ಚಿಕ್ಕಬಳ್ಳಾಪುರ: ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಹಿರಿಯ ಮುಖಂಡ ಎಂ.ಬಿ. ಪಾಟೀಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಲಿ ಎಂದು ಆರೋಗ್ಯ ಸಚಿವ ಡಾ| ಕೆ.ಸುಧಾಕರ್ ತಿರುಗೇಟು ನೀಡಿದರು.
ತಾಲೂಕಿನ ಅರೂರ್ ಗ್ರಾಮದಲ್ಲಿ ವೈದ್ಯಕೀಯ ಕಾಲೇಜು ಕಾಮಗಾರಿ ಪರಿಶೀಲಿಸಿ ನಂತರ ಬಿಎಸ್‌ವೈ ಅವರ ಕುರಿತು ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ರಾಹುಲ್ ಗಾಂಧಿ ಈ ಬಾರಿ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಲಿಂಗಾಯಿತರಿಗೇಕೆ ನೀಡಬಾರದು ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನಲ್ಲಿ ಹಲವು ವರ್ಷಗಳಿಂದ ಲಿಂಗಾಯಿತ ಸಮುದಾಯದ ಅಭ್ಯರ್ಥಿ ಮುಖ್ಯಮಂತ್ರಿಯಾಗಿಲ್ಲ ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿ ಆಗಿದ್ದರು, ಹಾಗಾಗಿ ಎಂ.ಬಿ. ಪಾಟೀಲ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು,ಬಿಎಸ್ ವೈ ನಾಯಕತ್ವದಲ್ಲಿ ನಂಬಿಕೆ ಇಟ್ಟು ನಾವು ಪಕ್ಷಕ್ಕೆ ಬಂದಿದ್ದು, ಅವರಿಗೆ ಅತ್ಯುನ್ನತ ಹುದ್ದೆ ನೀಡಿರುವುದು ಖುಷಿ ತಂದಿದೆ ಎಂದರಲ್ಲದೆ ಪ್ರಧಾನಿ, ಗೃಹ ಸಚಿವರೊಂದಿಗೆ ಸ್ಥಾನ ಕಲ್ಪಿಸಲಾಗಿದೆ. ಅಲ್ಲದೆ, ಬಿ.ಎಲ್. ಸಂತೋಷ್ ಜೀ ಅವರಿಗೂ ಸ್ಥಾನ ಲಭ್ಯವಾಗುವ ಮೂಲಕ ರಾಜ್ಯದ ಇಬ್ಬರಿಗೆ ಅವಕಾಶ ಸಿಕ್ಕಿರುವುದು ಅಭಿನಂದನೀಯವಾಗಿದೆ. ಪ್ರಧಾನಿ ಮೋದಿಯವರು ಇತ್ತೀಚಿಗೆ ಘೋಷಿಸಿದಂತೆ ಮಿಷನ್ ದಕ್ಷಿಣ್ ಸಮರ್ಪಕ ಅನುಷ್ಠಾನಕ್ಕೆ ಸಾಕ್ಷಿಯಾಗಿದೆ. ತಮಿಳುನಾಡು, ತೆಲಂಗಾಣ ರಾಜ್ಯ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಇತರೆ ರಾಜ್ಯಗಳಲ್ಲಿಯೂ ಬಿಜೆಪಿ ವಿಸ್ತರಣೆಗೆ ಅನುಕೂಲವಾಗಲಿದೆ ಎಂದರು.
ಬಿಜೆಪಿಯಲ್ಲಿ ಯಾರು ಮುಖ್ಯಮಂತ್ರಿಯಾಗಬೇಕು ಎಂಬುದು ಬಿಜೆಪಿ ಆಂತರಿಕ ವಿಚಾರ, ಅದೇ ರೀತಿಯಲ್ಲಿ ಕಾಂಗ್ರೆಸ್ ನಲ್ಲಿ ಯಾರು ಮುಖ್ಯಮಂತ್ರಿಯಾಗಬೇಕು ಎಂಬುದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಹಾಗಾಗಿ ಈ ವಿಚಾರದ ಬಗ್ಗೆ ಯಾರೂ ಮಾತನಾಡಬೇಕಾದ ಅಗತ್ಯವಿಲ್ಲ. ಬಿಎಸ್ ವೈ ಅವರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದು ಪಕ್ಷದ ವರಿಷ್ಠರೂ ಸೇರಿದಂತೆ ಪ್ರತಿಯೊಬ್ಬರಿಗೂ ಅರಿವಿದೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟಲಾಗುವುದು. ಅವರ ಗೌರವಕ್ಕೆ, ಸ್ಥಾನಮಾನಕ್ಕೆ ಕುಂದು ಬಾರದಂತೆ ನಡೆದುಕೊಳ್ಳಲಾಗುವುದು ಎಂದರು.