Advertisement
1962ರಲ್ಲಿ ಸಬ್ ಡಿವಿಷನ್ ಆಸ್ಪತ್ರೆಯಾಗಿ ಆರಂಭಗೊಂಡ ಅಜ್ಜರಕಾಡು ಆಸ್ಪತ್ರೆ ವಾಸ್ತವವಾಗಿ ಇಂದಿಗೂ ಜಿಲ್ಲಾಸ್ಪತ್ರೆ ದರ್ಜೆಯ ಸೌಲಭ್ಯ ಹೊಂದಿಲ್ಲ. 1997ರಲ್ಲಿ ಉಡುಪಿ ಜಿಲ್ಲೆ ರಚನೆಯಾದ ಬಳಿಕ ನಾಮಫಲಕದಲ್ಲಿ ಮಾತ್ರ ಜಿಲ್ಲಾಸ್ಪತ್ರೆ ಎಂದಿದೆ. ಸೌಲಭ್ಯಗಳು ತಾಲೂಕು ಮಟ್ಟದ್ದಾಗಿಯೇ ಇವೆ.
ದಾನಿಗಳ ನೆರವಿನಿಂದ ಕೆಲವು ಸವಲತ್ತು ಒದಗಿಸಲಾಗಿದ್ದರೂ ವೈದ್ಯರು, ಸಿಬಂದಿಯ ಕೊರತೆ ತೀವ್ರವಾಗಿದೆ. ಪ್ರಸ್ತುತ ದಿನವೊಂದಕ್ಕೆ ಸುಮಾರು 890ರಿಂದ 900 ಮಂದಿ ರೋಗಿಗಳು ಹೊರರೋಗಿ ವಿಭಾಗಕ್ಕೆ ಬರುತ್ತಾರೆ. ಆಸ್ಪತ್ರೆಯಲ್ಲಿ ಇರುವುದು 124 ಹಾಸಿಗೆಗಳು ಮಾತ್ರ. ಆದರೆ ಅನಿವಾರ್ಯವಾಗಿ 160ರಷ್ಟು ರೊಗಿಗಳನ್ನು ದಾಖಲಿಸಿಕೊಳ್ಳಲಾಗಿದೆ. ಇರುವ ವೈದ್ಯರು, ಸಿಬಂದಿಯ ಗರಿಷ್ಠ ಸೇವೆಯಿಂದ ಕೆಲವು ಸೇವೆಗಳು ಉತ್ತಮ ಮಟ್ಟದಲ್ಲಿ ದೊರೆಯುತ್ತಿದ್ದರೂ ಜಿಲ್ಲಾಸ್ಪತ್ರೆ ದರ್ಜೆಗೆ ಏರದಿದ್ದರೆ ಸಾರ್ವಜನಿಕರಿಗೆ ಅಗತ್ಯ ಸೇವೆಗಳು ದೊರೆಯುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಭೇಟಿ ಮತ್ತು ವಾಸ್ತವ್ಯ ಮಹತ್ವ ಪಡೆದುಕೊಂಡಿದೆ. ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾಸ್ತವ್ಯ ಹೂಡುವುದಾಗಿ ಸಚಿವರು ಇತ್ತೀಚೆಗೆ ಘೋಷಿಸಿದ್ದರು. ಸೆ. 24ರಂದು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿ ಚಾಲನೆ ನೀಡಿದ್ದರು. ಗುರುವಾರ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ನಡೆಸುವರು.