Advertisement

ಮಾಜಿ ಸಿಎಂ ಪೋಸ್ಟರ್‌ ಅಂಟಿಸುವ ಘಟನೆ 75 ವರ್ಷಗಳಲ್ಲಿ ಎಲ್ಲೂ ನಡೆದಿಲ್ಲ: ಸಚಿವ ಸುಧಾಕರ್ ಟೀಕೆ

02:48 PM Sep 24, 2022 | Team Udayavani |

ಬೆಂಗಳೂರು: ಪೇಸಿಎಂ ಅಭಿಯಾನದ ಮೂಲಕ ಕಾಂಗ್ರೆಸ್‌ ನಾಯಕರು ರಾಜ್ಯ ರಾಜಕೀಯದ ಘನತೆಯನ್ನು ಮಣ್ಣುಪಾಲು ಮಾಡಿದ್ದಾರೆ. ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಕಾಂಗ್ರೆಸ್‌ ನಾಯಕರು ವೈಯಕ್ತಿಕ ಲಾಭಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಡೀ ದೇಶದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ ನಾಯಕರು ಇಂತಹ ಕೀಳುಮಟ್ಟದ ರಾಜಕೀಯ ಮಾಡುವುದರಲ್ಲಿ ನಿಸ್ಸೀಮರೆಂದು ಸಾಬೀತು ಮಾಡಿ ಬೆತ್ತಲಾಗಿದ್ದಾರೆ. ಆದರೆ ಅವರು ಏನೇ ಮಾಡಿದರೂ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅನಿಲ್‌ ಅಯ್ಯರ್‌ ಎಂಬುವರ ಹೆಸರನ್ನೂ ದುರ್ಬಳಕೆ ಮಾಡಿಕೊಂಡಿದ್ದು, ಅವರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ. ಕಾಂಗ್ರೆಸ್‌ನವರು ಸತ್ಯ ಹರಿಶ್ಚಂದ್ರರಂತೆ ವರ್ತನೆ ಮಾಡುತ್ತಿದ್ದಾರೆ. ಆದರೆ ಅವರ ಹಿರಿಯ ನಾಯಕರೇ ಜಾಮೀನು ಮೇಲೆ ಹೊರಗಿದ್ದಾರೆ. ಭ್ರಷ್ಟಾಚಾರದಿಂದಲೇ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು.

ಪದೇ ಪದೇ 40% ಕಮಿಶನ್‌ ಬಗ್ಗೆ ಹೇಳಿದರೆ ಜನರು ನಂಬುತ್ತಾರೆ ಎಂದು ಕಾಂಗ್ರೆಸ್‌ ತಿಳಿದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶುದ್ಧ ಆಡಳಿತ ಜನರಿಗೆ ತಿಳಿದಿದೆ. ಅವರು ಜನಸಾಮಾನ್ಯರ ಸಿಎಂ ಎಂಬುದು ಜನರಿಗೆ ಗೊತ್ತಿದೆ. ಮುಖ್ಯಮಂತ್ರಿಗಳು ಒಳ್ಳೆಯ ಆಡಳಿತವನ್ನು ನೀಡುವುದನ್ನು ಕಾಂಗ್ರೆಸ್‌ ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾಜಿ ಮುಖ್ಯಮಂತ್ರಿಯೊಬ್ಬರು ಹೋಗಿ ಪೋಸ್ಟರ್‌ ಅಂಟಿಸುವುದನ್ನು 75 ವರ್ಷಗಳ ಇತಿಹಾಸದಲ್ಲೇ ನೋಡಿಲ್ಲ ಎಂದರು.

ಸಮುದಾಯದ ವಿರುದ್ಧ ನಡೆ; ಕಾಂಗ್ರೆಸ್‌ ಹಿಂದಿನಿಂದಲೂ ಪ್ರಬಲ ಸಮುದಾಯದವರ ವಿರುದ್ಧ ಕೆಲಸ ಮಾಡುತ್ತಿದೆ. ಹಿಂದೆ ವೀರೇಂದ್ರ ಪಾಟೀಲ್‌, ಕೆಂಗಲ್‌ ಹನುಮಂತಯ್ಯ ಅವರ ವಿರುದ್ಧ ಕಾಂಗ್ರೆಸ್‌ ಹೀಗೆಯೇ ಕೆಲಸ ಮಾಡಿತ್ತು. ಅದರಲ್ಲೂ ಲಿಂಗಾಯತ ಸಮುದಾಯದವರ ವಿರುದ್ಧ ಕಾಂಗ್ರೆಸ್‌ ನವರು ಕೆಲಸ ಮಾಡುತ್ತಾರೆ. ಇದರಿಂದಾಗಿಯೇ ಅಧಿಕಾರಕ್ಕೆ ಬರುವ ಅಲ್ಪ ಅವಕಾಶವನ್ನೂ ಕಳೆದುಕೊಂಡಿದ್ದಾರೆ. ಜನಸಾಮಾನ್ಯರೇ ಕಾಂಗ್ರೆಸ್‌ ಗೆ ಸರಿಯಾದ ಉತ್ತರ ನೀಡಲಿದ್ದಾರೆ. ಚುನಾವಣೆಯ ಸಮಯದಲ್ಲಿ ಜನರೇ ಕಾಂಗ್ರೆಸ್‌ ನಾಯಕರನ್ನು ಮನೆಗೆ ಕಳುಹಿಸುತ್ತಾರೆ ಎಂದರು.

ಇದನ್ನೂ ಓದಿ:ಮಥುರಾದಿಂದ ಕಂಗನಾ ಸ್ಪರ್ಧೆ?; ಸಂಸದೆ ಹೇಮಾ ಮಾಲಿನಿ ಪ್ರತಿಕ್ರಿಯೆ ಹೀಗಿದೆ

Advertisement

ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಅವರೊಂದಿಗೆ ನನಗೆ ಉತ್ತಮ ವೈಯಕ್ತಿಕ ಸಂಬಂಧವಿದೆ. ಹೀಗಾಗಿ ಅವರನ್ನು ಭೇಟಿ ಮಾಡಲಾಗಿದೆಯೇ ಹೊರತು ಅದರಲ್ಲಿ ರಾಜಕೀಯ ಇಲ್ಲ. ಅವರು ಎಲ್ಲಿದ್ದರೂ ರಾಜಕೀಯ ಶಕ್ತಿಯಾಗಿಯೇ ಇದ್ದಾರೆ. ಯಾವುದೇ ಒಳ್ಳೆಯ ನಾಯಕರು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ. ಅನೇಕ ಮುಖಂಡರ ಜೊತೆ ನಾನು ಸಂಪರ್ಕದಲ್ಲಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next