ್ಯದ ವಿಧಾನಸೌಧದ ಬಿಜೆಪಿ ಕಛೇರಿಯಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಕನ್ನಡದ ಸಂಸ್ಕೃತಿಗೆ ಗೌರವ ತರುವ ರೀತಿಯಲ್ಲಿ ಸಿದ್ದರಾಮಯ್ಯರವರ ಹೇಳಿಕೆಗಳು ಮತ್ತು ಭಾಷಣಗಳು ಇಲ್ಲ. ಆರ್ಎಸ್‍ಎಸ್ ಕುರಿತಂತೆ ಅನಪೇಕ್ಷಿತ ಟೀಕೆ ಮಾಡುತ್ತಿರುವ ಅವರು ಗೌರವಾನ್ವಿತ ಪ್ರಧಾನಿಗಳ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಇದು ಅಸಹಾಯಕತೆಯ ಪರಿಣಾಮವೇ ಅಥವಾ ತಮ್ಮ ನಾಯಕರನ್ನು ಮೆಚ್ಚಿಸಲು ಈ ರೀತಿ ಪ್ರಯತ್ನಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ಆರ್ಎಸ್‍ಎಸ್ ಬಗ್ಗೆ ಸಿದ್ದರಾಮಯ್ಯ ಅವರಿಗೆ ಸ್ಪಷ್ಟ ತಿಳುವಳಿಕೆ ಇಲ್ಲ ಎಂದ ಅವರು, ನಾವೆಲ್ಲರೂ ಆರ್‍ಎಸ್‍ಎಸ್ ನೀಡಿದ ಸಂಸ್ಕಾರದಿಂದಲೇ ಈ ಸ್ಥಾನಕ್ಕೆ ಬಂದಿರುವುದಾಗಿ ವಿವರಿಸಿದರು. ಆರ್ಎಸ್‍ಎಸ್ ಎಂದರೆ ಸೇವೆ ಸಂಸ್ಕಾರ, ತ್ಯಾಗ, ದೇಶಭಕ್ತಿ ಹಾಗೂ ವ್ಯಕ್ತಿತ್ವ ನಿರ್ಮಾಣದ ಸಂಸ್ಥೆಯಾಗಿದೆ. ಕೋಟ್ಯಾಂತರ ಜನರ ಉತ್ತಮ ವ್ಯಕ್ತಿತ್ವಕ್ಕೆ ಅದು ಕಾರಣವಾಗಿದೆ. ಈ ಕುರಿತಂತೆ ಅವರಿಗೆ ಜ್ಞಾನ ಮತ್ತು ಮಾಹಿತಿಯ ಕೊರತೆ ಇದೆ ಅಥವಾ ಸಿದ್ದರಾಮಯ್ಯರವರಿಗೆ ಸಲಹೆ ಕೊಡುವವರಿಗೆ ಅನುಭವದ ಕೊರತೆ ಇರುವ ಸಾಧ್ಯತೆ ಇದೆ ಎಂದು ಸುನೀಲ್ ಕುಮಾರ್ ತಿಳಿಸಿದರು.

ಇದನ್ನೂ ಓದಿ:ಕಾಂಗ್ರೆಸ್‌ಗೆ ಮತ ನೀಡಿ ಪ್ರಗತಿಗೆ ಸಹಕರಿಸಲು ಸಿದ್ದರಾಮಯ್ಯ ಮನವಿ

ಜಗತ್ತಿನಾದ್ಯಂತ ವಿವಿಧ ದೇಶಗಳ ಪ್ರಮುಖ ಗಣ್ಯರು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವವನ್ನು ಶ್ಲಾಘಿಸುತ್ತಾರೆ. ಆದ್ದರಿಂದ ಸಿದ್ದರಾಮಯ್ಯರವರು ಎಚ್ಚರಿಕೆಯಿಂದ ತಮ್ಮ ಹಿರಿತನಕ್ಕೆ ಅನುಗುಣವಾಗಿ ಮಾತನಾಡುವುದು ಒಳಿತು ಎಂದು ತಿಳಿಸಿದರು.

Advertisement

ವಿರೋಧ ಪಕ್ಷದವರು ಸಕಾರಾತ್ಮಕವಾಗಿ ಟೀಕೆ ಮಾಡಬೇಕು. ಆದ್ದರಿಂದ, ನೀವು ವಿರೋಧ ಪಕ್ಷದ ನಾಯಕರಾಗಿ ಮಾದರಿ ಆಗುವಂತಹ ಮತ್ತು ನೋಡಿ ಕಲಿಯುವಂತಹ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದು ತಿಳಿಸಿದರು.

ಕೇಸರಿ ಬಣ್ಣವನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸಬಾರದು. ಕೇಸರಿ ಎಂಬುದು ಭಾರತದ ತ್ಯಾಗದ ಸಂಕೇತ ಅದು ನಮ್ಮ ಪರಂಪರೆಯ ಮತ್ತು ರಾಷ್ಟ್ರೀಯತೆಯನ್ನು ಬಿಂಬಿಸುತ್ತದೆ. ಕೇಸರಿ ಎಂದೊಡನೆ ಸಿದ್ದರಾಮಯ್ಯರವರು ವಿಚಲಿತರಾಗುವುದು ಯಾಕೆ. ಹಣೆಯ ಮೇಲೆ ಕುಂಕುಮ ಇಡುವುದು ಅವರಿಗೆ ಅಸಹನೀಯ ಅನಿಸುವುದು ಯಾಕೆ ಎಂದು ಪ್ರಶ್ನಿಸಿದರು.

ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಮಾಡಿರುವುದು ಹೇಗೆ ಸಮರ್ಥನೀಯವೋ, ತ್ಯಾಗದ ಸಂಕೇತವಾದ ಕೇಸರಿ ಶಾಲು ಧರಿಸಿರುವುದು ಸಮರ್ಥನಿಯವೇ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ಕಾನೂನಿನ ಚೌಕಟ್ಟಿನಲ್ಲಿ ಪರಂಪರೆಯನ್ನು ನಾವು ಮರೆಯಬಾರದು ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next