ಮೈಸೂರು: ಅರಮನೆ ಅಂಗಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಡಿ ಮಕ್ಕಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಅವರೂ ನೃತ್ಯ ಪ್ರದರ್ಶಿಸಿ ಸಂಭ್ರಮಿಸಿದರು.
ಅರಮನೆ ಆವರಣದಲ್ಲಿ ಭಾನುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆಯುಷ್ ಹಾಗೂ ಅರಣ್ಯ ಇಲಾಖೆಯಿಂದ ಏರ್ಪಡಿಸಿದ್ದ ಮಾವುತರು, ಕಾವಾಡಿ ಮಕ್ಕಳ ತಾತ್ಕಾಲಿಕ ಶಾಲೆ ಹಾಗೂ ಪಂಚಕರ್ಮ ಚಿಕಿತ್ಸಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಡಿ ಮಕ್ಕಳು ಪ್ರದರ್ಶಿಸಿದ ಜಾನಪದ ನೃತ್ಯ ಕಾರ್ಯಕ್ರಮದಲ್ಲಿ ಸಚಿವರೂ ಮಕ್ಕಳೊಂದಿಗೆ ಹೆಜ್ಜೆ ಹಾಕುವ ಮೂಲಕ ಮಕ್ಕಳಲ್ಲಿ ಭರವಸೆ ಮೂಡಿಸಿದರು. ಬಳಿಕ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ತಾತ್ಕಾ ಲಿಕ ಶಾಲೆ ಉದ್ಘಾಟನೆ ವೇಳೆ ಹಾಡಿ ಮಕ್ಕಳು 2 ನೃತ್ಯ ಮಾಡಿದರು.
ಮೈಸೂರಿನಲ್ಲಿ ನನ್ನೊಂದಿಗೆ ಡ್ಯಾನ್ಸ್ ಮಾಡಿದ್ದನ್ನು ಮಕ್ಕಳು ನೆನಪಿನಲ್ಲಿಟ್ಟು ಕೊಳ್ಳುತ್ತಾರೆ ಎಂದು ಹೇಳಿದರು. ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಉತ್ತಮ ಸ್ಪಂದನೆ ಬಂದಿದೆ. ನೆರೆಯ ಜಿಲ್ಲೆಗಳಿಂದಲೂ ಅವಕಾಶ ಕ್ಕಾಗಿ ಕಲಾವಿದರು ಮನವಿ ಸಲ್ಲಿಸಿ ದ್ದಾರೆ. ದಸರಾ ಪ್ರಾಯೋಜಕತ್ವದ ಬಗ್ಗೆ ಸೆ.6ರಂದು ಸಭೆ ನಡೆಸಿ ಮಾಹಿತಿ ಪಡೆಯಲಾಗುವುದು. ಈವರೆಗೂ ದಸರಾ ಉದ್ಘಾಟಕರು ಅಂತಿಮಗೊಂಡಿಲ್ಲ ಎಂದರು.
ತಾತ್ಕಾಲಿಕ ಶಾಲೆ: ತಾತ್ಕಾಲಿಕ ಶಾಲೆಯಲ್ಲಿ ವಿವಿಧ ಆನೆ ಶಿಬಿರಗಳಿಂದ ಆಗಮಿಸಿರುವ 18 ಮಕ್ಕಳಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗಬಾರೆಂದು ಶಾಲೆ ಆರಂಭಿಸಿದ್ದೇವೆ. ಹಿರಿಯ ಐವರು ಶಿಕ್ಷಕರನ್ನು ನಿಯೋಜಿಸಲಾಗಿದೆ. ಪುಸ್ತಕ, ಸಮವಸ್ತ್ರ, ಶೈಕ್ಷಣಿಕ ಪರಿಕರ ನೀಡಿದ್ದೇವೆ ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಾರಾಧ್ಯ ತಿಳಿಸಿದರು. ಪ್ರತಿ ವರ್ಷ ಟೆಂಡ್ ಶಾಲೆ ಆರಂಭಿಸಲಾಗುತ್ತಿತ್ತು. ಈ ವರ್ಷ ಅರಮನೆ ಮಂಡಲಿ ಸಹಕಾರದೊಂದಿಗೆ ಆನೆ ಶಿಬಿರದ ಪಕ್ಕದಲ್ಲಿರುವ ಕಟ್ಟಡದಲ್ಲಿ ಶಾಲೆ ಆರಂಭಿಸಿದ್ದೇವೆ. ಪಠ್ಯದ ಜತೆಗೆ ಆಟೋಟಗಳು, ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಇಸ್ಕಾನ್‌ನಿಂದ ಮಧ್ಯಾಹ್ನದ ಬಿಸಿಯೂಟ ಕೊಡಲಾಗುವುದು ಎಂದು ತಿಳಿಸಿದರು.
ಪಂಚಕರ್ಮ ಚಿಕಿತ್ಸಾ ಗಟಕ ಉದ್ಘಾಟನೆ: ಅರಮನೆ ಆವರಣದಲ್ಲಿ ಮಾವುತರು ಮತ್ತು ಕಾವಾಡಿಗಳ ಆರೋಗ್ಯದ ದೃಷ್ಟಿಯಿಂದ ಆಯುಷ್ ಇಲಾಖೆಯಿಂದ ತೆರೆದಿರುವ ತಾತ್ಕಾಲಿಕ ಪಂಚಕರ್ಮ ಚಿಕಿತ್ಸೆ ಹಾಗೂ ಹೋರ ರೋಗಿ ಚಿಕಿತ್ಸಾ ಘಟಕವನ್ನು ಸಚಿವ ಸೋಮಶೇಖರ್ ಉದ್ಘಾಟಿಸಿದರು. ಈ ವೇಳೆ ಚಿಕಿತ್ಸಾ ವಿಧಾನದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು, ಮಾವುತರು ಮತ್ತು ಕಾವಾಡಿಗಳಷ್ಟೇ ಅಲ್ಲದೆ, ಅವರ ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವಂತೆ ಸಲಹೆ ನೀಡಿದರು.
ಜಿಪಂ ಸಿಇಒ ಪೂರ್ಣಿಮಾ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಡಿಸಿಎಫ್ ವಿ.ಕರಿಕಾಳನ್, ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಬಿಜೆಪಿ ಮುಖಂಡ ಅನಿಲ್‌ಥಾಮಸ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ವಸಂತಕುಮಾರ್, ಪ್ರಭಾಕರ್ ಸಿಂಧ್ಯಾ ಮುಂತಾದವರು ಭಾಗವಹಿಸಿದ್ದರು.