ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವುದಕ್ಕೆ ಹತ್ತಾರು ಜನರಿಗೆ ಯೋಗ್ಯತೆ ಇದೆ. ಆದರೆ ಪಕ್ಷ ನನಗೆ ಆ ಜವಾಬ್ದಾರಿ ನೀಡಿದರೆ ನಿಭಾಯಿಸುತ್ತೇನೆಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವನ್ನು ಮುನ್ನಡೆಸುವ ಯೋಗ್ಯತೆ ಇವತ್ತಿನ ಯುವ ಸಮುದಾಯಕ್ಕಿದೆ. ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದೂ ನನಗೆ ಗೊತ್ತಿರಲಿಲ್ಲ. ನಮ್ಮ ಹಿರಿಯರು ನನಗೆ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಪ್ರಮುಖವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತಕ್ಷಣ ಬದಲಾವಣೆ ಆಗುತ್ತದೆ ಎನ್ನುವುದು ನನಗೇನು ಅನಿಸುತ್ತಿಲ್ಲ. ಪಕ್ಷದ ಮುಂದಿನ ಗುರಿ ಬರುವ ಚುನಾವಣೆಯಲ್ಲಿ 130ರಿಂದ 150 ಸ್ಥಾನ ಗೆಲ್ಲುವುದಾಗಿದೆ. ಗೆಲ್ಲಲು ಬೇಕಾದಂತಹ ಕಾರ್ಯತಂತ್ರ ಮಾಡುತ್ತಿದ್ದೇವೆ ಎಂದರು.
ಸ್ವಾತಂತ್ರ ಪೂರ್ವದ ಕಾಂಗ್ರೆಸ್ ಬೇರೆ, ಸ್ವಾತಂತ್ರ ನಂತರದ ಕಾಂಗ್ರೆಸ್ ಬೇರೆ. ಮಾಜಿ ಸಿಎಂ ಸಿದ್ದರಾಮಯ್ಯ ಆರಂಭದ ದಿನಗಳಲ್ಲಿ ಸಮಾಜವಾದಿಯಲ್ಲಿದ್ದರು. ನಂತರ ಜೆಡಿಎಸ್‌ಗೆ ಬಂದು ಆನಂತರ ಅ ಧಿಕಾರಕ್ಕಾಗಿ ಕಾಂಗ್ರೆಸ್‌ಗೆ ಹೋದರು. ಈಗಲೂ ಅವರು ಸಿಎಂ ಅಭ್ಯರ್ಥಿ ಅಲ್ಲ ಎಂದರೆ ಯಾವ ಪಾರ್ಟಿಗೆ ಹೋಗ್ತಾರೆ ಎನ್ನುವುದು ಪ್ರಶ್ನಾರ್ಥಕ ಚಿಹ್ನೆ ಇದೆ. ವೀರಶೈವ ಲಿಂಗಾಯತ ವಿವಾದ, ಮೋದಿ ಅವರನ್ನು ನರಹಂತಕ ಎಂಬುದಾಗಿ ಕರೆದಿದ್ದು ಯಾರು? ವಿವಾದಗಳನ್ನು ಎಳೆದು ಜನರನ್ನು ದಿಕ್ಕು ತಪ್ಪಿಸಬೇಕೆನ್ನುವುದೇ ಅವರ ಆಶಯವಿದೆ. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎನ್ನುವ ಸವಾಲು ಸ್ವೀಕರಿಸಲು ಸಿದ್ಧ. ಬಜೆಟ್, ಅಭಿವೃದ್ಧಿ ಬಗ್ಗೆ ಒಂದೇ ಒಂದು ದಿನವೂ ಚರ್ಚೆ ಮಾಡದವರಿಗೆ ಈಗ ಮಾತನಾಡಲು ಯೋಗ್ಯತೆ ಇಲ್ಲ ಎಂದರು.
ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುವುದು ತಪ್ಪು ಎಂದು ನಾವೆಲ್ಲೂ ಹೇಳುತ್ತಿಲ್ಲ. ಆದರೆ ದೇವಸ್ಥಾನಗಳಿಗೆ ಹೇಗೆ ಹೋಗಬೇಕು ಎನ್ನುವುದು ಕೆಲವರ ಭಾವನೆಗೆ ಸಂಬಂಧಪಟ್ಟದ್ದು. ಪ್ರಮುಖವಾಗಿ ಅವರವರ ಭಾವನೆಗೆ ತಕ್ಕಂತೆ ಅವರವರು ನಡೆದುಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರಿಗೆ ಯಾವ ಭಾವನೆ ಇದೆ ನನಗೆ ಗೊತ್ತಿಲ್ಲ. ಅವರು ಒಳಗೊಂದು, ಹೊರಗೊಂದು ಮಾತನಾಡುತ್ತಾರೆ ಎಂದರು.
ಕೆಪಿಟಿಸಿಎಲ್ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಮೊದಲ ಹಂತದ ವರದಿಯಲ್ಲಿ ಆ ರೀತಿ ಏನೂ ಆಗಿಲ್ಲ ಎಂದು ಜಿಲ್ಲಾ ಧಿಕಾರಿಗಳು ಹೇಳಿದ್ದಾರೆ. ಒಟ್ಟಾರೆ ಈ ಘಟನಾವಳಿಗಳು ಏನಾದರೂ ನಡೆದಿದ್ದರೆ ಯಾವುದೇ ಕಾರಣಕ್ಕೂ ಅದನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಪರೀಕ್ಷೆ ಬರೆದ ಅಭ್ಯರ್ಥಿಗಳು ಯಾರೂ ಭಯಪಡುವ ಅಗತ್ಯ ಇಲ್ಲ. ಅವರಿಗೆ ಸೂಕ್ತವಾದ ನ್ಯಾಯ ಒದಗಿಸಲಾಗುವುದು ಎಂದರು.