ಚಿಕ್ಕಬಳ್ಳಾಪುರ: ಚಿಂತಾಮಣಿ ಕ್ಷೇತ್ರದಲ್ಲಿ ಕಳೆದ 10 ವರ್ಷಗಳ ಹಿಂದೆ ಅಹಂಕಾರವನ್ನು ಮನೆಗೆ ಕಳುಹಿಸಿದ್ದೀರಿ. ಈ ಕ್ಷೇತ್ರದಲ್ಲಿ ಅಭಿವೃದ್ಧಿ ಬೇಕಾ ಅಥವಾ ಅಹಂಕಾರ ಬೇಕಾ ಎಂಬುದನ್ನು ತೀರ್ಮಾನಿಸಬೇಕು. ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ, ಈ ಬಾರಿ ಬಿಜೆಪಿ ಗೆಲ್ಲುವ ಮೂಲಕ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಮನೆಗೆ ಹೋಗಲಿದ್ದಾರೆ ಎಂದು ಸಚಿವ ಸುಧಾಕರ್, ಡಾ.ಎಂ.ಸಿ.ಸುಧಾಕರ್ ವಿರುದ್ಧ ವಾಗ್ಧಾಳಿ ನಡೆಸಿದರು.
ಚಿಂತಾಮಣಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಿದ ವೇಳೆ ಮಾತನಾಡಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೈತರ ಹೆಸರು ಕಳುಹಿಸಲೂ ಸರ್ಕಾರಕ್ಕೆ ವ್ಯವಧಾನವಿರಲ್ಲಿ. ಆದರೆ ಈಗ ರಾಜ್ಯದ 52 ಲಕ್ಷ ಮಂದಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದರು.
ವಿಜಯ ಯಾತ್ರೆ ನೆನಪಿಸುತ್ತಿದೆ: ಚಿಂತಾಮಣಿಯಲ್ಲಿ ಬಿಜೆಪಿಯೇ ಇಲ್ಲ ಎನ್ನುವವರಿಗೆ ಮೇ 13ರಂದು ನಡೆಯಲಿರುವ ವಿಜಯ ಯಾತ್ರೆ ನೆನಪಿಸುವ ರೀತಿಯಲ್ಲಿ ಇಂದಿನ ರೋಡ್ ಶೋ ನಡೆಯುತ್ತಿದೆ. ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಕಾಂಗ್ರೆಸ್, ಜೆಡಿಎಸ್ ಒಂದೇ ನಾಣ್ಯದ 2 ಮುಖ: ಕಾಂಗ್ರೆಸ್ -ಜೆಡಿಎಸ್ ಒಂದೇ ನಾಣ್ಯದ 2 ಮುಖ. ಹಿಂದುಳಿದ ವರ್ಗದ ಗೋಪಿ ಅವರಿಗೆ ಈ ಬಾರಿ ಚಿಂತಾಮಣಿಯಲ್ಲಿ ಅವಕಾಶ ಮಾಡಿಕೊಡುವಂತೆ ಕೋರಿದರು.
ಅಹಿಂದ ಪಕ್ಷ ಎನ್ನುವ ಕಾಂಗ್ರೆಸ್ ಜನರಿಗೆ ಯಾವುದೇ ಅನುಕೂಲ ಮಾಡಿಲ್ಲ, ಮೀಸಲಾತಿ ಹೆಚ್ಚಿಸಿದ್ದು, ಒಳ ಮೀಸಲಾತಿ ನೀಡಿದ್ದು ಬಿಜೆಪಿ. ಈಗ ಹೇಳುತ್ತಿದ್ದಾರೆ ಸದಾಶಿವ ಆಯೋಗದ ವರದಿ ಜಾರಿ ಮಾಡುವುದಾಗಿ 5 ವರ್ಷ ಅಧಿಕಾರದಲ್ಲಿದ್ದಾಗ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.