ಮೈಸೂರು: ವಿಧಾನಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ ಆಗಿದೆ. ಈಗಾಗಲೇ ಪಟ್ಟಿಯನ್ನು ಕಳುಹಿಸಲಾಗಿದ್ದು, ನಾಳೆ ಅಥವಾ ನಾಡಿದ್ದು ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ವಿಧಾನಪರಿಷತ್ ಚುನಾವಣೆಗೆ ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆ ಮಾಡಲಿದೆ. 25ಕ್ಕೆ 25ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಟ್ ಕಾಯಿನ್ ಪ್ರಕರಣದಲ್ಲಿ ಸಿಎಂ ತಲೆದಂಡ ಎಂದು ಹೇಳಿದ ಪ್ರಿಯಾಂಕ್ ಖರ್ಗೆಯವರ ಮಾತಿಗೆ -ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಗಳು ಈ ಬಗ್ಗೆ ದೆಹಲಿಯಲ್ಲಿ ಉತ್ತರ ನೀಡಿದ್ದಾರೆ. ಪ್ರಕರಣ ಸಂಬಂಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ತನಿಖೆ ಬಳಿಕ ಸತ್ಯಾಂಶ ಹೊರಬರುತ್ತದೆ. ಇದಕ್ಕೂ ಮುನ್ನವೇ ಸಿಎಂ ಬದಲಾವಣೆ ಆಗ್ತಾರೆ ಅಂತ ಪ್ರಿಯಾಂಕ್ ಖರ್ಗೆಗೆ ಕನಸು ಬಿದ್ದಿದ್ಯಾ.!? ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಬಸವರಾಜ ಬೊಮ್ಮಾಯಿಯವರು ಅವಧಿಯನ್ನು ಪೂರೈಸುತ್ತಾರೆ. ಈ ಬಗ್ಗೆ ಮಾತನಾಡುವಷ್ಟು ದೊಡ್ಡಮಟ್ಟಕ್ಕೆ ಪ್ರಿಯಾಂಕ್ ಖರ್ಗೆ ಬೆಳೆದಿಲ್ಲ. ಪ್ರಿಯಾಂಕ್ ಖರ್ಗೆ ಅವರ ಅಪ್ಪ ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕರು. ಇವನೊಬ್ಬ ಜೂನಿಯರ್ ಗೆ ಜೂನಿಯರ್. ಇವನ ಹೇಳಿಕೆಗೆ ಪ್ರತಿಕ್ರಿಯೆ ನೀಡೋಕೆ ಹೋಗಲ್ಲ ಎಂದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಹಾಗೂ ಸಿದ್ದರಾಮಯ್ಯ ಸಮಾಗಮ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹಳೇ ಸ್ನೇಹಿತರು ಒಂದು ಕಡೆ ಸೇರಿದ್ದಾರೆ. ಈ ವೇಳೆ ಹಳೆಯ ಲವ್ ಹೊರಗೆ ಬಂದಿದೆ. ಇಬ್ಬರು ಒಂದೇ ವೇದಿಕೆ ಹಂಚಿಕೊಂಡ್ರು ಅಂದ್ರೆ ಅವರು ಪಕ್ಷ ಸೇರ್ತಾರೆ ಅಂತಲ್ಲ. ಇಬ್ಬರು ಪರಸ್ಪರ ಎದುರಾಳಿಗಳು. ವೇದಿಕೆ ಕಾರ್ಯಕ್ರಮದಲ್ಲಿ ಒಂದಾಗಿದ್ದಾರೆ ಅಷ್ಟೇ. ಈ ವೇಳೆ ಅವರ ಅವರ ಲವ್ ಹೇಳಿದ್ದಾರೆ ಅಷ್ಟೇ. ನಾವುಗಳು ಹಲವು ಬಾರಿ ಕಾರ್ಯಕ್ರಮಗಳಲ್ಲಿ ಸೇರ್ತೇವೆ. ಹಾಗಂತ ಬಿಜೆಪಿಗೆ ಬರ್ತಾರ ಇಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.